ಹೊಸ ಸಂಸತ್ ಭವನ ನಿರ್ಮಾಣಕ್ಕೆ ಯುಪಿಎ ಸರ್ಕಾರ 2012ರಲ್ಲಿ ಯೋಜನೆ ರೂಪಿಸಿತ್ತು. 3,000 ಕೋಟಿ ರೂ. ವೆಚ್ಚದಲ್ಲಿ ಕಟ್ಟಡ ನಿರ್ಮಾಣಕ್ಕೆ ಅನುಮೋದನೆ ನೀಡಿತ್ತು. ಆದರೆ, ಮೋದಿ ಸರ್ಕಾರ ಕೇವಲ 970 ಕೋಟಿ ರೂ.ಗಳಲ್ಲಿ ನಿರ್ಮಾಣ ಮಾಡಿದೆ ಎಂಬ ಪೋಸ್ಟ್ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಹಲವರು ಈ ಪೋಸ್ಟ್‌ಅನ್ನು ಹಂಚಿಕೊಂಡಿದ್ದಾರೆ. ಪೋಸ್ಟ್‌ನಲ್ಲಿ ಹೇಳಲಾಗಿರುವ ಪ್ರತಿಪಾದನೆ ನಿಜವೇ ಪರಿಶೀಲಿಸೋಣ.
ಪ್ರತಿಪಾದನೆ: 2012ರಲ್ಲಿ ಯುಪಿಎ ಸರ್ಕಾರ ಹೊಸ ಸಂಸತ್ ಭವನ ನಿರ್ಮಾಣಕ್ಕೆ 3,000 ಕೋಟಿ ರೂ. ಮೊತ್ತದ ಯೋಜನೆಯನ್ನು ಅನುಮೋದಿಸಿತ್ತು.
ಸತ್ಯ: 2012ರಲ್ಲಿ ಅಂದಿನ ಲೋಕಸಭಾ ಸ್ಪೀಕರ್ ಮೀರಾ ಕುಮಾರ್ ಅವರು ಹೊಸ ಸಂಸತ್ ಭವನ ನಿರ್ಮಾಣದ ಪ್ರಸ್ತಾವನೆಗೆ ಅನುಮೋದನೆ ನೀಡಿರುವುದು ನಿಜವಾದರೂ, ಆ ವೇಳೆ ಯೋಜನಾ ವೆಚ್ಚ ಮತ್ತು ಹಣ ಹಂಚಿಕೆಯ ಬಗ್ಗೆ ಯಾವುದೇ ಚರ್ಚೆಗಳು ನಡೆದಿರಲಿಲ್ಲ. ಹಣಕಾಸಿಗೆ ಸಂಬಂಧಿಸಿದ ಯಾವುದೇ ಪ್ರಸ್ತಾವನೆಯನ್ನು ಅಂದಿನ ಸರ್ಕಾರ ಸಿದ್ದಪಡಿಸಿರಲಿಲ್ಲ. ಆದರೆ, ಕೆಲವರು ಯುಪಿಎ ಆಡಳಿತಾವಧಿಯಲ್ಲಿ ಹೊಸ ಸಂಸತ್ ಕಟ್ಟಡಕ್ಕೆ 3,000 ಕೋಟಿ ರೂ. ವೆಚ್ಚದ ಯೋಜನೆ ರೂಪಿಸಲಾಗಿತ್ತು ಎಂದು ಕಪೋಲ ಕಲ್ಪಿತ ವೆಚ್ಚವನ್ನು ಹಬ್ಬಿಸಲಾಗಿದೆ. ಹೀಗಾಗಿ, ವೈರಲ್ ಆಗುತ್ತಿರುವ ಪೋಸ್ಟ್‌ನಲ್ಲಿನ ಪ್ರತಿಪಾದನೆ ಸುಳ್ಳಾಗಿದೆ.

ಯುಪಿಎ ಆಡಳಿತಾವಧಿಯಲ್ಲಿ ಸಂಸತ್ ಭವನದ ಪಾರಂಪರಿಕತೆ ಮತ್ತು ವೈಭವವನ್ನು ಕಾಪಾಡುವ ದೃಷ್ಟಿಯಿಂದ ಅಂದಿನ ಲೋಕಸಭಾ ಸ್ಪೀಕರ್ ಮೀರಾ ಕುಮಾರ್ ಅವರು ಎರಡು ಸಮಿತಿಗಳನ್ನು ರಚಿಸಿದ್ದರು. ಮೊದಲನೆಯದು ‘ಪಾರಂಪರಿಕ ಕಟ್ಟಡವಾಗಿ ಕ್ಯಾರೆಕ್ಟರ್ ನಿರ್ವಹಣೆ ಮತ್ತು ಸಂಸತ್ ಭವನ ಸಂಕೀರ್ಣದ ಅಭಿವೃದ್ಧಿ’ ಕುರಿತ ಜಂಟಿ ಸಂಸದೀಯ ಸಮಿತಿ (ಜೆಪಿಸಿ). ಎರಡನೆಯದು ಜೆಪಿಸಿಗೆ ಸಲಹೆಗಾರರಾಗಿ ಕಾರ್ಯನಿರ್ವಹಿಸಲು ತಾಂತ್ರಿಕ ತಜ್ಞರನ್ನು ಒಳಗೊಂಡಿರುವ ಸ್ಥಾಯಿ ತಾಂತ್ರಿಕ ಸಮಿತಿ (ಎಸ್‌ಟಿಸಿ). ಆದರೆ, ಸಮಿತಿಯ ವರದಿಗಳು ಸದ್ಯ ಲೋಕಸಭೆಯ ವೆಬ್‌ಸೈಟ್‌ನಲ್ಲಿ ಲಭ್ಯವಿಲ್ಲ.
ಜುಲೈ 2012ರಲ್ಲಿ, ಸಂಸದೀಯ ಸಿಬ್ಬಂದಿ, ಭದ್ರತಾ ಸಿಬ್ಬಂದಿ, ಮಾಧ್ಯಮ ಸಂದರ್ಶಕರು ಮತ್ತು ಸಂಸತ್ತಿನ ಚಟುವಟಿಕೆಗಳ ಸಂಖ್ಯೆಯಲ್ಲಿನ ಏರಿಕೆಯನ್ನು ಪರಿಗಣಿಸಿ, ಲೋಕಸಭೆಯ ಮಾಜಿ ಸ್ಪೀಕರ್ ಮೀರಾ ಕುಮಾರ್ ಅವರು ಹೊಸ ಸಂಸತ್ತಿನ ಕಟ್ಟಡ ನಿರ್ಮಾಣದ ಪ್ರಸ್ತಾವನೆಗೆ ಅನುಮೋದನೆ ನೀಡಿದ್ದರು.

