ಆಯುಷ್ ಕೋರ್ಸ್ ಶುಲ್ಕವನ್ನು ಏಕಾಏಕಿ ಶೇ 25ರಷ್ಟು ಹೆಚ್ಚಿಸಿರುವ ರಾಜ್ಯ ಸರ್ಕಾರದ ನಡೆಯನ್ನು ಎಐಡಿಎಸ್‌ಓ (ಆಲ್ ಇಂಡಿಯಾ ಡೆಮಾಕ್ರಟಿಕ್ ಸ್ಟೂಡೆಂಟ್ಸ್ ಆರ್ಗನೈಸೇಶನ್) ಖಂಡಿಸಿದೆ.
ಈ ಬಗ್ಗೆ ಎಐಡಿಎಸ್‌ಓ ಜಿಲ್ಲಾ ಅಧ್ಯಕ್ಷ ಮಹಾಂತೇಶ್ ಬೀಳೂರ್ ಪತ್ರಿಕಾ ಹೇಳಿಕೆ ನೀಡಿರುವ ಅವರು, ಕೊರೊನಾದಿಂದಾ ಕಳೆದ ಐದು ವರ್ಷ ಗಳಿಂದ ಶುಲ್ಕಹೆಚ್ಚಳ. ಆದ್ದರಿಂದ ಈ ವರ್ಷ ಶುಲ್ಕ ಹೆಚ್ಚಿಸಬೇಕೆಂದು ಅನುದಾನಿತ ಮತ್ತು ಅನುದಾನ ರಹಿತ ಖಾಸಗಿ ಆಯುಷ್ ವೈದ್ಯಕೀಯ ಮಹಾ ವಿದ್ಯಾಲಯಗಳು ಸರ್ಕಾರಕ್ಕೆ ಮನವಿ ಸಲ್ಲಿಸಿವೆ.
ಈ ಹಿನ್ನೆಲೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆದೇಶ ಹೊರಡಿಸಿದೆ. ಸರ್ಕಾರದ ಈ ನಡೆಯನ್ನು ಎಐಡಿಎಸ್ಓ ತೀವ್ರವಾಗಿ ಖಂಡಿಸುತ್ತದೆ. ಖಾಸಗಿ ಕಾಲೇಜುಗಳಲ್ಲಿ ಸರ್ಕಾರಿ ಕೋಟಾ ಅಡಿಯಲ್ಲಿ ಬರುವ ಕೋರ್ಸ್ ಶುಲ್ಕವನ್ನು ₹60,000ದಿಂದ ₹75,000ಕ್ಕೆ ಏರಿಸಲಾಗಿದೆ. ಈ ರೀತಿ ಒಂದೇ ಏಟಿಗೆ ಶೇ.25ರಷ್ಟು ಶುಲ್ಕ ಹೆಚ್ಚಿಸಿ ಬಡ ಪ್ರತಿಭಾವಂತ ವಿದ್ಯಾರ್ಥಿಗಳ ವೃತ್ತಿಪರ ಶಿಕ್ಷಣದ ಕನಸಿಗೆ ತಣ್ಣೀರೆರಚಿರುವುದು ಸರ್ಕಾರದ ವಿದ್ಯಾರ್ಥಿ ವಿರೋಧಿ ಧೋರಣೆಯನ್ನು ಎತ್ತಿ ತೋರಿಸುತ್ತದೆ ಎಂದು ಆರೋಪಿಸಿದ್ದಾರೆ.
ಈಗಾಗಲೇ ಆರ್ಥಿಕವಾಗಿ ತೀವ್ರ ಸಂಕಷ್ಟದಲ್ಲಿರುವ ಸಾಮಾನ್ಯರಿಗೆ ಇದು ಗಾಯದ ಮೇಲೆ ಬರೆ ಎಳೆದಂತಿದೆ. ಸಂಕಷ್ಟದ ಸಮಯದಲ್ಲಿ ವಿದ್ಯಾರ್ಥಿಗಳ ಶಿಕ್ಷಣದ ಕನಸಿಗೆ ನೆರವಾಗಬೇಕಾದ ಸರ್ಕಾರವು, ಖಾಸಗಿ ಲಾಭಿಗಳ ಒತ್ತಡಕ್ಕೆ ಮಣಿದು ಶುಲ್ಕ ವನ್ನು ಹೆಚ್ಚಿಸಿರುವುದು ನಾಚಿಕೆಗೇಡಿನ ಸಂಗತಿ ಎಂದು ಅವರು ವಾಗ್ದಾಳಿ ಮಾಡಿದರು.
ಈ ಹಿನ್ನೆಲೆ ಬಡ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಶಿಕ್ಷಣದಿಂದ ವಂಚಿತರನ್ನಾಗಿಸುವ ಈ ಶುಲ್ಕ ಹೆಚ್ಚಳವನ್ನು ಈ ಕೂಡಲೇ ರಾಜ್ಯ ಸರ್ಕಾರವು ಹಿಂಪಡೆಯಬೇಕೆಂದು ಎಐಡಿಎಸ್‌ಓ ಜಿಲ್ಲಾ ಸಮಿತಿಯು ಆಗ್ರಹಿಸುತ್ತದೆ ಎಂದಿದ್ದಾರೆ.