ಈ ದಿನ ವಿಶೇಷ | ಪಠ್ಯಪುಸ್ತಕ ಪರಿಷ್ಕರಣೆಯ ನಡೆ ಗೊಂದಲದ ಗೂಡು- ತಜ್ಞರ ಆಕ್ರೋಶ

Date:

Advertisements
ರಾಜ್ಯಕ್ಕೆ ಪ್ರತ್ಯೇಕ ಶಿಕ್ಷಣ ನೀತಿ ರೂಪಿಸಿಕೊಳ್ಳುತೇವೆ ಎನ್ನುವ ಸರ್ಕಾರ ತರಾತುರಿಯಲ್ಲಿ ಪಠ್ಯಪುಸ್ತಕ ಪರಿಷ್ಕರಣೆ ಮಾಡುವ ಅಗತ್ಯವೇನಿದೆ? ಎನ್‌ಇಪಿ ರದ್ದತಿ ಬಗ್ಗೆಯೇ ಇನ್ನೂ ಖಚಿತ ಸ್ಪಷ್ಟನೆ ಕೊಡದ ರಾಜ್ಯ ಸರ್ಕಾರ, ಪಠ್ಯಪುಸ್ತಕ ಪರಿಷ್ಕರಣೆ ಸುತ್ತ ವಿವಾದವನ್ನು ಮೈಮೇಲೆ ಎಳೆದುಕೊಂಡಿದೆ.

ಬಿಜೆಪಿ ಸರ್ಕಾರ ಮಾಡಿದ ಕೇಸರೀಕರಣದ ಅವಾಂತರಗಳನ್ನು ಸರಿಪಡಿಸಲು ರಾಜ್ಯ ಸರ್ಕಾರ ಪಠ್ಯಪುಸ್ತಕ ಪರಿಷ್ಕರಣೆಗೆ ಕೈ ಹಾಕಿದೆ. ಆದರೆ ಪರಿಷ್ಕರಣೆಯ ಕ್ರಮ ವಿಧಾನ ಸರಿಯಿಲ್ಲವೆಂಬ ಆರೋಪಗಳು ಮತ್ತು ವಿರೋಧ ಶಿಕ್ಷಣತಜ್ಞರು ಮತ್ತು ಚಿಂತಕರಿಂದ ವ್ಯಕ್ತವಾಗಿದೆ. ಅಸ್ತಿತ್ವದಲ್ಲೇ ಇರದ ‘ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು 2005ರ’ (National Curriculum Framework- NCF 2005) ಮಾರ್ಗಸೂಚಿಯಂತೆ ರಾಜ್ಯ ಪಠ್ಯಕ್ರಮದ ಪಠ್ಯಪುಸ್ತಕಗಳ ಪರಿಷ್ಕರಣೆಗೆ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ ಮುಂದಾಗಿದೆ ಎಂಬುದು ಈ ವಿರೋಧದ ತಿರುಳು.

ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು 2005ರ ಮಾರ್ಗಸೂಚಿಯಂತೆ ರಾಜ್ಯ ಪಠ್ಯಕ್ರಮದ ಪಠ್ಯಪುಸ್ತಕಗಳ ಪರಿಷ್ಕರಣೆಗೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲ್ಲೂಕಿನ ಡಾ. ಮಂಜುನಾಥ ಜಿ ಹೆಗಡೆ ಅವರನ್ನು ಪರಿಷ್ಕರಣಾ ಸಮಿತಿಯ ಮುಖ್ಯ ಸಂಯೋಜಕರನ್ನಾಗಿ ನೇಮಿಸಿದೆ. 

ಈ ದಿನ.ಕಾಮ್‌ಗೆ ಲಭ್ಯವಿರುವ ಈ ಆದೇಶ ಪ್ರತಿಯಲ್ಲಿ, ಪರಿಷ್ಕರಣೆಗೆ 38 ಜನ ತಜ್ಞರ ಸಮಿತಿ ನೇಮಕ ಮಾಡಿರುವ ಸರ್ಕಾರ, ಒಬ್ಬರು ಮುಖ್ಯ ಸಂಯೋಜಕರು, ಐವರು ಅಧ್ಯಕ್ಷರು ಹಾಗೂ 37 ಸದಸ್ಯರನ್ನು ನೇಮಕ ಮಾಡಿದೆ. ಮೂರು ತಿಂಗಳ ಕಾಲಾವಕಾಶ ನಿಗದಿ ಮಾಡಿ ವರದಿ ಸಲ್ಲಿಸುವಂತೆ ಈ ಸಮಿತಿಗೆ ಸೂಚಿಸಲಾಗಿದೆ.

