ಅಮೆರಿಕದಲ್ಲಿ ಆಯೋಜಿಸಲಾಗಿರುವ ಕಾರ್ಯಕ್ರಮವೊಂದಕ್ಕೆ ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾ ಮೂರ್ತಿ ಅವರು ಆಗಮಿಸಲಿದ್ದಾರೆ ಎಂದು ಸುಳ್ಳು ಹೇಳಿ, ಅವರ ಫೋಟೊ ಬಳಸಿ ವಂಚಿಸಿದ ಇಬ್ಬರು ಮಹಿಳೆಯರ ವಿರುದ್ಧ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ಬಂಧಿಸಲಾಗಿದೆ.
ಈ ಬಗ್ಗೆ ಸುಧಾ ಮೂರ್ತಿ ಅವರ ಕಾರ್ಯನಿರ್ವಾಹಕ ಸಹಾಯಕಿ ಮಮತಾ ಸಂಜಯ್ ಶುಕ್ರವಾರ ನಗರದ ಜಯನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಬಂಧಿತ ಆರೋಪಿಗಳನ್ನು ಲಾವಣ್ಯ ಮತ್ತು ಶೃತಿ ಎಂದು ಗುರುತಿಸಲಾಗಿದೆ. ಸುಧಾಮೂರ್ತಿ ಹೆಸರು ಬಳಸಿಕೊಂಡು ಈ ಇಬ್ಬರು ಆರೋಪಿಗಳು ಅಮೆರಿಕದಲ್ಲಿ ಹಣ ಸಂಗ್ರಹಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಏಪ್ರಿಲ್ 5ರಂದು ಉತ್ತರ ಕ್ಯಾಲಿಫೋರ್ನಿಯಾದ ಕನ್ನಡ ಕೂಟದ (ಕೆಕೆಎನ್‌ಸಿ) 50 ನೇ ವಾರ್ಷಿಕೋತ್ಸವದಲ್ಲಿ ಭಾಗವಹಿಸಲು ಸುಧಾ ಮೂರ್ತಿ ಅವರಿಗೆ ಇ-ಮೇಲ್ ಮೂಲಕ ಆಹ್ವಾನಿಸಲಾಗಿತ್ತು. ಸೆಪ್ಟೆಂಬರ್ 26ರಂದು ಕಾರ್ಯಕ್ರಮ ನಿಗದಿ ಮಾಡಲಾಗಿತ್ತು. ಆ ದಿನದಂದು ಕಾರ್ಯಕ್ರಮದಲ್ಲಿ ಭಾಗಿಯಾಗಲು ಆಗದ ಕಾರಣ ಸುಧಾಮೂರ್ತಿ ಅವರು ಇ-ಮೇಲ್ ಮೂಲಕ ಕಾರ್ಯಕ್ರಮಕ್ಕೆ ಹಾಜರಾಗಲು ಸಾಧ್ಯವಿಲ್ಲ ಎಂದು ಏಪ್ರಿಲ್ 26ರಂದು ಕೂಟಕ್ಕೆ ತಿಳಿಸಿದ್ದರು.
ಆದರೆ, ಆರೋಪಿಗಳು ಸುಧಾ ಮೂರ್ತಿಯವರು ಅಮೆರಿಕಕ್ಕೆ ಆಗಮಿಸಲಿದ್ದಾರೆ. ಹಾಗಾಗಿ, ‘ಮೀಟ್ ಆ್ಯಂಡ್ ಗ್ರೀಟ್ ವಿತ್ ಡಾ.ಸುಧಾ ಮೂರ್ತಿ’ ಎಂಬ ಕಾರ್ಯಕ್ರಮ ಆಯೋಜಿಸಲಾಗಿದೆ. ಕಾರ್ಯಕ್ರಮದ ಹೆಸರಿನಲ್ಲಿ ಸುಧಾಮೂರ್ತಿ ಕಚೇರಿ ಹೆಸರು ಬಳಕೆ ಮಾಡಲಾಗಿದೆ. ಸುಧಾ ಮೂರ್ತಿ ಅವರ ಫೋಟೊ ಬಳಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಲಾಗಿದೆ, ಅಲ್ಲದೇ, ಆರೋಪಿಗಳಾದ ಶೃತಿ ಹಾಗೂ ಲಾವಣ್ಯ ಅವರು ಒಂದು ಟಿಕೆಟ್‌ಗೆ 40 ಡಾಲರ್ ರೂ.ನಂತೆ ಪಡೆದು ಜನರನ್ನು ವಂಚಿಸಿದ್ದಾರೆ ಎಂದು ಕಾರ್ಯನಿರ್ವಾಹಕ ಸಹಾಯಕಿ ಮಮತಾ ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಅನುಮಾನಗೊಂಡು, ಉತ್ತರ ಕ್ಯಾಲಿಫೋರ್ನಿಯಾದ ಕನ್ನಡ ಕೂಟದ (ಕೆಕೆಎನ್‌ಸಿ) ಸಂಘಟಕರನ್ನು ಸಂಪರ್ಕಿಸಿ ವಿಚಾರಿಸಿದಾಗ ಸುಧಾ ಮೂರ್ತಿ ಆಪ್ತ ಸಹಾಯಕಿ ಎಂದು ಹೇಳಿಕೊಂಡು ಅವರು ಕಾರ್ಯಕ್ರಮಕ್ಕೆ ಭಾಗವಹಿಸುತ್ತಾರೆ ಎಂದು ಖಚಿತಪಡಿಸಿದ್ದಾರೆ ಎಂದು ಸಂಘಟಕರು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬಿಬಿಎಂಪಿ ಕಸದ ಲಾರಿ ಅವೈಜ್ಞಾನಿಕ ಪಾರ್ಕಿಂಗ್; ಬೈಕ್ ಸವಾರ ಸಾವು
ಆರೋಪಿ ಲಾವಣ್ಯ ತಾನು ಇನ್ಫೋಸಿಸ್ ಫೌಂಡೇಶನ್ ಜೊತೆ ಸಂಪರ್ಕ ಹೊಂದಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ಆಗಸ್ಟ್ ಮೊದಲ ವಾರ ಸುಧಾಮೂರ್ತಿ ಅವರು ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ ಎಂದು ತಿಳಿಸಿದ್ದಾರೆ.
ಆದರೆ ಈ ಬಗ್ಗೆ ಸುಧಾ ಮೂರ್ತಿ ಅವರಿಗೆ ಮಾಹಿತಿ ಇರಲಿಲ್ಲ. ವಂಚನೆ ಬಗ್ಗೆ ತಿಳಿಯುತ್ತಿದ್ದಂತೆ ಅವರ ಆಪ್ತ ಸಹಾಯಕಿ ದೂರು ದಾಖಲಿಸಿದ್ದಾರೆ.
ಜಯನಗರ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಐಪಿಸಿ ಸೆಕ್ಷನ್ 419 ಮತ್ತು 420 (ವಂಚನೆ), ಮತ್ತು ಐಟಿ ಕಾಯ್ದೆಯ 66 ಡಿ ಮತ್ತು 66 ಸಿ (ವ್ಯಕ್ತಿಯಿಂದ ವಂಚನೆ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.