ಹಾವೇರಿ ನಗರದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನಾಂಗಕ್ಕೆ ಸ್ಮಶಾನ ನೀಡಬೇಕು. ನಗರದಲ್ಲಿ ಬಾಬು ಜಗಜೀವನರಾಂ ಅವರ ಭವನ ನಿರ್ಮಾಣ ಮಾಡಬೇಕೆಂದು ಒತ್ತಾಯಿಸಿ ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ್ ಅವರಿಗೆ ರಾಜ್ಯ ಮಾದಿಗ ಸಂಘದ ಪ್ರಚಾರ ಸಮಿತಿ ಅಧ್ಯಕ್ಷ ಉಡಚಪ್ಪ ಮಾಳಗಿ ಮನವಿ ಸಲ್ಲಿಸಿದ್ದಾರೆ.
ಇತ್ತೀಚೆಗೆ ನಡೆದ ಜಿಲ್ಲಾ ಜನತಾ ದರ್ಶನದಲ್ಲಿ ಸಂಘದ ಮುಖಂಡರು ಸಚಿವ ಶಿವಾನಂದ ಪಾಟೀಲ್ ಅವರನ್ನು ಭೇಟಿ ಮಾಡಿ ಹಕ್ಕೊತ್ಥಾಯ ಪತ್ರ ಸಲ್ಲಿಸಿದ್ದಾರೆ. ಈ ವೇಳೆ ಮಾತನಾಡಿದ ಉಡಚಪ್ಪ ಮಾಳಗಿ, “ರಾಜ್ಯದಲ್ಲಿ ಗುತ್ತಿಗೆಯಲ್ಲಿಯೇ ಕೆಲಸ ಮಾಡಿಕೊಂಡು ಅತಂತ್ರ ಸ್ಥಿತಿಯಲ್ಲಿರುವ ಬಾಕಿ ಇರುವ ಡ್ರೈವರ್, ಲೋಡರ್,ಕ್ಲೀನರ್ಸ್ ಪೌರಕಾರ್ಮಿರನ್ನು ಪೌರಕಾರ್ಮಿಕರನ್ನು ಖಾಯಂ ಸರಕಾರಿ ಪೌರ ಕಾರ್ಮಿಕ ರೆಂದು ನೇಮಕ ಮಾಡಿಕೊಂಡು ಸೇವಾ ಭದ್ರತೆ ನೀಡಬೇಕು” ಎಂದು ಒತ್ತಾಯಿಸಿದರು.
ಹಾವೇರಿ ನಗರದಲ್ಲಿ ಎಸ್.ಸಿ, ಎಸ್.ಟಿ ಜನಾಂಗದವರಿಗೆ, ಈ ವರೆಗೂ ಪ್ರತ್ಯೇಕ ಸ್ಮಶಾನ ಇಲ್ಲದೇ ಅಲ್ಲಿ ಇಲ್ಲಿ ಶವ ಸಂಸ್ಕಾರ ಮಾಡಲಾಗುತ್ತಿದೆ. ಹಾಗಾಗಿ, ಕೂಡಲೇ ನಗರದ ಸೂಕ್ತ ಪ್ರದೇಶದಲ್ಲಿ ಆರು ಎಕರೆ ಜಾಗವನ್ನು ಗುರ್ತಿಸಿ ಸ್ಮಶಾನ ಜಾಗವನ್ನು ಮಂಜೂರು ಮಾಡಬೇಕು ಎಂದು ಕೇಳಿಕೊಂಡಿದ್ದಾರೆ. ಇಂದಿಗೂ ದಲಿತರು ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಶೈಕ್ಷಣಿಕ, ಆರ್ಥಿಕ,ಸಾಮಾಜಿಕ ಏಳಿಗೆಗೆ ಸರರ್ಕಾರ ಹೆಚ್ಚಿನ ಒತ್ತು ಕೊಟ್ಟು ಕೆಲಸ ಮಾಡಬೇಕು ಎಂದು ಆಗ್ರಹ ಮಾಡಿದರು.
ಈ ಸಂದರ್ಭದಲ್ಲಿ ಮಾದಿಗ ಸಮಾಜ ಮುಖಂಡರಾದ ಮಂಜಪ್ಪ ಮರೋಳ, ಹನುಮಂತಪ್ಪ ಹಂಸಿ,ಅಲೆಮಾರಿ ಸಂಘದ ಮುಖಂಡ ವಿಭೂತಿ ಶೆಟ್ಟಿ ಹಾಜರಿದ್ದರು.