ಕಲಬುರಗಿ ಜಿಲ್ಲೆ ಸೇಡಂ ತಾಲೂಕಿನಲ್ಲಿ ಮುಖ್ಯಮಂತ್ರಿಗಳ ವಿಶೇಷ ಅನುದಾನದಡಿ ಕೈಗೊಂಡ ರಸ್ತೆ ಮತ್ತು ಯುಜಿಡಿ ಕಾಮಗಾರಿಗಳಲ್ಲಿ ಅಕ್ರಮ ನಡೆದಿರುವುದು ಕಂಡುಬಂದ ಹಿನ್ನೆಲೆಯಲ್ಲಿ ಜಿಲ್ಲಾ ಪಂಚಾಯತ್ ರಾಜ್ ಎಂಜಿನಿಯರಿಂಗ್ ವಿಭಾಗದ ಕಾರ್ಯಪಾಲಕ ಎಂಜಿನಿಯರ್ ಮತ್ತು ಇತರ ಇಬ್ಬರು ಸಹಾಯಕ ಎಂಜಿನಿಯರ್‌ಗಳನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಅಮಾನತುಗೊಳಿಸಿದೆ.
ತಾಲೂಕಿನ ಬಿಬ್ಬಳ್ಳಿ ಗ್ರಾಮದಲ್ಲಿ 2020-21ನೇ ಸಾಲಿನಲ್ಲಿ ಮುಖ್ಯಮಂತ್ರಿಗಳ ವಿಶೇಷ ಅನುದಾನದಡಿ 1 ಕೋಟಿ ರೂ.ಗಳ ವೆಚ್ಚದಲ್ಲಿ ಕೈಗೊಂಡ ರಸ್ತೆ ಮತ್ತು ಒಳಚರಂಡಿ ನಿರ್ಮಾಣ, ಬೆನಕನಳ್ಳಿ ಮತ್ತು ಉಡಗಿ ನಡುವಿನ ರಸ್ತೆ ಅಭಿವೃದ್ಧಿ ಕಾಮಗಾರಿಗಳು ಪರಿಶೀಲನೆಯಲ್ಲಿವೆ. ಕಾಮಗಾರಿ ಪೂರ್ಣಗೊಳ್ಳದಿದ್ದರೂ ಗುತ್ತಿಗೆದಾರನಿಗೆ ಬಿಲ್ ಪಾವತಿಸಲಾಗಿದ್ದು, ಕಾಮಗಾರಿಗಳಲ್ಲಿ ಅಕ್ರಮ ಎಸಗಿರುವುದು ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಮೂವರು ಎಂಜಿನಿಯರ್‌ಗಳನ್ನು ಅಮಾನತುಗೊಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ರಾಯಚೂರು | ಸರ್ಕಾರದ ವಿರುದ್ಧ ಅಣುಕು ಶವಯಾತ್ರೆ: ಜೆಡಿಎಸ್ ಜಿಲ್ಲಾಧ್ಯಕ್ಷ
ಸೇಡಂ ವಿಭಾಗದ ಪೂರ್ವ ವಿಭಾಗದ ಇಇ ಮೋನಪ್ಪ, ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಹನುಮಪ್ಪ ಆದವಾನಿ ಮತ್ತು ಕಿರಿಯ ಎಂಜಿನಿಯರ್ ಮಿರಾಜುದ್ದೀನ್ ಅವರನ್ನು ಅಮಾನತುಗೊಳಿಸಲಾಗಿದೆ.
ಈ ಬಗ್ಗೆ ಜಿಲ್ಲಾ ಪಂಚಾಯಿತಿ ಸಿಇಒ ವಿಚಾರಣೆ ನಡೆಸಿದ್ದರು. ಮೂವರೂ ತಪ್ಪಿತಸ್ಥರೆಂದು ಕಂಡುಬಂದಿದ್ದು, ವಿವರವಾದ ವರದಿಯನ್ನು ಸರ್ಕಾರಕ್ಕೆ ಕಳುಹಿಸಲಾಗಿತ್ತು. ಬಳಿಕ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತರಾಜ್ ಇಲಾಖೆ ಮೂವರು ಎಂಜಿನಿಯರ್‌ಗಳನ್ನು ಅಮಾನತು ಮಾಡಿ ಆದೇಶ ಹೊರಡಿಸಿದೆ.