ಅದರಂತೆ, ಮೀರಾ ಕುಮಾರ್ ಅವರ ವಿಶೇಷ ಕರ್ತವ್ಯದ ಅಧಿಕಾರಿ (ಒಎಸ್‌ಡಿ) ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯಕ್ಕೆ ಔಪಚಾರಿಕ ಪತ್ರವನ್ನು ಬರೆದರು, “ಸಂಸತ್ತಿನ ಕಟ್ಟಡವನ್ನು 1920ರ ದಶಕದಲ್ಲಿ ನಿರ್ಮಿಸಲಾಗಿದೆ. ಆ ಕಟ್ಟಡದಲ್ಲಿ 1927ರಿಂದ ಕೆಲಸ-ಕಾರ್ಯಗಳು ಆರಂಭವಾದವು. ಹೀಗಾಗಿ, ಕಟ್ಟಡವನ್ನು ಪಾರಂಪರಿಕ ಗ್ರೇಡ್-1 ಕಟ್ಟಡವೆಂದು ಘೋಷಿಸಲಾಗಿದೆ” ಎಂದು ಹೇಳಿದ್ದರು. ಅಲ್ಲದೆ, ಹೊಸ ಸಂಸತ್ ಕಟ್ಟಣ ನಿರ್ಮಾಣಕ್ಕೆ ಯೋಜನಾ ವರದಿ ರೂಪಿಸಲು ಸೂಚಿಸಿದ್ದರು.

ಆದರೆ, ಹೊಸ ಸಂಸತ್ ಭವನ ನಿರ್ಮಾಣದ ಈ ಪ್ರಯತ್ನ ಸ್ಥಗಿತಗೊಂಡಿತ್ತು. ಹಾಗಾಗಿ, ಪೋಸ್ಟ್‌ನಲ್ಲಿ ಹೇಳಿರುವಂತೆ ವೆಚ್ಚದ ಅಂದಾಜು ಮತ್ತು ಹಣ ಹಂಚಿಕೆ ಸೇರಿದಂತೆ ಯೋಜನೆಯ ವಿವರವಾದ ವರದಿಯನ್ನು ಸಿದ್ಧಪಡಿಸಲಾಗಿರಲಿಲ್ಲ. ವಾಸ್ತವವಾಗಿ, ಹೊಸ ಸಂಸತ್ತಿನ ಕಟ್ಟಡವನ್ನು ಎಲ್ಲಿ ನಿರ್ಮಿಸಬೇಕು ಎಂದೂ ಆಗ ನಿರ್ಧರಿಸಲಾಗಿರಲಿಲ್ಲ.

ಒಟ್ಟಾರೆಯಾಗಿ ಹೇಳುವುದಾದರೆ, ಯುಪಿಎ ಸರ್ಕಾರವು ಹೊಸ ಸಂಸತ್ ಭವನದ ನಿರ್ಮಾಣಕ್ಕೆ 3,000 ಕೋಟಿ ರೂ. ವೆಚ್ಚದ ಯೋಜನಾ ವರದಿಗೆ ಅನುಮೋದನೆ ನೀಡಿರಲಿಲ್ಲ.
ಸದ್ಯ, ಬಿಜೆಪಿ ಸರ್ಕಾರ ಹೊಸ ಸಂಸತ್ ಭವನವನ್ನು ಉದ್ಘಾಟಿಸಿದೆ. ಭವನ ನಿರ್ಮಾಣಕ್ಕೆ 970 ಕೋಟಿ ರೂ. ವೆಚ್ಚವಾಗುತ್ತದೆ ಎಂದು ಯೋಜನಾ ವರದಿಯಲ್ಲಿ ಹೇಳಲಾಗಿತ್ತು.ಈಗ, 1,250 ಕೋಟಿ ರೂ. ವೆಚ್ಚವಾಗಿದೆ ಎಂದು ಅಂದಾಜಿಸಲಾಗಿದೆ.