ಹೊಸ ಮದ್ಯದಂಗಡಿಗಳ ಪರವಾನಗಿ ನೀಡುವುದರ ಕುರಿತ ಅಬಕಾರಿ ಇಲಾಖೆ ಪ್ರಸ್ತಾವನೆ ಹೊರಡಿಸಿರುವುದಕ್ಕೆ ಪರಿಶಿಷ್ಟ ಪಂಚಮ ಕುಲಬಾಂಧವರ ಒಕ್ಕೂಟ ಮತ್ತು ರಾಜ್ಯ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯ ಧಾರವಾಡ ಜಿಲ್ಲಾ ಸಂಚಾಲಕ ಮಂಜುನಾಥ ಕೊಂಡಪಲ್ಲಿ ವಿರೋಧ ವ್ಯಕ್ತಪಡಿಸಿದ್ದಾರೆ.
“ಸರ್ಕಾರದ ಈ ನಡೆ ಅತ್ಯಂತ ದೌರ್ಭಾಗ್ಯಪೂರ್ಣ ಕ್ರಮವಾಗಿದ್ದು, ಮದ್ಯ ವ್ಯಸನಕ್ಕೆ ಚಿಕ್ಕ ವಯಸ್ಸಿನಲ್ಲಿಯೇ ತುತ್ತಾಗಿ ಅಕಾಲ ಮೃತ್ಯುವಿಗೆ ಯುವಜನರು ಬಲಿಯಾಗುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಮದ್ಯದಂಗಡಿಗಳ ವೇಳೆಯನ್ನು ಕಡಿಮೆ ಮಾಡುವ ಮತ್ತು ಅಪ್ರಾಪ್ತರಿಗೆ ಮದ್ಯವಿಕ್ರಯ ಮಾಡದಂತೆ ತಡೆಯುವ ಜನಪರ ಕ್ರಮಗಳ ಕುರಿತು ಯೋಚಿಸದೇ, ಸರ್ಕಾರ ಜನರನ್ನು ಮದ್ಯ ವ್ಯಸನಕ್ಕೆ ಸುಲಭವಾಗಿ ಒಳಗಾಗುವಂತೆ ಮಾಡಿ ರಾಜ್ಯದ ಮಹಿಳೆಯರ ಬದುಕುಗಳನ್ನು ಅಂಧಕಾರಕ್ಕೆ ನೂಕಲು ಅಬಕಾರಿ ಇಲಾಖೆ ಮುಂದಾಗಿರುವುದು ಖಂಡನೀಯ” ಎಂದರು.
“ನಗರ ಮತ್ತು ಹಳ್ಳಿ ಪ್ರದೇಶಗಳಲ್ಲಿ ಈಗಾಗಲೇ ಲಕ್ಷಾಂತರ ಜನ ಮದ್ಯಪಾನಕ್ಕೆ ದಾಸರಾಗಿ ಕೌಟುಂಬಿಕ ಜೀವನವನ್ನು ಹಾಳು ಮಾಡಿಕೊಂಡು, ಆರ್ಥಿಕ ಮತ್ತು ಆರೋಗ್ಯ ಸಮಸ್ಯೆಗಳಿಂದ ತತ್ತರಿಸಿ ಹೋಗಿದ್ದಾರೆ. ಪಾಲಕರ ಮದ್ಯಪಾನ ವ್ಯಸನದ ಪರಿಣಾಮದಿಂದ ಮಕ್ಕಳ ಶಿಕ್ಷಣ ಕುಂಠಿತವಾಗಿರುವ, ಯುವಕರು ಅನೇಕ ದುಷ್ಕೃತ್ಯಗಳಲ್ಲಿ ಭಾಗಿಯಾಗುತ್ತಿರುವ, ಮಹಿಳೆಯರ ಮೇಲೆ ಅತ್ಯಾಚಾರ, ದೌರ್ಜನ್ಯ ನಡೆದಿರುವ ಸಾವಿರಾರು ಉದಾಹರಣೆಗಳು ನಮ್ಮ ಮುಂದಿವೆ. ಈ ಕಾರಣಕ್ಕಾಗಿಯೇ ಪ್ರತಿದಿನ ಹೊಸ ಮಾದರಿಯ ವ್ಯಸನಮುಕ್ತಿ ಕೇಂದ್ರಗಳು ತೆರೆದುಕೊಳ್ಳುತ್ತಿದ್ದು, ಸಮಸ್ಯೆಯ ಆಳವನ್ನು ತೋರುತ್ತಿವೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ಧಾರವಾಡ | ಅವಳಿ ನಗರಗಳಿಗೆ 5 ತಿಂಗಳಲ್ಲಿ 100 ಹೊಸ ಸಿಟಿ ಬಸ್‌ಗಳು ರಸ್ತೆಗಿಳಿಯಲಿವೆ: ಸಾರಿಗೆ ಸಚಿವ
“ಸರ್ಕಾರ ಈ ಸಮಾಜ ವಿರೋಧಿ ಪ್ರಸ್ತಾವನೆಯನ್ನು ಕೈಬಿಡದೆ ಇದ್ದಲ್ಲಿ ಸಮಾಜಪರ ಕಾಳಜಿ ಇರುವ ಎಲ್ಲ ಸಂಘಟನೆಗಳನ್ನು ಒಗ್ಗೂಡಿಸಿ ರಾಜ್ಯಾದ್ಯಂತ ತೀವ್ರ ಹೋರಾಟ ನಡೆಸಲಾಗುವುದು” ಎಂದು ಸಂಘಟನೆಯ ಜಿಲ್ಲಾ ಸಂಚಾಲಕ ಮಂಜುನಾಥ ಕೊಂಡಪಲ್ಲಿ ಅವರು ಎಚ್ಚರಿಕೆ ನೀಡಿದರು.