ನಾನು ‘ಲವ್ ಜಿಹಾದ್’ಗೆ ಒಳಗಾಗಿದ್ದೇನೆ. ದಯವಿಟ್ಟು ನನಗೆ ಸಹಾಯ ಮಾಡಿ ಎಂದು ಮಹಿಳೆಯೊಬ್ಬರು ಟ್ವಿಟರ್(ಎಕ್ಸ್)ನಲ್ಲಿ ಪೋಸ್ಟ್ ಹಾಕಿ ಸಂಚಲನ ಮೂಡಿಸಿದ್ದರು. ಪ್ರಕರಣವನ್ನು ಕೈಗೆತ್ತಿಕೊಂಡು ತನಿಖೆ ನಡೆಸಿದ ಪೊಲೀಸರು ಇದೀಗ ಸತ್ಯವನ್ನು ಬಯಲು ಮಾಡಿದ್ದು, ಈ ಪ್ರಕರಣದಲ್ಲಿ ಮಾಡಿದ ಲವ್ ಜಿಹಾದ್ ಆರೋಪ ಸುಳ್ಳು ಎಂದು ಹೇಳಿದ್ದಾರೆ.
ಏನಿದು ಲವ್ ಜಿಹಾದ್ ಆರೋಪ?
”ನಾನು ಅಪಾಯದಲ್ಲಿದ್ದೇನೆ. ನನ್ನ ಮೇಲೆ ಬಲವಂತವಾಗಿ ಅಸ್ವಾಭಾವಿಕ ಲೈಂಗಿಕ ದೌರ್ಜನ್ಯ ನಡೆದಿದೆ. ಅತ್ಯಾಚಾರವಾಗಿದೆ. ನಾನು ಲವ್ ಜಿಹಾದ್‌ಗೆ ಒಳಗಾಗಿದ್ದೇನೆ. ಹಾಗಾಗಿ, ಬೆಂಗಳೂರು ನಗರ ಪೊಲೀಸರು ದಯವಿಟ್ಟು ನನ್ನ ಸಹಾಯಕ್ಕೆ ಬನ್ನಿ” ಎಂದು 37 ವರ್ಷದ ಮಹಿಳೆಯೊಬ್ಬರು ಟ್ವೀಟ್ ಮೂಲಕ ಪೊಲೀಸರ ಸಹಾಯ ಕೇಳಿದ್ದರು.
ಗುಪ್ತಾ ಭರತ್ ಎಂಬ ಟ್ವಿಟರ್ ಅಕೌಂಟ್‌ನಿಂದ ಸೆ. 7ರಂದು ಪ್ರಧಾನಿ ನರೇಂದ್ರ ಮೋದಿ, ರಾಜ್ಯ ಪೊಲೀಸ್ ಮಹಾನಿರ್ದೇಶಕರು ಹಾಗೂ ಬೆಂಗಳೂರು ಸಿಟಿ ಪೊಲೀಸರಿಗೆ ಟ್ಯಾಗ್ ಮಾಡಿ ಟ್ವೀಟ್ ಮಾಡಲಾಗಿತ್ತು. “ತುರ್ತಾಗಿ ನನಗೆ ಬೆಂಗಳೂರು ಪೊಲೀಸರ ಸಹಾಯ ಬೇಕಿದೆ. ನನ್ನ ಜೀವ ಅಪಾಯದಲ್ಲಿದೆ” ಎಂದು ಯುವತಿ ಟ್ವೀಟ್ ಮಾಡಿದ್ದರು.
“ಫೇಸ್ ಬುಕ್ ಮೂಲಕ ಕಾಶ್ಮೀರ ಯುವಕ ಮೊಜಿಫ್ ಅಶ್ರಫ್ ಬೇಗ್ (32) ಪರಿಚಯವಾಗಿದೆ. ನಮ್ಮಿಬ್ಬರ ನಡುವೆ ಹಣಕಾಸಿನ ವ್ಯವಹಾರವೂ ನಡೆದಿತ್ತು. ಕಾಶ್ಮೀರ್ ಯುವಕ ನನ್ನನ್ನು ಮದುವೆಯಾಗುವುದಾಗಿ ನಂಬಿಸಿ ಹಣ ಪಡೆದು ಮೋಸ ಮಾಡಿದ್ದಾನೆ. ಸದ್ಯ ನನ್ನನ್ನು ಮದುವೆಯಾಗುವುದಿಲ್ಲ ಎಂದು ನಿರ್ಲಕ್ಷಿಸಿದ್ದಾನೆ” ಎಂದು ಯುವತಿ ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಳು.
