- ಬಿಜೆಪಿಯೊಂದಿಗೆ ಜೆಡಿಎಸ್ ಪಕ್ಷ ಮೈತ್ರಿ ಮಾಡಿಕೊಳ್ಳುತ್ತಿರುವುದಕ್ಕೆ ಯಾರು ಅಸಮಾಧಾನ ವ್ಯಕ್ತಪಡಿಸಿಲ್ಲ.
- ಕುಮಾರಸ್ವಾಮಿರವರು ತೋರಿಸಿರುವ ಪೆಂಡ್ರೈವ್ ಟೂಸ್ ಬಾಂಬ್ ಅಲ್ಲ, ಸಮಯ ಬಂದಾಗ ತೋರಿಸ್ತಾರೆ.
ಲೋಕಸಭಾ ಚುನಾವಣೆ ವಿಷಯದಲ್ಲಿ ಬಿಜೆಪಿಯೊಂದಿಗೆ ಜೆಡಿಎಸ್ ಪಕ್ಷ ಹೊಂದಾಣಿಕೆ (ಮೈತ್ರಿ) ಮಾಡಿಕೊಳ್ಳುತ್ತಿರುವುದಕ್ಕೆ ಯಾರು ಅಸಮಾಧಾನ ವ್ಯಕ್ತಪಡಿಸಿಲ್ಲ.ಯಾವುದೇ ಅಸಮಾಧಾನವೂ ಇಲ್ಲ. ನಾವೆಲ್ಲರೂ ಒಂದಾಗಿದ್ದೇವೆ ಎಂದು ಮಾಜಿ ಸಚಿವ ಬಂಡೆಪ್ಪ ಖಾಶೆಂಪುರ್ ಸ್ಪಷ್ಟನೆ ನೀಡಿದರು.
ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಖಾಶೆಂಪುರ್ (ಪಿ) ಗ್ರಾಮದ ತಮ್ಮ ನಿವಾಸದಲ್ಲಿ ಸೋಮವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, “ಮೈತ್ರಿ ವಿಷಯದಲ್ಲಿ ದೇವೇಗೌಡರು, ಕುಮಾರಸ್ವಾಮಿರವರು ತೆಗೆದುಕೊಳ್ಳುವ ನಿರ್ಧಾರಕ್ಕೆ ನಾವೆಲ್ಲರೂ ಬದ್ಧರಾಗಿದ್ದೇವೆ ಎಂದು ಈಗಾಗಲೇ ಸ್ಪಷ್ಟವಾಗಿ ಹೇಳಿದ್ದೇವೆ. ಈ ಹಿಂದೆ ನಡೆದ ಎರಡು ಸಭೆಗಳಲ್ಲಿ ಮೈತ್ರಿಗೆ ಎಲ್ಲರೂ ಒಪ್ಪಿಗೆ ನೀಡಿದ್ದಾರೆ. ರಾಜಕೀಯದಲ್ಲಿ ಸಂದರ್ಭಾನುಸಾರ ಪಕ್ಷಗಳು ನಿರ್ಧಾರ ತೆಗೆದುಕೊಳ್ಳುತ್ತವೆ. ಅದರಂತೆ ನಮ್ಮ ಪಕ್ಷ ಕೂಡ ಎನ್ ಡಿಎ ಜೊತೆಗಿನ ಮೈತ್ರಿಯ ನಿರ್ಧಾರವನ್ನು ತೆಗೆದುಕೊಂಡಿದೆ. ಅದಕ್ಕೆ ಎಲ್ಲರೂ ಒಪ್ಪಿಗೆ ನೀಡಿದ್ದೇವೆ. ದೇವೇಗೌಡರು ಮತ್ತು ಕುಮಾರಸ್ವಾಮಿರವರು ತೆಗೆದುಕೊಳ್ಳುವ ನಿರ್ಧಾರಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ. ಪಕ್ಷದಲ್ಲಿ ಒಬ್ಬಿಬ್ಬರು ಅಸಮಾಧಾನ ಹೊಂದಿರುತ್ತಾರೆ, ಅದನ್ನು ಕುಮಾರಸ್ವಾಮಿರವರು ಸರಿಪಡಿಸುತ್ತಾರೆ” ಎಂದರು.
