ಮಾಂಸ ಮಾರುವವರಿಗೆ ಇಸ್ಕಾನ್ ಮಾರಿರುವಷ್ಟು ಹಸುಗಳನ್ನು ಯಾರೂ ಮಾರಿಲ್ಲ ಎಂದಿರುವ ಬಿಜೆಪಿ ಸಂಸದೆ ಮನೇಕಾ ಗಾಂಧಿ ಅವರ ಹೇಳಿಕೆಗೆ ಇಸ್ಕಾನ್ ಪ್ರತಿಕ್ರಿಯೆ ನೀಡಿದೆ. ಸಂಸದೆಯ ಆರೋಪಗಳು ಆಧಾರ ರಹಿತವೆಂದು ಹೇಳಿದೆ.
ಮನೇಕಾ ಗಾಂಧಿ ಅವರ ಆರೋಪಗಳನ್ನು ಅಲ್ಲಗಳೆದಿರುವ ಇಸ್ಕಾನ್ನ ರಾಷ್ಟ್ರೀಯ ವಕ್ತಾರ ಯುಧಿಷ್ಠಿರ್ ಗೋವಿಂದ್ ದಾಸ್, “ಗೋವುಗಳು ಹಾಗೂ ಗೂಳಿಗಳ ಸಂರಕ್ಷಣೆಗಾಗಿ ಭಾರತ ಮಾತ್ರವಲ್ಲದೆ ವಿಶ್ವಾದ್ಯಂತ ಕೆಲಸ ಮಾಡುತ್ತಿದೆ. ಹಸುಗಳು ಮತ್ತು ಎತ್ತುಗಳು ಇಸ್ಕಾನ್ನ ಗೋಶಾಲೆಯಲ್ಲಿ ಬದುಕಿರುವವರೆಗೂ ಇರುತ್ತವೆ. ನಾವು ಒಂದೇ ಒಂದು ಹಸು, ಎತ್ತು ಅಥವಾ ಕರುವನ್ನು ಮಾಂಸ ಮಾರುವವರಿಗೆ ಮಾರುವುದಿಲ್ಲ” ಎಂದು ಹೇಳಿದ್ದಾರೆ.
ಕಳೆದ ತಿಂಗಳು ಸುದ್ದಿವಾಹಿನಿಯೊಂದು ಮನೇಕಾ ಗಾಂಧಿ ಅವರ ಸಂದರ್ಶನ ನಡೆಸಿತ್ತು. ಅದರ ಸಣ್ಣ ವಿಡಿಯೋ ತುಣುಕೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ, “ಈ ದೇಶದಲ್ಲಿ ಅತೀ ದೊಡ್ಡ ಮೋಸಗಾರರು ಎಂದರೆ ಅದು ಇಸ್ಕಾನ್. ಅವರು ಗೋಶಾಲೆಗಳನ್ನು ನಿರ್ಮಿಸುತ್ತಾರೆ. ಅವುಗಳನ್ನು ನಡೆಸಲು ಸರ್ಕಾರದಿಂದ ಸಾಕಷ್ಟು ಪ್ರಯೋಜನಗಳನ್ನು ಪಡೆಯುತ್ತಾರೆ. ನಾನು ಇತ್ತೀಚೆಗೆ, ಅವರ ಅನಂತಪುರ ಗೋಶಾಲೆಗೆ ಹೋಗಿದ್ದೆ. ಅಲ್ಲಿ, ಒಂದೇ ಒಂದು ವಯಸ್ಸಾದ ಹಸು ಇರಲಿಲ್ಲ, ಕರುಗಳು ಕೂಡ ಇರಲಿಲ್ಲ. ಹಾಲು ಕೊಡುವ ಹಸುಗಳನ್ನು ಮಾತ್ರ ಇರಿಸಲಾಗಿದೆ” ಎಂದು ಆರೋಪಿಸಿದ್ದರು.
Holy cow ! What a CON.
— Lavanya Ballal Jain (@LavanyaBallal) September 27, 2023
The BJP uses the cow for political gains and the ISKCON uses it to make money.
Neither of these two love the cows.#ISKCON pic.twitter.com/8mPLEOdFUj
ಅವರ ಹೇಳಿಕೆಯ ವಿಡಿಯೋವನ್ನು ಹಂಚಿಕೊಂಡಿದ್ದ ಆರ್‌ಜೆಡಿ ರಾಷ್ಟ್ರೀಯ ಪ್ರಚಾರ ಉಸ್ತುವಾರಿ ಪ್ರಶಾಂತ್ ಕನೋಜಿಯಾ, “ಭಾರತದಲ್ಲಿ ಅತಿ ಹೆಚ್ಚು ಬೋಗಸ್ ಮತ್ತು ಮೋಸ ಮಾಡುವ ಸಂಸ್ಥೆ ಯಾವುದಾದರೂ ಇದ್ದರೆ ಅದು ಇಸ್ಕಾನ್ ಎಂದು ನಾನು ಹಲವು ವರ್ಷಗಳಿಂದ ಹೇಳುತ್ತಿದ್ದೇನೆ. ಈಗ ಮನೇಕಾ ಗಾಂಧಿ ಕೂಡ ಅದೇ ಮಾತನಾಡಿದ್ದಾರೆ. ಇಸ್ಕಾನ್‌ನವರು ಬೀದಿಯಲ್ಲಿ ಹರೇ ಕೃಷ್ಣ ಎನ್ನುತ್ತಾರೆ. ಆದರೆ, ಅವರಿಗೆ ಒಳಗೆ ದೊಡ್ಡ ಅಜೆಂಡಾವಿದೆ. ಇಸ್ಕಾನ್ ಕೂಡ ಆಳವಾದ ಜಾತಿವಾದಿ. ದಲಿತರು ಮತ್ತು ಕಪ್ಪು ಬಣ್ಣದ ಜನರನ್ನು ಜೀತದಾಳುಗಳನ್ನಾಗಿ ಮಾಡುವ ಮಾತನಾಡಿದ್ದಾರೆ” ಎಂದು ಟ್ವೀಟ್ ಮಾಡಿದ್ದರು.