ಖಾಸಗಿ ವಲಯಗಳು ಸ್ವಯಂ ಪ್ರೇರಿತವಾಗಿ ಕರ್ನಾಟಕದಲ್ಲಿ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸಲು 500 ಕೋಟಿ ರೂಪಾಯಿಗೂ ಅಧಿಕ ಹೂಡಿಕೆ ಮಾಡಲು ಬದ್ಧವಾಗಿದ್ದು, ಸರ್ಕಾರವು ಅವುಗಳ ಅನುಕೂಲಕ್ಕೆ ತಕ್ಕಂತೆ ಕಾರ್ಯನಿರ್ವಹಿಸಲಿದೆ ಎಂದು ಕಾನೂನು, ಸಂಸದೀಯ ಮತ್ತು ಪ್ರವಾಸೋದ್ಯಮ ವ್ಯವಹಾರಗಳ ಸಚಿವ ಎಚ್ ಕೆ ಪಾಟೀಲ್ ಹೇಳಿದರು.
ಬೆಂಗಳೂರಿನಲ್ಲಿ ಡಿಸೆಂಬರ್ 14 ರಿಂದ 16 ರವರೆಗೆ ನಡೆಯಲಿರುವ ‘ದಕ್ಷಿಣ ಭಾರತ್ ಉತ್ಸವ’ಕ್ಕೆ ಮುನ್ನ ಪೂರ್ವ ಕಿರು ಕಾರ್ಯಕ್ರಮದಲ್ಲಿ ಮಾತನಾಡಿದರು.
“ರಾಜ್ಯದಲ್ಲಿ ಸುಮಾರು 550 ಸ್ಮಾರಕಗಳನ್ನು ರಕ್ಷಿಸಲು, ಸಂರಕ್ಷಿಸಿ ಅಭಿವೃದ್ಧಿಪಡಿಸಲು ಸರ್ಕಾರ ಯೋಜನೆಯನ್ನು ರೂಪಿಸಿದ್ದು, ಇಷ್ಟು ಸ್ಮಾರಕಗಳು ಖಾಸಗಿ ವಲಯಗಳಿಗೆ ದತ್ತು ಸ್ವೀಕಾರಕ್ಕೆ ಲಭ್ಯವಿದೆ. ಸ್ಮಾರಕಗಳು, ದೇವಾಲಯಗಳು, ಚರ್ಚ್‌ಗಳು, ಮಸೀದಿಗಳು ಮತ್ತು ಇತರ ಪಾರಂಪರಿಕ ಸ್ಥಳಗಳಾಗಿರಬಹುದು ಅವುಗಳನ್ನು ಪ್ರವಾಸೋದ್ಯಮಕ್ಕೆ ತೆರೆಯಲಾಗುವುದು. ಈ ಮೂಲಕ ರಾಜ್ಯದಲ್ಲಿ ಹೂಡಿಕೆ ಮತ್ತು ಉದ್ಯೋಗ ಸೃಷ್ಟಿ ಅವಕಾಶಗಳು ಹೆಚ್ಚು ಸೃಷ್ಟಿಯಾಗುತ್ತವೆ. ಈ ವಿನೂತನ ಕಾರ್ಯಕ್ರಮವನ್ನು ಸೆಪ್ಟೆಂಬರ್ 25 ರಂದು ಪ್ರಾರಂಭಿಸಲಾಗುವುದು” ಎಂದರು.
ರಾಜ್ಯದಲ್ಲಿ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಸ್ವಯಂ ಪ್ರೇರಣೆಯಿಂದ ಹೂಡಿಕೆ ಮಾಡುವ ಖಾಸಗಿ ವಲಯದ ನಿರ್ಧಾರವನ್ನು ಶ್ಲಾಘಿಸಿದ ಅವರು, “ಕೆಲವರು ಇದರಿಂದ ಲಾಭಗಳಿಸದಿದ್ದರೂ, ಪ್ರಪಂಚದ ಜನರಿಗೆ ಅನುಭವ ಸಿಕ್ಕಿ ಉಪಯೋಗವಾಗಲಿದೆ. ಈಗ ಕರ್ನಾಟಕವು ಯುನೆಸ್ಕೋದಿಂದ ಮಾನ್ಯತೆ ಪಡೆದಿರುವ ನಾಲ್ಕು ಪಾರಂಪರಿಕ ತಾಣಗಳನ್ನು ಹೊಂದಿದ್ದು, ಮುಂದಿನ ದಿನಗಳಲ್ಲಿ ಅವುಗಳಿಗೆ ಭೇಟಿ ನೀಡುವವರ ಸಂಖ್ಯೆ ಹೆಚ್ಚಾಗಲಿದೆ” ಎಂದರು.
