ರಾಜ್ಯಕ್ಕೆ ಮೂವರು ಉಪ ಮುಖ್ಯಮಂತ್ರಿಗಳು ಬೇಕು ಎನ್ನುವ ವಿಚಾರವೂ ಸೇರಿದಂತೆ ಕಾಂಗ್ರೆಸ್ ಸರ್ಕಾರವನ್ನು ಮುಜುಗರಕ್ಕೆ ದೂಡುವಂತಹ ವದಂತಿಗಳು ಮತ್ತು ಗುಂಪುಗಾರಿಕೆಯನ್ನು ನಡೆಸಬಾರದು. ಪಕ್ಷದ ನಾಯಕರು ಪಕ್ಷ ಮತ್ತು ಸರ್ಕಾರದ ಸಂಬಂಧಿಸ ವಿಷಯಗಳನ್ನು ಪಕ್ಷದೊಳಗೆ ಪ್ರಪ್ತಾಪಿಸಬೇಕು. ಸಾರ್ವಜನಿಕ ವೇದಿಕೆಗಳಲ್ಲಿ ಮಾತನಾಡಬಾರದು ಎಂದು ರಾಜ್ಯ ಕಾಂಗ್ರೆಸ್ ನಾಯಕರಿಗೆ ಕಾಂಗ್ರೆಸ್ ಹೈಕಮಾಂಡ್ ಎಚ್ಚರಿಕೆ ನೀಡಿದೆ.
ರಾಜ್ಯ ನಾಯಕರಿಗೆ ಎಐಸಿಸಿ ಪ್ರದಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್ ಪತ್ರ ಬರೆದಿದ್ದು, “ಪಕ್ಷದ ಹಿತಾಸಕ್ತಿಗೆ ವಿರುದ್ಧವಾದ ಯಾವುದೇ ಟೀಕೆಗಳು ಮತ್ತು ಹೇಳಿಕೆಗಳುಸ್ವೀಕಾರಾರ್ಹವಲ್ಲ ಮತ್ತು ಅವುಗಳು ಅನಗತ್ಯ” ಎಂದು ಹೇಳಿದ್ದಾರೆ.
ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಪಕ್ಷವು ಉತ್ತಮ ಸಾಧನೆ ಮಾಡಬೇಕಾದರೆ, ರಾಜ್ಯಕ್ಕೆ ಇನ್ನೂ ಮೂವರು ಉಪಮುಖ್ಯಮಂತ್ರಿಗಳು ಬೇಕು ಎಂದು ಇತ್ತೀಚೆಗೆ ಸಹಕಾರ ಸಚಿವ ಕೆ.ಎನ್ ರಾಜಣ್ಣ ಹೇಳಿದ್ದರು. ಅವರ ಈ ಹೇಳಿಕೆಯನ್ನು ಗಮನದಲ್ಲಿಟ್ಟುಕೊಂಡು ಪತ್ರ ಬರೆಯಲಾಗಿದೆ ಎಂದು ತಿಳಿದುಬಂದಿದೆ.
ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳ ಪ್ರಭಾವವು ದೇಶಾದ್ಯಂತ ಗಮನ ಸೆಳೆದಿದೆ. ‘ಕರ್ನಾಟಕ ಮಾದರಿ’ ಬಗ್ಗೆ ಮಾತನಾಡುತ್ತಿದ್ದಾರೆ ಮತ್ತು ದೇಶಾದ್ಯಂತ ಅನುಕರಿಸುತ್ತಿದ್ದಾರೆ ಎಂದು ವೇಣುಗೋಪಾಲ್ ಹೇಳಿದರು.
