ಹಿರಿಯ ಸಾಹಿತಿ, ಅಂಕಣಗಾರ್ತಿ, ದೂರದರ್ಶನದ ನಿವೃತ್ತ ಕಾರ್ಯಕ್ರಮ ನಿರ್ಮಾಪಕಿ ಕಮಲಾ ಹೆಮ್ಮಿಗೆ ಅವರು ಇಹಲೋಕ ತ್ಯಜಿಸಿದ್ದಾರೆ.
ಕಮಲಾ ಅವರು ಮೈಸೂರು ಜಿಲ್ಲೆಯ ಹೆಮ್ಮಿಗೆಯವರು. ಅವರು 1973ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಜಾನಪದ ವಿಷಯದಲ್ಲಿ ಎಂ.ಎ ಪದವಿ ಪಡೆದಿದ್ದರು. ಅಲ್ಲದೆ, ಸವದತ್ತಿ ಎಲ್ಲಮ್ಮ ಹಾಗೂ ದೇವದಾಸಿ ಪದ್ದತಿಯ ಮೇಲೆ ಮಹಾಪ್ರಬಂಧ ರಚಿಸಿ, ಕರ್ನಾಟಕ ವಿಶ್ವವಿದ್ಯಾಲಯದಿಂದ ಪಿಎಚ್‌ಡಿ ಪದವಿ ಪಡೆದಿದ್ದರು.
ಕಮಲಾ ಅವರು ಪಲ್ಲವಿ, ವಿಷಕನ್ಯೆ, ಮುಂಜಾನೆ ಬಂದವನು, ನೀನೆ ನನ್ನ ಆಕಾಶ, ಮರ್ಮರ, ಕರುಳ ಸಂವಾದ ಕಾವ್ಯಗಳನ್ನು ರಚಿಸಿದ್ದಾರೆ. ಬದುಕೆಂಬ ದಿವ್ಯ, ಆಖ್ಯಾನ, ಕಿಚ್ಚಿಲ್ಲದ ಬೇಗೆ ಎಂಬ ಕಾದಂಬರಿಗಳನ್ನು ಬರೆದಿದ್ದಾರೆ. ಅಲ್ಲದೆ, ಮಾಘ ಮಾಸದ ದಿನ, ಬಿಸಿಲು ಮತ್ತು ಬೇವಿನ ಮರ, ನಾನು, ಅವನು ಮತ್ತು ಅವಳು, ಹನ್ನೊಂದು ಕಥೆಗಳು – ಸಣ್ಣಕತೆಗಳನ್ನು ರಚಿಸಿದ್ದಾರೆ.
ಅವರ ಸಾಹಿತ್ಯ ಕ್ಷೇತ್ರದ ಸಾಧನೆಗಾಗಿ 1991ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಹಾಗೂ ಕೆಎಸ್‌ಎನ್ ಪ್ರಶಸ್ತಿ ಸೇರಿದಂತೆ ಹಲವಾರು ಗೌರವ, ಪ್ರಶಸ್ತಿಗಳು ಸಂದಿವೆ.