”ನಾನು ನೀಡಿದ ಹಣವನ್ನು ಹಿಂದಿರುಗಿಸುವಂತೆ ಕೇಳಿದಾಗ ಅವನು ನನಗೆ ಹಾನಿ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದಾನೆ. ನನಗೆ ಸಹಾಯ ಮಾಡಿ, ಕಾಶ್ಮೀರ ಪೊಲೀಸರಿಂದ ನನಗೆ ಯಾವುದೇ ಸಹಾಯ ಸಿಗುತ್ತಿಲ್ಲ” ಎಂದು ಹೇಳಿಕೊಂಡಿದ್ದರು.
ಇದಕ್ಕೆ ಕೂಡಲೇ ಪ್ರತಿಕ್ರಿಯೆ ನೀಡಿದ ಬೆಂಗಳೂರು ನಗರ ಪೊಲೀಸರು ಯುವತಿಯನ್ನು ಪತ್ತೆ ಮಾಡಿ ಹೇಳಿಕೆ ಪಡೆದು ಯುವಕನ ವಿರುದ್ಧ ಎಫ್ಐಆರ್ ದಾಖಲಿಸಿದ್ದರು. ಮಹಿಳೆ ಲವ್ ಜಿಹಾದ್ ಆರೋಪ ಮಾಡಿದ್ದು, ಮೊದಲು ಬೆಳ್ಳಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಘಟನೆ ಹೆಬ್ಬಗೋಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದರಿಂದ ಪ್ರಕರಣವನ್ನು ಹೆಬ್ಬಗೋಡಿ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿತ್ತು.
ಮಹಿಳೆಯ ದೂರಿನ ಮೇರೆಗೆ, ಹೆಬ್ಬಗೋಡಿ ಪೊಲೀಸರು ಭಾರತೀಯ ದಂಡ ಸಂಹಿತೆಯಡಿ ಅತ್ಯಾಚಾರ, ಅಸ್ವಾಭಾವಿಕ ಲೈಂಗಿಕತೆ, ಕ್ರಿಮಿನಲ್ ಬೆದರಿಕೆ ಮತ್ತು ವಂಚನೆಗೆ ಸಂಬಂಧಿಸಿದ ಆರೋಪಗಳು ಹಾಗೂ ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯದ ಹಕ್ಕು ಕಾಯಿದೆಯಡಿ ಅಕ್ರಮ ಮತಾಂತರಕ್ಕೆ ಯತ್ನಿಸಿದ ಆರೋಪದಡಿ ಅಶ್ರಫ್ ಬೇಗ್ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.
ನಂತರ ಆರೋಪಿ ಯುವಕನ ಪತ್ತೆಗೆ ಪೊಲೀಸರ ಒಂದು ತಂಡ ಜಮ್ಮು ಕಾಶ್ಮೀರಕ್ಕೆ ತೆರಳಿ ಶೋಧ ಕಾರ್ಯ ನಡೆಸಿತ್ತು. ಕಳೆದ ವಾರ ಕಾಶ್ಮೀರದ ಶ್ರೀನಗರದ ಜಕುರಾ ಪ್ರದೇಶದ ಮೊಜಿಫ್ ಅಶ್ರಫ್ ಬೇಗ್ ಎಂಬಾತನನ್ನು ಬೆಂಗಳೂರು ಗ್ರಾಮಾಂತರ ಪೊಲೀಸರು ಬಂಧಿಸಿದ್ದರು.