Advertisements

ಯುಪಿಎ ಸರ್ಕಾರದ ಅವಧಿಯಲ್ಲಿ ರಚನೆಯಾದ ‘2005ರ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟನ್ನು’ ರದ್ದುಪಡಿಸಿರುವ ಮೋದಿ ನೇತೃತ್ವದ ಕೇಂದ್ರ ಸರ್ಕಾರ, 2020ರಲ್ಲಿ ಕೇಸರಿ ಕಾರ್ಯಸೂಚಿಯ ಹೊಸ ‘ರಾಷ್ಟ್ರೀಯ ಶಿಕ್ಷಣ ನೀತಿ-2020’ ಅನ್ನು ಅನುಷ್ಠಾನಕ್ಕೆ ತಂದು, ‘ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು 2023’ನ್ನು ಅಳವಡಿಸಿಕೊಂಡಿದೆ. ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು ಹೇಗೆ ಇರಬೇಕು ಎಂಬ ವಿಚಾರದಲ್ಲಿ ವಿಷಯ ತಜ್ಞರಿಂದ ಕೆಲವು ರಾಜ್ಯಗಳಿಂದ ಈಗಾಗಲೇ ‘ಪೊಸಿಷನ್‌ ಪೇಪರ್‌’ಗಳನ್ನು ಕೇಂದ್ರ ಶಿಕ್ಷಣ ಇಲಾಖೆ ತರಿಸಿಕೊಂಡಿದೆ. 

ವಾಸ್ತವ ಸ್ಥಿತಿ ಹೀಗಿರುವಾಗ ಅಸ್ತಿತ್ವದಲ್ಲೇ ಇರದ ‘ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು 2005’ ಅಡಿಯಲ್ಲಿ ರಾಜ್ಯ ಸರ್ಕಾರ ಹೇಗೆ ಪಠ್ಯಪುಸ್ತಕಗಳನ್ನು ಪರಿಷ್ಕರಣೆ ಮಾಡಲು ಹೊರಟಿದೆ ಎಂಬ ಪ್ರಶ್ನೆಗಳು ಮುನ್ನೆಲೆಗೆ ಬಂದಿವೆ. ಜೊತೆಗೆ ಪರಿಷ್ಕರಣಾ ಸಮಿತಿ ರಚನೆಯಲ್ಲಿ ಪಾರದರ್ಶಕತೆಯನ್ನು ರಾಜ್ಯ ಸರ್ಕಾರ ಕಾಪಾಡಿಕೊಂಡಿಲ್ಲ ಎಂಬ ದೂರುಗಳು ಕೇಳಿಬರುತ್ತಿವೆ.

ದ್ವಂದ್ವ ನೀತಿಯಲ್ಲಿ ಸರ್ಕಾರ

ಬಿಜೆಪಿ ಸರ್ಕಾರದ ಅವಧಿಯಲ್ಲಿ ರೋಹಿತ್‌ ಚಕ್ರತೀರ್ಥ ನೇತೃತ್ವದಲ್ಲಿ ನಡೆದ ಪಠ್ಯಪುಸ್ತಕ ಪರಿಷ್ಕರಣೆ ವಿಚಾರ ರಾಜ್ಯಾದ್ಯಂತ ವಿವಾದ ಸೃಷ್ಟಿಸಿತ್ತು. ಪರಿಷ್ಕರಣೆ ಹೆಸರಲ್ಲಿ ಮಕ್ಕಳಿಗೆ ಕೋಮುವಾದ, ಬ್ರಾಹ್ಮಣೀಕರಣ ಹಾಗೂ ಸಂವಿಧಾನ ವಿರೋಧಿ ನಿಲುವಿನ ನಂಜಿನ ಪಾಠಗಳನ್ನು ಅಳವಡಿಸಲಾಗಿತ್ತು ಎಂದು ಆರೋಪಿಸಿ, ಸ್ವಾಮೀಜಿಗಳು, ಪ್ರಗತಿಪರ ಸಾಹಿತಿಗಳು, ಚಿಂತಕರು ಹಾಗೂ ಶಿಕ್ಷಣ ತಜ್ಞರು ಬೀದಿಗಿಳಿದು ಹೋರಾಟ ಮಾಡಿದರು. 