“ಯುನೆಸ್ಕೊ ಈ ವರ್ಷ ಗುರುತಿಸಿರುವ ನಾಲ್ಕನೇ ತಾಣವೆಂದರೆ ಹೊಯ್ಸಳರ ಬೇಲೂರು, ಹಳೇಬೀಡು ಮತ್ತು ಸೋಮನಾಥಪುರ. ಈ ಹಿಂದೆ ಹಂಪಿ, ಪಟ್ಟದಕಲ್ಲು ಮತ್ತು ಪಶ್ಚಿಮ ಘಟ್ಟಗಳನ್ನು ಯುನೆಸ್ಕೊ ವಿಶ್ವ ಪಾರಂಪರಿಕ ತಾಣಗಳಲ್ಲಿ ಗುರುತಿಸಿತ್ತು. ಸವದತ್ತಿ ದೇವಸ್ಥಾನವು ವಾರ್ಷಿಕವಾಗಿ 1.25 ಕೋಟಿಗೂ ಅಧಿಕ ಪ್ರವಾಸಿಗರನ್ನು ಆಕರ್ಷಿಸಿದೆ. ಕರ್ನಾಟಕವು ಸಾಂಸ್ಕೃತಿಕ ಪರಂಪರೆ, ಮನೋಹರ ಪರಿಸರ ಪ್ರೇಕ್ಷಣೀಯ ಸ್ಥಳಗಳು, ಸಾಹಸ ಅನ್ವೇಷಣೆ ಕೇಂದ್ರಗಳು, ಸಮುದ್ರ ಸಾಗರ ಪ್ರವಾಸೋದ್ಯಮ, ತೀರ್ಥಕ್ಷೇತ್ರ ಹೀಗೆ ಹಲವು ಪ್ರವಾಸೋದ್ಯಮ ಮಾರ್ಗಗಳನ್ನು ಹೊಂದಿರುವುದು ರಾಜ್ಯಕ್ಕೆ ಅನುಕೂಲಕರವಾಗಿದೆ” ಎಂದು ಹೇಳಿದರು.
ಕರ್ನಾಟಕದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕಪಿಲ್ ಮೋಹನ್ ಅವರು ‘ದಕ್ಷಿಣ ಭಾರತ ಉತ್ಸವ’ದ ಪರಿಕಲ್ಪನೆಯನ್ನು ಸ್ವಾಗತಿಸುತ್ತಾ ಮಾತನಾಡಿ, “ಒಟ್ಟಾರೆ ಪ್ರವಾಸೋದ್ಯಮವನ್ನು ಉತ್ತೇಜಿಸಲು ದಕ್ಷಿಣ ಭಾರತದ ರಾಜ್ಯಗಳು ಒಗ್ಗೂಡುವ ಅಗತ್ಯವಿದೆ. ನಾವು ಒಟ್ಟಿಗೆ ಕೆಲಸ ಮಾಡಿ, ತಡೆರಹಿತ ಏಕೀಕೃತ ಪ್ರವಾಸೋದ್ಯಮ ಮತ್ತು ಪ್ರಯಾಣ ಉದ್ಯಮವನ್ನು ತರೋಣ” ಎಂದು ಹೇಳಿದರು.
ಪಶ್ಚಿಮ ಘಟ್ಟಗಳು, ರಾಜ್ಯಗಳಲ್ಲಿ ವ್ಯಾಪಿಸಿರುವ ದಕ್ಷಿಣ ಪ್ರಸ್ಥಭೂಮಿ ಮತ್ತು ಅನೇಕ ಪಾರಂಪರಿಕ ತಾಣಗಳು ಪ್ರವಾಸೋದ್ಯಮ ಸ್ನೇಹಿ ಯೋಜನೆಗಳಿಗೆ ಹೇಗೆ ಸಾಮರ್ಥ್ಯವನ್ನು ಹೊಂದಿವೆ ಎಂಬುದನ್ನು ಉಲ್ಲೇಖಿಸಿ ವಿವರಿಸಿದರು.
