ತಮಿಳುನಾಡಿಗೆ ಕಾವೇರಿ ನದಿ ನೀರು ಹರಿಸುವುದನ್ನು ವಿರೋಧಿಸಿ ಸೆ.26 ರಂದು ‘ಬೆಂಗಳೂರು ಬಂದ್’ ನಡೆಯಿತು. ಬಂದ್‌ಗೆ ಹಲವಾರು ಸಂಘಟನೆಗಳು ಸಹಕಾರ ನೀಡಿದ್ದವು. ವರ್ತಕರು ಸ್ವಪ್ರೇರಣೆಯಿಂದ ಬಂದ್‌ಗೆ ಬೆಂಬಲಿಸಿದ್ದು ವಾಣಿಜ್ಯ ಚಟುವಟಿಕೆ ಸ್ಥಗಿತಗೊಂಡಿತ್ತು. ಬಿಎಂಟಿಸಿ ಬಸ್‌ಗಳು, ಮೆಟ್ರೋ ರೈಲು ಹಾಗೂ ಇತರ ಸಾರಿಗೆಗಳು ಮಂಗಳವಾರವೂ ಎಂದಿನಂತೆ ಸಂಚರಿಸಿದವು. ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಿದ್ದು, ಬಂದ್‌ಗೆ ಜನರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಬೆಂಗಳೂರು ಮೆಟ್ರೋ ರೈಲ್ ಕಾರ್ಪೊರೇಷನ್ ಲಿಮಿಟೆಡ್ (ಬಿಎಂಆರ್‌ಸಿಎಲ್) ಪ್ರಕಾರ, ಪ್ರತಿದಿನ ಸರಾಸರಿ 6.30 ಲಕ್ಷ ಪ್ರಯಾಣಿಕರು ಮೆಟ್ರೋದಲ್ಲಿ ಸಂಚರಿಸುತ್ತಾರೆ. ಬಂದ್ ದಿನ ನಮ್ಮ ಮೆಟ್ರೋದಲ್ಲಿ ಸಂಜೆ 5 ಗಂಟೆಯವರೆಗೆ 1,20,781 ಪ್ರಯಾಣಿಕರು ಮಾತ್ರ ಸಂಚರಿಸಿದ್ದಾರೆ. ಸಾಯಂಕಾಲದ ನಂತರದ ಮಾಹಿತಿ ಲಭ್ಯವಿಲ್ಲ.
“ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಸಾಮಾನ್ಯ ದಿನಕ್ಕಿಂತ ಶೇ.20 ರಷ್ಟು ಕಡಿಮೆ ಬಸ್‌ಗಳು ಸಂಚರಿಸಿವೆ” ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
“ದಿನಕ್ಕೆ ಸರಾಸರಿ 5,602 ಬಿಎಂಟಿಸಿ ಬಸ್‌ಗಳು ಕಾರ್ಯ ನಿರ್ವಹಿಸುತ್ತವೆ. ನಿಗಮವು 604 ಬಸ್ ಸೇವೆಗಳನ್ನು ರದ್ದುಗೊಳಿಸಿದ್ದರಿಂದ ಈ ಸಂಖ್ಯೆ 4,998ಕ್ಕೆ ಕುಸಿಯಿತು. ಇದಲ್ಲದೆ, ಶೇ.9 ರಷ್ಟು ಬಸ್‌ಗಳನ್ನು ಸಾಮಾನ್ಯ ಮತ್ತು ರಾತ್ರಿ ಪಾಳಿಗಳಿಂದ ರದ್ದುಗೊಳಿಸಬೇಕಾಗಿತ್ತು. ಒಟ್ಟಾರೆಯಾಗಿ, ಬಿಎಂಟಿಸಿ ತನ್ನ ಸಾಮಾನ್ಯ ಬಸ್ ವೇಳಾಪಟ್ಟಿಗಳಲ್ಲಿ ಶೇ.20 ರಷ್ಟನ್ನು ರದ್ದುಗೊಳಿಸಿದೆ. ಬಿಎಂಟಿಸಿ ಬಸ್‌ಗಳಲ್ಲಿ ಪ್ರತಿದಿನ ಸುಮಾರು 40 ಲಕ್ಷ ಪ್ರಯಾಣಿಕರು ಪ್ರಯಾಣಿಸುತ್ತಾರೆ” ಎಂದು ಅಧಿಕಾರಿ ವಿವರಿಸಿದರು.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು (ಕೆಎಸ್‌ಆರ್‌ಟಿಸಿ) ಬೆಂಗಳೂರಿನಿಂದ ಇಂಟರ್‌ಸಿಟಿ ಬಸ್‌ಗಳ ಕಾರ್ಯಾಚರಣೆಯನ್ನು ಕಡಿಮೆ ಮಾಡಿದೆ.
“ಬೆಂಗಳೂರು ಕೇಂದ್ರ ವಿಭಾಗದಿಂದ 212 ಬಸ್ ಸೇವೆಗಳಲ್ಲಿ 167 ಬಸ್‌ಗಳು ಮಾತ್ರ ಕಾರ್ಯ ನಿರ್ವಹಿಸಿವೆ. ಕೆಎಸ್‌ಆರ್‌ಟಿಸಿಯ 14 ನಾನಾ ವಿಭಾಗಗಳು ಮಂಗಳವಾರ ನಿಗದಿಪಡಿಸಲಾದ 90% ಕ್ಕಿಂತ ಹೆಚ್ಚು ಬಸ್‌ಗಳು ಕಾರ್ಯ ನಿರ್ವಹಿಸಿವೆ” ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬಾಗ್ಮನೆ ಟೆಕ್ ಪಾರ್ಕ್ ಸೇರಿದಂತೆ 10ಕ್ಕೂ ಹೆಚ್ಚು ಕಡೆ ಐಟಿ ದಾಳಿ
ಆ್ಯಪ್ ಆಧಾರಿತ ಆಟೋ ಮತ್ತು ಕ್ಯಾಬ್ ಸೇವೆಗಳು ಸಹ ಎಂದಿನಂತೆ ಕಾರ್ಯನಿರ್ವಹಿಸಿದವು. ಆದರೂ ಅವುಗಳ ಸಂಖ್ಯೆಯು ಗಮನಾರ್ಹವಾಗಿ ಕುಸಿದಿದೆ.
ಬೆಂಗಳೂರಿನ ಆಟೋ ಡ್ರೈವರ್‌ಗಳು ನಡೆಸುತ್ತಿರುವ ನಮ್ಮ ಯಾತ್ರಿ ರಾತ್ರಿ 10 ಗಂಟೆಯವರೆಗೆ ಕೇವಲ 24,000 ರೈಡ್‌ಗಳನ್ನು ಪೂರ್ಣಗೊಳಿಸಿದೆ. ಇದು ದೈನಂದಿನ ಅಂಕಿಅಂಶ 94,000 ಆಗಿದೆ.
ಉಬರ್, ಓಲಾ ಹಾಗೂ ರ‍್ಯಾಪಿಡೋದಲ್ಲಿ ಸಹ ಕಡಿಮೆ ಪ್ರಯಾಣಿಕರು ಸಂಚರಿಸಿದ್ದಾರೆ ಎಂದು ತಿಳಿದುಬಂದಿದೆ.