“ಜೆಡಿಎಸ್ ಬಿಜೆಪಿ ಜತೆ ಹೊಂದಾಣಿಕೆ ಮಾಡಿಕೊಂಡರೂ ತನ್ನ ಸಿದ್ಧಾಂತ, ನಿಲುವಿನಿಂದ ವಿಮುಖವಾಗದು. ಮುಸ್ಲಿಂ ಸಮುದಾಯದ ಹಿತಾಸಕ್ತಿಗೆ ಜೆಡಿಎಸ್ ಯಾವತ್ತಿಗೂ ಬದ್ಧವಾಗಿದೆ” ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ ದೇವೇಗೌಡ ತಿಳಿಸಿದರು.
ಸೆ.27 ರಂದು ಬೆಂಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಜಾತ್ಯತೀತವನ್ನು ತೆಗೆದು ಹಾಕಲು ಕಿಂಚಿತ್ತೂ ಮನಸ್ಸು ಮಾಡಿಲ್ಲ. ಮುಂದೆಯೂ ಮಾಡುವುದಿಲ್ಲ. ಇದನ್ನ ಖಂಡಾತುಂಡವಾಗಿ ಹೇಳುತ್ತೇನೆ” ಎಂದರು.
“ಬಿಜೆಪಿ ಜತೆಗೆ ಜೆಡಿಎಸ್ ಹೊಂದಾಣಿಕೆ ಮಾಡಿಕೊಂಡರು ಕೂಡ ಜೆಡಿಎಸ್ ತನ್ನ ಸಿದ್ಧಾಂತ, ನಿಲುವಿನಿಂದ ವಿಮುಖವಾಗದು. ಬಿಜೆಪಿ ಸಂಪರ್ಕವಿಲ್ಲದೇ ದೇಶದಲ್ಲಿ ಯಾವ ರಾಜಕೀಯ ಪಕ್ಷವೂ ಇಲ್ಲ. ಆದರೆ, ಕಾಂಗ್ರೆಸ್ ತನ್ನ ಸ್ವಾರ್ಥಕ್ಕಾಗಿ ಜಾತ್ಯತೀತ ನಿಲುವಿನ ಇತರೆ ಪಕ್ಷಗಳನ್ನು ಬಲಿಕೊಡುತ್ತಿದೆ. ಕಾಂಗ್ರೆಸ್ ದುರಾಡಳಿತದ ವಿರುದ್ಧ ರಾಜ್ಯದಲ್ಲಿ ಹೋರಾಟ ನಡೆಸಲಾಗುವುದು” ಎಂದು ಹೇಳಿದರು.
“ಮೈತ್ರಿ ವಿಚಾರಕ್ಕೆ ಸಂಬಂಧಿಸಿದಂತೆ, ಬಿಜೆಪಿ ನಾಯಕರನ್ನು ಕುಮಾರಸ್ವಾಮಿ ಅವರು ಭೇಟಿ ಮಾಡುವ ಮೊದಲು ನಾನು ಗೃಹ ಸಚಿವ ಅಮಿತ್ ಷಾ ಅವರನ್ನು ಭೇಟಿ ಮಾಡಿ, ಚರ್ಚೆ ಮಾಡಿದ್ದೇನೆ. ಈ ಬಗ್ಗೆ ಕದ್ದು ಮುಚ್ಚಿ ಮಾತನಾಡುವ ಅವಶ್ಯಕತೆ, ಅನಿವಾರ್ಯತೆ ಇಲ್ಲ. ಸದ್ಯ ಕರ್ನಾಟಕದ ಪರಿಸ್ಥಿತಿಯ ಬಗ್ಗೆ ಅಮಿತ್ ಶಾ ಅವರ ಬಳಿ ಎಲ್ಲ ವಿಚಾರಗಳನ್ನು ಮಾತನಾಡಿದ್ದೇನೆ. ಇದನ್ನು ಮೊದಲು ಸರಿಪಡಿಸಿ ನಂತರ ಕುಮಾರಸ್ವಾಮಿ ಅವರು ಬಂದು ಮಾತಾಡುತ್ತಾರೆ ಎಂದು ತಿಳಿಸಿದ್ದೆ” ಎಂದು ಹೇಳಿದರು.