ಕರ್ನಾಟಕದ ಒಳಿತಿಗಾಗಿ ನಾವು ಮೈತ್ರಿ ಮಾಡಿಕೊಳ್ಳುತ್ತಿದ್ದೇವೆ. ರಾಜ್ಯದ ಪರವಾಗಿ ನಮ್ಮ ಪಕ್ಷ ಧ್ವನಿ ಎತ್ತುವ ಕೆಲಸ ಮಾಡಿಕೊಂಡು ಬಂದಿದೆ. ಅದರೊಟ್ಟಿಗೆ ನಮ್ಮ ಪಕ್ಷವನ್ನು ಉಳಿಸಿ ಬೆಳಸುವ ಕೆಲಸವನ್ನು ನಾವು ಮಾಡಬೇಕಾಗಿದೆ. ಪಕ್ಷದ ರಾಜ್ಯ ಉಪಾಧ್ಯಕ್ಷರು ರಾಜೀನಾಮೆ ನೀಡಿರುವುದು ಅವರ ವೈಯಕ್ತಿಕ ಅಭಿಪ್ರಾಯವಾಗಿದೆ. ಪಕ್ಷದಲ್ಲಿ ಬಹಳಷ್ಟು ಜನ ಉಪಾಧ್ಯಕ್ಷರಿದ್ದಾರೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಬೀದರ್ | ಮಸೀದಿ ಮೇಲೆ ಭಾಗವಾಧ್ವಜ ಹಾರಿಸಿದ ನಾಲ್ವರ ಬಂಧನ
ಪೆಂಡ್ರೈವ್ ಟೂಸ್ ಬಾಂಬ್ ಅಲ್ಲ, ಸಮಯ ಬಂದಾಗ ತೋರಿಸ್ತಾರೆ:
“ಎಚ್.ಡಿ. ಕುಮಾರಸ್ವಾಮಿರವರು ತೋರಿಸಿರುವ ಪೆಂಡ್ರೈವ್ ಟೂಸ್ ಬಾಂಬ್ ಅಲ್ಲ. ಸಮಯ ಬಂದಾಗ ತೋರಿಸ್ತಾರೆ. ರಾಜಕೀಯದಲ್ಲಿ ಕುಮಾರಸ್ವಾಮಿ ಯಾವತ್ತೂ ಟೂಸ್ ಬಿಟ್ಟಿಲ್ಲ. ನಮ್ಮಲ್ಲಿ ಯಾವುದೇ ಭಿನ್ನಮತವಿಲ್ಲ. ಸಣ್ಣಪುಟ್ಟ ಭಿನ್ನಾಭಿಪ್ರಾಯಗಳಿದ್ದರೆ ಪಕ್ಕದ ವರಿಷ್ಠರು ಅದನ್ನು ಸರಿಪಡಿಸುತ್ತಾರೆ. ನಾನು ಲೋಕಸಭಾ ಟಿಕೆಟ್ ಆಕಾಂಕ್ಷಿ ಅಲ್ಲ. ಪಕ್ಷ ಸಂಘಟನೆಗಾಗಿ ರಾಜ್ಯಾದ್ಯಂತ ಪ್ರವಾಸ ಮಾಡುತ್ತೇನೆ. ಪಕ್ಷ ಸಂಘಟನೆಯ ಕೆಲಸ ಮಾಡುತ್ತೇನೆ. ಬೀದರ್ ಲೋಕಸಭಾ ಟಿಕೆಟ್ ವಿಷಯದಲ್ಲಿ ದೇವೇಗೌಡರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮೈತ್ರಿ ವಿಷಯದಲ್ಲಿ ದೇವೇಗೌಡರು, ಕುಮಾರಸ್ವಾಮಿ ಅವರ ನಿರ್ಧಾರಕ್ಕೆ ನಾನು ಬದ್ಧನಾಗಿದ್ದೇನೆ ಎಂದುಬಂಡೆಪ್ಪ ಖಾಶೆಂಪುರ್” ಹೇಳಿದರು.