ಪ್ರತಿಭಟನೆಗೆ ಧ್ವನಿಗೂಡಿಸಿದ ಕಾಂಗ್ರೆಸ್‌, ‘ಅಧಿಕಾರಕ್ಕೆ ಬಂದರೆ ಪಠ್ಯಪುಸ್ತಕದಲ್ಲಿನ ತಪ್ಪುಗಳನ್ನು ಸರಿಪಡಿಸುತ್ತೇವೆ’ ಎಂದು ಮಾತು ಕೊಟ್ಟಿತು. ಡಿಕೆ ಶಿವಕುಮಾರ್‌ ಅವರಂತೂ ರೋಹಿತ್‌ ಚಕ್ರತೀರ್ಥ ಸಮಿತಿಯ ಪರಿಷ್ಕೃತ ಪಠ್ಯಗಳನ್ನು ಬಹಿರಂಗವಾಗಿ ಹರಿದು ಹಾಕಿ, ಪ್ರತಿಭಟನೆಗೆ ಬೆಂಬಲ ಸೂಚಿಸಿದ್ದರು. ಪರಿಣಾಮ ಇಡೀ ಪಠ್ಯಪುಸ್ತಕ ಹೋರಾಟ ಒಂದು ರೀತಿಯಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬರಲು ತನ್ನದೇ ಕೊಡುಗೆ ನೀಡಿದ್ದು ಹೌದು. ಆದರೆ, ಸರ್ಕಾರ ಈಗ ಮಾಡುತ್ತಿರುವುದೇನು? ಬಿಜೆಪಿಯ ಹಾದಿಯಲ್ಲೇ ಕಾಂಗ್ರೆಸ್‌ ನಡೆಯುತ್ತಿದೆಯೇ ಎನ್ನುವ ಅನುಮಾನ ಉಂಟಾಗುತ್ತಿದೆ.

ಈ ಸುದ್ದಿ ಓದಿದ್ದೀರಾ? ಮತ್ತೆ ಪಠ್ಯಪುಸ್ತಕ ಪರಿಷ್ಕರಣೆ; ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟಿನಡಿ ಪರಿಷ್ಕರಿಸಲು ಸಮಿತಿ ರಚನೆ

ಒಂದು ಕಡೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉನ್ನತ ಶಿಕ್ಷಣ ಸಚಿವ ಡಾ. ಎಂ ಸಿ ಸುಧಾಕರ್ ಸೇರಿದಂತೆ ಅನೇಕ ಸಚಿವರು ಎನ್‌ಇಪಿಯನ್ನು ರದ್ದು ಮಾಡಿ, ರಾಜ್ಯಕ್ಕೆ ಪ್ರತ್ಯೇಕ ಶಿಕ್ಷಣ ನೀತಿಯನ್ನು ರೂಪಿಸಿಕೊಳ್ಳುವುದಾಗಿ ಹೇಳುತ್ತಾರೆ. ಆದರೆ, ಇತ್ತ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ ಸಚಿವ ಮತ್ತೆ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟಿನ ಕಡೆ ಮುಖಮಾಡುತ್ತಾರೆ. ಅದೂ ಅಸ್ತಿತ್ವದಲ್ಲೇ ಇರದ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು!