ಸ್ವಾಗತ ಭಾಷಣದಲ್ಲಿ ಎಫ್‌ಕೆಸಿಸಿಐ ಅಧ್ಯಕ್ಷ ಬಿ ವಿ ಗೋಪಾಲ್ ರೆಡ್ಡಿ ಮಾತನಾಡಿ, “ಡಿಸೆಂಬರ್ 14 ರಿಂದ 16 ರವರೆಗೆ ಬೆಂಗಳೂರು ಅರಮನೆ ಮೈದಾನದಲ್ಲಿ ಏರ್ಪಡಲಿರುವ ಉದ್ದೇಶಿತ ‘ದಕ್ಷಿಣ ಭಾರತ ಉತ್ಸವ’ವು ದಕ್ಷಿಣ ಭಾರತದ ಶ್ರೀಮಂತ ಸಾಂಸ್ಕೃತಿಕ, ಐತಿಹಾಸಿಕ ಪರಂಪರೆಯನ್ನು ಪ್ರದರ್ಶಿಸುತ್ತದೆ. ಪ್ರವಾಸೋದ್ಯಮದಲ್ಲಿ ಮುಕ್ತ ಹೂಡಿಕೆ ಅವಕಾಶಗಳನ್ನು ನೀಡುತ್ತದೆ. ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಕೇರಳ ಮತ್ತು ಪುದುಚೇರಿ ದಕ್ಷಿಣ ರಾಜ್ಯಗಳಲ್ಲಿ ಪ್ರವಾಸೋದ್ಯಮ ಸಂಬಂಧಿತ ಚಟುವಟಿಕೆಗಳಲ್ಲಿ ಹೂಡಿಕೆ ಮಾಡಲು ‘ಉತ್ಸವ’ ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ವೇದಿಕೆಯಾಗಿದೆ. ಹೀಗಾಗಿ ಇದರಿಂದ ರಾಜ್ಯಗಳಿಗೆ ಆದಾಯವನ್ನು ತರುವುದಲ್ಲದೆ ಉದ್ಯೋಗಾವಕಾಶಗಳನ್ನು ಸೃಷ್ಟಿಸಬಲ್ಲದು” ಎಂದರು.
ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ದಲಿತರ ಬೀದಿಯಲ್ಲಿ ಮೂಲ ಸೌಕರ್ಯ ಮರೀಚಿಕೆ; ಜನಪ್ರತಿನಿಧಿಗಳ ನಿರ್ಲಕ್ಷ್ಯ
ಎಫ್‌ಕೆಸಿಸಿಐ ಪ್ರವಾಸೋದ್ಯಮ ಸಮಿತಿಯ ಅಧ್ಯಕ್ಷ ಜಿ ಕೆ ಶೆಟ್ಟಿ ಮಾತನಾಡಿ, “ದಕ್ಷಿಣ ರಾಜ್ಯಗಳಲ್ಲಿ ‘ದಕ್ಷಿಣ ಭಾರತ ಉತ್ಸವ’ವನ್ನು ಸರದಿಯ ಆಧಾರದ ಮೇಲೆ ನಡೆಸಲಾಗುವುದು. ದಕ್ಷಿಣ ಭಾರತದಲ್ಲಿ ಪ್ರವಾಸೋದ್ಯಮವನ್ನು ಸುಧಾರಿಸಲು ಎಫ್‌ಕೆಸಿಸಿಐ ಸಕ್ರಿಯವಾಗಿ ಭಾಗವಹಿಸುತ್ತದೆ. ದಕ್ಷಿಣದ ರಾಜ್ಯಗಳ ನಡುವಿನ ಸಂಪರ್ಕವನ್ನು ಸುಧಾರಿಸುವ ಮೂಲಕ, ಪ್ರವಾಸಿಗರ ಸಂಚಾರವನ್ನು ಹೆಚ್ಚಿಸುತ್ತದೆ, ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ ಮತ್ತು ವಿದೇಶಿ ವಿನಿಮಯವನ್ನು ತರುತ್ತದೆ” ಎಂದು ವಿವರಿಸಿದರು.