- ಬಿ ಎಸ್ ಯಡಿಯೂರಪ್ಪ ನೇತೃತ್ವದಲ್ಲಿ ಪ್ರತಿಭಟನೆ
- ತಮಿಳುನಾಡು ಏಜೆಂಟರಂತೆ ವರ್ತಿಸಬೇಡಿ: ಬಿಎಸ್‌ವೈ
ಕಾವೇರಿ ವಿಚಾರವಾಗಿ ಬಿಜೆಪಿ ಮತ್ತು ಜೆಡಿಎಸ್ ಪಕ್ಷದ ನಾಯಕರು ಜಂಟಿಯಾಗಿ ವಿಧಾನಸೌಧದ ಆವರಣದಲ್ಲಿರುವ ಗಾಂಧಿ ಪ್ರತಿಮೆ ಮುಂದೆ ಬುಧವಾರ ಪ್ರತಿಭಟನೆ ನಡೆಸಿದರು.
ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ನೇತೃತ್ವದಲ್ಲಿ ಪ್ರತಿಭಟನೆ ನಡೆದಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು, ಸಂಸದ ತೇಜಸ್ವಿ ಸೂರ್ಯ, ಮಾಜಿ ಸಚಿವರಾದ ಗೋವಿಂದ ಕಾರಜೋಳ, ಸದಾನಂದಗೌಡ, ಅಶ್ವತ್ಥನಾರಾಯಣ, ಮುನಿರತ್ನ ಸೇರಿ ಹಲವರು ಭಾಗಿಯಾಗಿದ್ದರು.
ವಿಧಾನಸೌಧದಲ್ಲಿ ನಡೆಯುತ್ತಿರುವ ಜಂಟಿ ಧರಣಿಯಲ್ಲಿ ಜೆಡಿಎಸ್ ಮುಖಂಡರು ಕೂಡ ಭಾಗಿಯಾಗಿದ್ದಾರೆ. ಜೆಡಿಎಸ್ ಮುಖಂಡರಾದ ಟಿ ಸರವಣ, ಡಾ. ಅನ್ನದಾನಿ ಮತ್ತಿತರರು ಭಾಗಿಯಾಗಿದ್ದಾರೆ.
ಪ್ರತಿಭಟನೆಯಲ್ಲಿ ಬಿ ಎಸ್ ಯಡಿಯೂರಪ್ಪ ಮಾತನಾಡಿ, “ಸಿಎಂ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಅವರು ತಮಿಳುನಾಡು ಹಾಗೂ ಡಿಎಂಕೆ ಸರ್ಕಾರದ ಏಜೆಂಟ್‌ರಂತೆ ವರ್ತಿಸಬಾರದು. ರಾಜ್ಯದ ವಾಸ್ತವ ಸಂಗತಿಯನ್ನು ಅರಿತುಕೊಳ್ಳಬೇಕು. ನಮ್ಮ ಬಹುತೇಕ ಜಲಾಶಯಗಳಲ್ಲಿ ನೀರು ಬರಿದಾಗಿದೆ” ಎಂದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಮೋದಿ ಮಧ್ಯಪ್ರವೇಶಿಸಲಿ- ಕಾವೇರಿ ಬಿಕ್ಕಟ್ಟು ಬಗೆಹರಿಸಲಿ
“ಸಿಎಂ ಸಿದ್ದರಾಮಯ್ಯ ಮತ್ತು ನೀರಾವರಿ ಸಚಿವ ಡಿಕೆ ಶಿವಕುಮಾರ್ ತಮಿಳುನಾಡು ಏಜೆಂಟರಂತೆ ವರ್ತಿಸುತ್ತಿರುವುದರಿಂದ ಕರ್ನಾಟಕ ಬಿಕ್ಕಟ್ಟು ಎದುರಿಸುತ್ತಿದೆ. ನಮಗೆ ನೀರು ಸಾಲುತ್ತಿಲ್ಲ. ಎಲ್ಲದಕ್ಕೂ ಪ್ರಧಾನಿ ಮೋದಿ ಮಧ್ಯಪ್ರವೇಶಿಸಲು ಆಗುವುದಿಲ್ಲ. ಸದ್ಯ ಪ್ರಕರಣ ಸುಪ್ರೀಂ ಕೋರ್ಟ್‌ನಲ್ಲಿದ್ದು, ಹಸ್ತಕ್ಷೇಪ ಮಾಡಲು ಸಾಧ್ಯವಿಲ್ಲ” ಎಂದು ತಿಳಿಸಿದರು.
ಬೆಂಗಳೂರು ದಕ್ಷಿಣದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಮಾತನಾಡಿ, “ತಮಿಳುನಾಡಿಗೆ ಬಿಡುತ್ತಿರುವ ನೀರನ್ನು ಕರ್ನಾಟಕ ನಿಲ್ಲಿಸಬೇಕು. ಕಾವೇರಿ ನೀರು ನಿಯಂತ್ರಣ ಸಮಿತಿಗೆ ಸರಿಯಾದ ವಿವರಗಳನ್ನು ನೀಡುವಲ್ಲಿ ಕರ್ನಾಟಕ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ. ಈಗ ಕೇಂದ್ರ ಸರ್ಕಾರದ ಕಡೆಗೆ ಬೆರಳು ತೋರಿಸುವ ಕೆಲಸ ಮಾಡುವುದಲ್ಲ, ಕೇಂದ್ರ ಸರ್ಕಾರ ಅದರ ಕೆಲಸ ಮಾಡುತ್ತಿದೆ. ಈಗ ಜವಾಬ್ದಾರಿ ಸುಪ್ರೀಂ ಕೋರ್ಟಿನ ಮೇಲಿದೆ” ಎಂದು ಹೇಳಿದರು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಬಿಜೆಪಿ ಶಾಸಕ ಬಿ ವೈ ವಿಜಯೇಂದ್ರ, “ಕಾವೇರಿ ನೀರಿನ ವಿಚಾರವಾಗಿ ರಾಜ್ಯ ಸರ್ಕಾರ ಎಡವಿದೆ. ತಮಿಳುನಾಡು ಮೂರನೇ ಬೆಳೆ ಬೆಳೆಯಲು ನೀರು ಉಪಯೋಗ ಮಾಡಿದಾಗಲೇ ಎಚ್ಚರಿಕೆ ವಹಿಸಬೇಕಿತ್ತು. ಇದಕ್ಕೆ ಆ ಸಂದರ್ಭದಲ್ಲಿ ವಿರೋಧ ವ್ಯಕ್ತಪಡಿಸಬೇಕಿತ್ತು” ಎಂದರು.