ಪ್ರತ್ಯೇಕವಾಗಿ ರಾಜ್ಯ ಶಿಕ್ಷಣ ನೀತಿ ರೂಪಿಸಿಕೊಳ್ಳುತೇವೆ ಎನ್ನುವ ಸರ್ಕಾರ ತರಾತುರಿಯಲ್ಲಿ ಪಠ್ಯಪುಸ್ತಕ ಪರಿಷ್ಕರಣೆ ಮಾಡುವ ಅಗತ್ಯವೇನಿದೆ? ರಾಜ್ಯ ಶಿಕ್ಷಣ ನೀತಿ ರೂಪಿಸಿಕೊಂಡ ಮೇಲೆ ರಾಜ್ಯ ಪಠ್ಯಕ್ರಮ ಚೌಕಟ್ಟು ಸಿದ್ಧಪಡಿಸಿ ಹೊಸದಾಗಿ ಪಠ್ಯಕ್ರಮ ರಚಿಸಿಕೊಳ್ಳಬಹುದಲ್ಲವೇ? ಎನ್‌ಇಪಿ ರದ್ದತಿ ಬಗ್ಗೆಯೇ ಇನ್ನೂ ಸ್ಪಷ್ಟನೆ ಕೊಡದ ರಾಜ್ಯ ಸರ್ಕಾರ ಪಠ್ಯಪುಸ್ತಕ ಪರಿಷ್ಕರಣೆ ಸುತ್ತ ಎದ್ದಿರುವ ಈ ಎಲ್ಲ ಪಶ್ನೆಗಳಿಗೂ ಉತ್ತರಿಸಬೇಕಿದೆ.

ಪರಿಷ್ಕರಣಾ ಸಮಿತಿ ರಚನೆ ಕುರಿತು ಶಿಕ್ಷಣ ತಜ್ಞ ಡಾ. ವಿಪಿ ನಿರಂಜನಾರಾಧ್ಯ ಅವರನ್ನು ‘ಈ ದಿನ.ಕಾಮ್‌’ ಮಾತನಾಡಿಸಿದಾಗ, ”ರಾಜ್ಯ ಸರ್ಕಾರ ಏನು ಮಾಡಲು ಹೊರಟಿದೆ ಎಂಬುದು ಅರ್ಥವಾಗುತ್ತಿಲ್ಲ. ಈಗಾಗಲೇ ಕೇಂದ್ರ ಸರ್ಕಾರ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು 2005 ಅನ್ನು ರದ್ದುಪಡಿಸಿ, ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು 2023 ಅನ್ನು ಅಳವಡಿಸಿಕೊಂಡಿದೆ. ಇದಕ್ಕೆ ಬೇಕಾದ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಅಸ್ತಿತ್ವದಲ್ಲೇ ಇರದ ಪಠ್ಯಕ್ರಮ ಚೌಕಟ್ಟಿನಡಿ ಇವರು ಪಠ್ಯಗಳನ್ನು ಹೇಗೆ ಪರಿಷ್ಕರಿಸುತ್ತಾರೆ? ಶಿಕ್ಷಣ ಇಲಾಖೆಗಾಗಲಿ ಅಥವಾ ಸಚಿವರಿಗಾಗಲಿ ಈ ಬಗ್ಗೆ ಮಾಹಿತಿ ಇದೆಯೋ ಇಲ್ಲವೋ ಗೊತ್ತಿಲ್ಲ” ಎಂದರು.

”ರೋಹಿತ್‌ ಚಕ್ರತೀರ್ಥ ಮಾಡಿರುವ ಯಡವಟ್ಟುಗಳ ವಿರುದ್ಧ ನಾವು ಸಾಕಷ್ಟು ಹೋರಾಟ ಮಾಡಿದ್ದೇವೆ. ಸರ್ಕಾರ ಮಾತುಕೊಟ್ಟಂತೆ ನಡೆದುಕೊಳ್ಳುತ್ತಿಲ್ಲ. 12 ವರ್ಷಗಳಿಂದ ಪಠ್ಯಪುಸ್ತಕ ಪುನರ್‌ ರಚನೆ ಆಗಿಲ್ಲ. ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ 2010 ರಲ್ಲಿ ಪ್ರೊ. ಮುಡಂಬಡಿತ್ತಾಯ ಸಮಿತಿಯಿಂದ ರಾಜ್ಯ ಪಠ್ಯಪುಸ್ತಕಗಳನ್ನು ಪುನರ್‌ ರಚಿಸಲಾಯಿತು. ಇದರಲ್ಲಿ ಕೆಲವು ದೋಷಗಳು ಇದ್ದವು. ಇದನ್ನು ಸರಿಪಡಿಸಲು ಆಗಿನ ಸಿದ್ದರಾಮಯ್ಯ ಸರ್ಕಾರ ಬರಗೂರು ರಾಮಚಂದ್ರ ಅವರ ನೇತೃತ್ವದಲ್ಲಿ ಸಮಗ್ರವಾಗಿ ಪಠ್ಯಗಳನ್ನು ಪುನರ್ ಪರಿಷ್ಕರಿಸಿತು. ಮತ್ತೆ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ರೋಹಿತ್‌ ಚಕ್ರತೀರ್ಥ ನೇತೃತ್ವದಲ್ಲಿ ಪಠ್ಯಗಳನ್ನು ಪರಿಷ್ಕರಿಸಿ ಆರ್‌ಎಸ್‌ಎಸ್‌ ಸಿದ್ಧಾಂತ ಹೇರಿತು. ಒಟ್ಟಾರೆ ಎಲ್ಲ ಪಠ್ಯಗಳೂ ದೋಷಪೂರಿತ. ಹೊಸ ಪಠ್ಯಪುಸ್ತಕಗಳ ರಚನೆ ಈ ಕಾಲದ ಅಗತ್ಯವಾಗಿದೆ” ಎಂದು ಹೇಳಿದರು.