ಈ ಸುದ್ದಿ ಓದಿದ್ದೀರಾ? ನಾನು ಲವ್ ಜಿಹಾದ್‌ಗೆ ಒಳಗಾಗಿದ್ದೇನೆ ಸಹಾಯ ಮಾಡಿ ಎಂದು ಪೊಲೀಸರಿಗೆ ಟ್ವೀಟ್ ಮಾಡಿದ ಯುವತಿ
ಪೊಲೀಸ್ ತನಿಖೆಯಿಂದ ಹೊರಬಿದ್ದ ಸತ್ಯ
ಪ್ರಕರಣವನ್ನು ಕೈಗೆತ್ತಿಕೊಂಡ ಹೆಬ್ಬಗೋಡಿ ಪೊಲೀಸರು ತನಿಖೆ ಆರಂಭಿಸಿ, ಸತ್ಯವನ್ನು ಭೇದಿಸಿದ್ದಾರೆ.
ಯುವತಿ ಹಾಗೂ ಯುವಕ ಇಬ್ಬರೂ ಟೆಕ್ಕಿಗಳಾಗಿದ್ದು, ಬೆಂಗಳೂರು ನಗರದ ಪ್ರತಿಷ್ಠಿತ ಕಂಪನಿಯಲ್ಲಿ ಇಬ್ಬರೂ ಕೆಲಸ ಮಾಡುತ್ತಿದ್ದರು. 2018ರಲ್ಲಿ ಇಬ್ಬರಿಗೂ ಪರಿಚಯವಾಗಿ ಪ್ರೇಮ ಶುರುವಾಗಿತ್ತು. ಬಳಿಕ ಮೂರು ವರ್ಷ ಲೀವಿಂಗ್ ಟು ಗೆದರ್ ನಲ್ಲಿದ್ದ ಬಳಿಕ ಎರಡು ವರ್ಷದ ಹಿಂದೆ ಬ್ರೇಕ್ ಅಪ್ ಮಾಡಿಕೊಂಡಿದ್ದರು. ಆದರೂ, ಇಬ್ಬರು ಫೋನ್ ಕರೆಗಳ ಮೂಲಕ ಸಂಪರ್ಕದಲ್ಲಿದ್ದರು. ಯುವತಿ ಯುವಕನಿಗಿಂತ ಐದು ವರ್ಷ ದೊಡ್ಡವರು.
ಅಶ್ರಫ್ ಕೆಲಸದ ನಿಮಿತ್ತ ಪುಣೆಗೆ ತೆರಳಿದ್ದನು. ಇತ್ತೀಚೆಗೆ ಅಶ್ರಫ್ ತನ್ನ ಊರಿನಲ್ಲಿ ಮತ್ತೋರ್ವ ಯುವತಿ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದನು. ಈ ವಿಚಾರ ತಿಳಿದ ಮಹಿಳೆ ಅಶ್ರಫ್ ವಿರುದ್ಧ ಲವ್ ಜಿಹಾದ್ ಆರೋಪ ಮಾಡಿ ಪ್ರಕರಣ ದಾಖಲಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
“ತನಿಖೆ ಬಳಿಕ ಈ ಪ್ರಕರಣದಲ್ಲಿ ಯಾವುದೇ ‘ಲವ್ ಜಿಹಾದ್’ ಆಯಾಮವಿಲ್ಲ. ಹಾಗಾಗಿ, ಯುವಕನ ಮೇಲಿರುವ ಈ ಆರೋಪವನ್ನು ಕೈಬಿಡುತ್ತಿದ್ದೇವೆ. ಆದರೆ, ಅಶ್ರಫ್ ಬೇಗ್ ವಿರುದ್ಧ ಅತ್ಯಾಚಾರ, ವಂಚನೆ ಮತ್ತು ಕ್ರಿಮಿನಲ್ ಬೆದರಿಕೆ ಆರೋಪಗಳು ಇರಲಿವೆ” ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಈ ಪ್ರಕರಣದಲ್ಲಿ ಲವ್ ಜಿಹಾದ್ ಆರೋಪ ಸುಳ್ಳು ಎಂದು ಪೊಲೀಸರು ಸ್ಪಷ್ಟನೆ ನೀಡಿದ್ದಾರೆ.