“2018ರ ವಿಧಾನಸಭಾ ಚುನಾವಣೆಯ ಸಮಯದಲ್ಲಿ ಅತಂತ್ರ ನಿರ್ಮಾಣವಾದಾಗ ಖುದ್ದು ಕಾಂಗ್ರೆಸ್ ನಾಯಕರೇ ನಮ್ಮ ಮನೆ ಬಾಗಿಲಿಗೆ ಬಂದು ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಬೇಕು ಎಂದು ವಿನಂತಿ ಮಾಡಿದರು. ಬಳಿಕ, ಒಂದೇ ವರ್ಷದಲ್ಲಿ ತಮ್ಮ ನಿಲುವು ಬದಲಾಯಿಸಿ 17 ಜನ ಶಾಸಕರನ್ನು ಮುಂಬೈಗೆ ಕಳುಹಿಸಿ, ಶಾಸಕರ ರಾಜೀನಾಮೆಗೆ ಖುದ್ದು ಇವರೇ ಸಹಕಾರ ನೀಡಿದರು. ಆಗ ಬಿಜೆಪಿ ಸರ್ಕಾರ ಬರಲು ಕಾರಣರಾದರು. ಕಾಂಗ್ರೆಸ್ನ ಇಂತಹ ದ್ವಿಮುಖ ನೀತಿಯ ವಿರುದ್ಧ ಜೆಡಿಎಸ್ ಹೋರಾಟ ನಡೆಸಿದೆ. ಆದರೆ, ಮುಸ್ಲಿಂ ಸಮುದಾಯ ಕಳೆದ ಚುನಾವಣೆಯಲ್ಲಿ ನಮಗೆ ಬೆಂಬಲ ನೀಡಲಿಲ್ಲ. ಇದು ನೋವಿನ ವಿಚಾರ. ಯಾವುದೇ ಸಮುದಾಯಕ್ಕೆ ಈ ಪಕ್ಷದಿಂದ ಅನ್ಯಾಯ ಆಗಲು ಬಿಡಲ್ಲ” ಎಂದು ವಿವರಿಸಿದರು.
“ರಾಹುಲ್ ಗಾಂಧಿ ಅವರಿಂದ ‘ಜೆಡಿಎಸ್ ಬಿಜೆಪಿಯ ಬಿ ಟೀಮ್’ ಅಂತ ಹೇಳಿಕೆ ನೀಡಿಸಿದರು. ಕಾಂಗ್ರೆಸ್ ಜತೆ ಜೆಡಿಎಸ್ ಮೈತ್ರಿ ಆದಾಗ ಏನೇನು ಮಾಡಿದ್ದಾರೆ ಎಂದು ನಾನು ನೋಡಿದ್ದೇನೆ. ಈಗ ನಾವು ಮಾಡಿಕೊಂಡಿರುವ ಮೈತ್ರಿ ಬಗ್ಗೆ ಚರ್ಚೆ ಮಾಡುತ್ತಿದ್ದಾರೆ. ನಾನು ಯಾವುದೇ ಕಾರಣಕ್ಕೂ ಅಧಿಕಾರಕ್ಕಾಗಿ ರಾಜಕೀಯ ಮಾಡಿಲ್ಲ. ದೇಶದಲ್ಲಿ ಒಂದೇ ಕುಟುಂಬ ಆಡಳಿತ ಮಾಡಬೇಕಾ?” ಎಂದು ಪ್ರಶ್ನಿಸಿದರು.
“ಕಾಂಗ್ರೆಸ್ ಜೆಡಿಎಸ್ಗೆ ಮೋಸ ಮಾಡಿರುವ 100 ಉದಾಹರಣೆ ನೀಡುತ್ತೇನೆ. ಕಾಂಗ್ರೆಸ್ ಹಲವಾರು ಬಾರಿ ಪ್ರಮಾದ ಮಾಡಿದೆ. ಈಗ ಜಾತ್ಯತೀತದ ಬಗ್ಗೆ ಮಾತನಾಡುತ್ತಿದ್ದಾರೆ” ಎಂದು ಕಿಡಿಕಾರಿದರು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು ಬಂದ್ | ಮಿಶ್ರ ಪ್ರತಿಕ್ರಿಯೆ; ಜನರ ವಿರಳ ಓಡಾಟ
“ಜೆಡಿಎಸ್ ಬಿಜೆಪಿ ಮೈತ್ರಿ ಮಾಡಿಕೊಂಡ ಬಗ್ಗೆ ಮುಸ್ಲಿಂ ನಾಯಕರಿಗೆ ಮನವರಿಕೆ ಮಾಡಿದ್ದೇವೆ. ಪಕ್ಷದ ರಾಜ್ಯ ಘಟಕದ ಆಧ್ಯಕ್ಷ ಸಿ.ಎಂ ಇಬ್ರಾಹಿಂ ಅವರಿಗೂ ಎಲ್ಲ ಮಾಹಿತಿ ಇದೆ. ಅಧಿಕೃತವಾಗಿ ಮೈತ್ರಿಯಾದ ಬಳಿಕ ಇಬ್ರಾಹಿಂ ಅವರು ಸಂಪರ್ಕಕ್ಕೆ ಸಿಕ್ಕಿಲ್ಲ” ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ ಕುಮಾರಸ್ವಾಮಿ ತಿಳಿಸಿದರು.