ರಾಜ್ಯದಲ್ಲಿ ಆಗಬೇಕಿರುವುದು ಪಠ್ಯಪರಿಷ್ಕರಣೆ ಅಲ್ಲ

”ಪಠ್ಯಪುಸ್ತಕ ವಿಷಯದಲ್ಲಿ ರಾಜ್ಯ ಸರ್ಕಾರಕ್ಕೆ ಯಾವುದೇ ಸ್ಪಷ್ಟತೆ ಇದ್ದಂತೆ ಕಾಣುತ್ತಿಲ್ಲ. ಈಗಿನ ಶಿಕ್ಷಣ ಸಚಿವರಿಗೆ ಶಿಕ್ಷಣದ ನೈಜ ಕಾಳಜಿಗಳು ಗೊತ್ತಿವೆಯಾ? ಒಂದು ಕಡೆ ಎನ್‌ಇಪಿ ರದ್ದು ಮಾಡಿ, ರಾಜ್ಯ ಶಿಕ್ಷಣ ನೀತಿ ಜಾರಿಗೆ ತರುತ್ತೇವೆ ಎಂದು ಮುಖ್ಯಮಂತ್ರಿಗಳು ಹೇಳುತ್ತಾರೆ. ಇನ್ನೊಂದು ಕಡೆ ಈ ಶಿಕ್ಷಣ ಸಚಿವರು ಕೇಂದ್ರದ ಮೋದಿ ಶಿಕ್ಷಣ ನೀತಿಯ ನೆರಳಲ್ಲಿ ಪಠ್ಯಗಳನ್ನು ಪರಿಷ್ಕರಿಸಲು ಹೊರಟಿದ್ದಾರೆ. ಇದು ಮತ್ತೊಂದು ವೈದಿಕಶಾಹಿ ನಡೆ ಅಷ್ಟೇ. ರಾಜ್ಯದಲ್ಲಿ ಆಗಬೇಕಿರುವುದು ಪಠ್ಯಪರಿಷ್ಕರಣೆ ಅಲ್ಲ, ಬದಲಾಗಿ ಪಠ್ಯಗಳ ಪುನರ್‌ ರಚನೆ” ಎಂದು ಶಿಕ್ಷಣ ತಜ್ಞ ಶ್ರೀಪಾದ್‌ ಭಟ್‌ ತಿಳಿಸಿದರು.