“ಕಾಂಗ್ರೆಸ್‌ನ ಗ್ಯಾರಂಟಿ ಯೋಜನೆಗಳ ಯಶಸ್ಸು ಬಿಜೆಪಿ ಮತ್ತು ಪ್ರಾದೇಶಿಕ ಪಕ್ಷಗಳನ್ನು ಗೊಂದಲಕ್ಕೀಡುಮಾಡಿದೆ. ಇಂತಹ ಸಂದರ್ಭಗಳಲ್ಲಿ ಸರ್ಕಾರದ ವಿರುದ್ಧ ಜನರಲ್ಲಿ ತಪ್ಪು ಅಭಿಪ್ರಾಯಗಳನ್ನು ಮೂಡಿಸಲು ಆ ಪಕ್ಷಗಳು ಯತ್ನಿಸುತ್ತಿವೆ. ಅದಕ್ಕಾಗಿ, ಉಪಮುಖ್ಯಮಂತ್ರಿ ಹುದ್ದೆಗಳ ಬಗ್ಗೆ ವದಂತಿ ಸೃಷ್ಠಿಸುತ್ತಿದ್ದಾರೆ. ಅದಕ್ಕಾಗಿ ಕೆಲವು ಮಾಧ್ಯಮಗಳ ಮೂಲಕ ಬಹಿರಂಗವಾಗಿ ಕಾಂಗ್ರೆಸ್ ನಾಯಕರು ಮಾತನಾಡುವಂತೆ ಮಾಡುತ್ತಿದ್ದಾರೆ. ಇದಕ್ಕೆ ಆಸ್ಪದ ಕೊಡಬಾರದು” ಎಂದು ಅವರು ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ?: ಕಾವೇರಿ ವಿವಾದ | ಬಿಜೆಪಿ, ಜೆಡಿಎಸ್‌ನಿಂದ ರಾಜಕೀಯ: ಸಿಎಂ ಸಿದ್ದರಾಮಯ್ಯ
“ಕಾಂಗ್ರೆಸ್ ನಾಯಕರು ಸಾರ್ವಜನಿಕವಾಗಿ ಮಾತನಾಡುವ ಗೊಂದಲಮಯ ಹೇಳಿಕೆಗಳು ಕಾಂಗ್ರೆಸ್‌ನ ಶಿಸ್ತು ಮತ್ತು ಒಗ್ಗಟ್ಟಿನ ಮೇಲೆ ಪರಿಣಾಮ ಬೀರುತ್ತವೆ. ಕರ್ನಾಟಕದಲ್ಲಿ ಪಕ್ಷವು ಯಶಸ್ಸಿನತ್ತ ಸಾಗುತ್ತಿದೆ. ಇಂತಹ ಸಂದರ್ಭದಲ್ಲಿ ಗೊಂದಲದ ಹೇಳಿಕೆ ನೀಡುವುದು ಪಕ್ಷದ ಹಿತಾಸಕ್ತಿ ಮತ್ತು ಸರ್ಕಾರದ ಸುಗಮ ಕಾರ್ಯನಿರ್ವಹಣೆಗೆ ತೊಡಕಾಗುತ್ತವೆ. ಇಂತಹ ಸಾರ್ವಜನಿಕ ಹೇಳಿಕೆಗಳು ಸ್ವೀಕಾರಾರ್ಹವಲ್ಲ ಮತ್ತು ಅನಪೇಕ್ಷಿತ” ಎಂದು ಅವರು ತಿಳಿಸಿದ್ದಾರೆ.
ರಾಜ್ಯ ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ ಬಣ, ಡಿ.ಕೆ ಶಿವಕುಮಾರ್ ಬಣಗಳೆಂಬ ಗುಂಪುಗಳಿವೆ ಎಂದು ಹೇಳಲಾಗಿದೆ. ಇತ್ತೀಚೆಗೆ ಕಾಂಗ್ರೆಸ್ ಎಂಎಸ್ ಬಿ.ಕೆ ಹರಿಪ್ರಸಾದ್ ಅವರು ಸಾರ್ವಜನಿಕ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ವಿರುದ್ಧ ಮುಸುಕಿನ ಅಸಮಾಧಾನ ಹೊರಹಾಕಿದ್ದರು. ಅವರು ಡಿ.ಕೆ ಶಿವಕುಮಾರ್ ಅವರ ಬಣದಲ್ಲಿದ್ದಾರೆ ಎಂದು ಹೇಳಲಾಗಿದೆ.
ಈ ಬೆನ್ನಲ್ಲೇ, ಸಹಕಾರ ಸಚಿವ ರಾಜಣ್ಣ ಅವರು ಮೂವರು ಉಪಮುಖ್ಯಮಂತ್ರಿಗಳ ನೇಮಕವಾಗಬೇಕು.ಇದು ಲೋಕಸಭಾ ಚುನಾವಣೆಯಲ್ಲಿ ವಿವಿಧ ಸಮುದಾಯಗಳ ಮತಗಳನ್ನು ಕ್ರೋಢೀಕರಣಕ್ಕೆ ಸಹಾಯ ಮಾಡುತ್ತದೆ ಎಂದು ಹೇಳಿದ್ದರು.