ಸಮಿತಿ ರಚನೆಯಲ್ಲಿ ಸರ್ಕಾರ ಪಾರದರ್ಶಕತೆ ಕಾಪಾಡಿಕೊಂಡಿದೆಯಾ? ಯಾವ ಆಧಾರದಲ್ಲಿ ಇವರು ಪಠ್ಯಪುಸ್ತಕ ಪರಿಷ್ಕರಣಾ ಸಮಿತಿ ರಚಿಸಿದ್ದಾರೆ. ಸಂವಿಧಾನ ಆಶಯಗಳನ್ನು ಎತ್ತಿ ಹಿಡಿಯುವ ಮನಸ್ಸುಗಳು ಸಮಿತಿಯಲ್ಲಿ ಯಾರಿದ್ದಾರೆ? ಕೇವಲ ಶಿಕ್ಷಕರೇ ತುಂಬಿಕೊಂಡಿದ್ದಾರೆ. ಮಹಿಳಾ ಪ್ರಾತಿನಿಧ್ಯ, ದಲಿತ ಪ್ರಾತಿನಿಧ್ಯ ಹೀಗೆ ಎಲ್ಲ ವಲಯಗಳಿಂದಲೂ ವಿಷಯ ತಜ್ಞರು ಇರಬೇಕಲ್ವಾ? ಎಲ್ಲಿದ್ದಾರೆ. ಈ ಸರ್ಕಾರ ಕೇವಲ ಮೂರು ತಿಂಗಳಲ್ಲಿ ನಮ್ಮ ನಿರೀಕ್ಷೆಗಳನ್ನು ಹುಸಿಯಾಗಿಸಿದೆ. ಈ ಸರ್ಕಾರ ಯಾರ ಪಠ್ಯಗಳನ್ನು ಪರಿಷ್ಕರಿಸುತ್ತಾರೆ? ರೋಹಿತ್‌ ಚಕ್ರತೀರ್ಥನ ಯಡವಟ್ಟುಗಳನ್ನೇ? ಬರಗೂರು ರಾಮಚಂದ್ರಪ್ಪ ಪರಿಷ್ಕರಿಸಿದ ಪಠ್ಯಗಳನ್ನೇ? ಯಾವುದರ ಬಗ್ಗೆಯೂ ಮಾಹಿತಿ ಇಲ್ಲ” ಎಂದು ಬೇಸರ ವ್ಯಕ್ತಪಡಿಸಿದರು.           

ಕುವೆಂಪು ಹೋರಾಟ ಸಮಿತಿ ಅಧ್ಯಕ್ಷ ಜಿ ಬಿ ಪಾಟೀಲ್‌ ಅವರು ಪ್ರತಿಕ್ರಿಯಿಸಿ, “ಪಠ್ಯಪುಸ್ತಕ ಪರಿಷ್ಕರಣೆಗೆ ಸರ್ಕಾರ ಮುಂದಾಗಿರುವುದು ಒಳ್ಳೆಯದು. ಆದರೆ ನಮಗೆ ಸಮಗ್ರ ಬದಲಾವಣೆಯಾಗಬೇಕು. ಸಂವಿಧಾನದ ಆಶಯಗಳು ಪಠ್ಯಪುಸ್ತಕದಲ್ಲಿ ಎದ್ದುಕಾಣಬೇಕು. ಐದು ವರ್ಷಗಳಿಗೊಮ್ಮೆ ಪಠ್ಯಗಳ ಪುನರ್‌ ರಚನೆ ಆಗಬೇಕು ಎಂಬ ನಿಯಮ ಇದೆ. ಆದರೆ 12 ವರ್ಷಗಳಿಂದ ಪಠ್ಯಗಳ ಪುನರ್‌ ರಚನೆ ಇಲ್ಲ. ಪರಿಷ್ಕರಣೆ ಬದಲು ಪುನರ್‌ ರಚನೆ ಅಗತ್ಯವಿದೆ” ಎಂದು ಹೇಳಿದರು.

WhatsApp Image 2023 04 01 at 3.53.40 PM e1680350106945
+ posts

ಶರಣು ಚಕ್ರಸಾಲಿ ಅವರು ಬಾದಾಮಿ ತಾಲ್ಲೂಕಿನ ತಳಕವಾಡ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಕಳೆದ 10 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಸದ್ಯ 'ಈ ದಿನ.ಕಾಮ್‌' ಮಾಧ್ಯಮ ಸಂಸ್ಥೆಯಲ್ಲಿ ಹಿರಿಯ ವರದಿಗಾರರಾಗಿ 2022 ಮಾರ್ಚ್‌1ರಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ರಾಜಕೀಯ, ಸಚಿವಾಲಯದ ವರದಿಗಾರಿಕೆ ಹಾಗೂ ಕೃಷಿ ಸಂಬಂಧಿತ ಸ್ಟೋರಿಗಳನ್ನು ಬರೆಯುವುದು ಇವರ ಆಸಕ್ತಿ. ಟಿವಿ ನಿರೂಪಣೆ, ವಿಡಿಯೋ ಸಂದರ್ಶನ, ವಿಡಿಯೋ ಸ್ಟೋರಿ, ತನಿಖಾ ವರದಿಗಾರಿಕೆ ಹಾಗೂ ನುಡಿ ಬರಹ ಬರೆಯುವುದು ಇವರ ಅಚ್ಚುಮೆಚ್ಚಿನ ಕ್ಷೇತ್ರ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಶರಣು ಚಕ್ರಸಾಲಿ
ಶರಣು ಚಕ್ರಸಾಲಿ
ಶರಣು ಚಕ್ರಸಾಲಿ ಅವರು ಬಾದಾಮಿ ತಾಲ್ಲೂಕಿನ ತಳಕವಾಡ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಕಳೆದ 10 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಸದ್ಯ 'ಈ ದಿನ.ಕಾಮ್‌' ಮಾಧ್ಯಮ ಸಂಸ್ಥೆಯಲ್ಲಿ ಹಿರಿಯ ವರದಿಗಾರರಾಗಿ 2022 ಮಾರ್ಚ್‌1ರಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ರಾಜಕೀಯ, ಸಚಿವಾಲಯದ ವರದಿಗಾರಿಕೆ ಹಾಗೂ ಕೃಷಿ ಸಂಬಂಧಿತ ಸ್ಟೋರಿಗಳನ್ನು ಬರೆಯುವುದು ಇವರ ಆಸಕ್ತಿ. ಟಿವಿ ನಿರೂಪಣೆ, ವಿಡಿಯೋ ಸಂದರ್ಶನ, ವಿಡಿಯೋ ಸ್ಟೋರಿ, ತನಿಖಾ ವರದಿಗಾರಿಕೆ ಹಾಗೂ ನುಡಿ ಬರಹ ಬರೆಯುವುದು ಇವರ ಅಚ್ಚುಮೆಚ್ಚಿನ ಕ್ಷೇತ್ರ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಧರ್ಮಸ್ಥಳ | 20 ವರ್ಷಗಳ ಅಸಹಜ ಸಾವು ಪ್ರಕರಣ; ತನಿಖೆ ತೀವ್ರಗೊಳಿಸಲು ಸಮಾನ ಮನಸ್ಕರ ಆಗ್ರಹ

ಬೆಂಗಳೂರಿನ ಪ್ರಮುಖ ಸಮಾನ ಮನಸ್ಕ ಸಂಘಟನೆಗಳು ಗುರುವಾರ ಸಭೆ ಸೇರಿ ಧರ್ಮಸ್ಥಳ...

ಬ್ರಹ್ಮಾವರ | ಮಹೇಶ್ ಶೆಟ್ಟಿ ತಿಮರೋಡಿಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ

ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿಎಲ್ ಸಂತೋಷ್ ವಿರುದ್ಧ ಅವಹೇಳನಾಕಾರಿ ಹೇಳಿಕೆ...

ಚಿಕ್ಕಮಗಳೂರು l ಸಭಾಧ್ಯಕ್ಷರೇ ಮಲೆನಾಡಿನ ಸಮಸ್ಯೆ ಬಗ್ಗೆ ಚರ್ಚಿಸಲು ಅವಕಾಶ ಕಲ್ಪಿಸಿ; ಹೆಚ್.ಡಿ ತಮ್ಮಯ್ಯ

ಮಲೆನಾಡಿನಲ್ಲಿ ಕಾಡುತ್ತಿರುವ ಕಾಡು-ಪ್ರಾಣಿ-ಮಾನವ ಸಂಘರ್ಷದಿಂದ ಜನಜೀವನ ಅಸ್ತವ್ಯಸ್ಥವಾಗಿದೆ. ಇಂತಹ ಗಂಭೀರ ಸಮಸ್ಯೆಗಳ...

ಧರ್ಮಸ್ಥಳ ಪ್ರಕರಣಗಳ ಸಮಗ್ರ ತನಿಖೆಗೆ ಎಡಪಕ್ಷಗಳ ಒತ್ತಾಯ

ಧರ್ಮಸ್ಥಳದಲ್ಲಿ ನಡೆದಿರುವ ವೇದವಲ್ಲಿ, ಪದ್ಮಲತಾ, ನಾರಾಯಣ, ಯಮುನಾ ಮತ್ತು ಸೌಜನ್ಯ, ಮುಂತಾದ...

Download Eedina App Android / iOS

X