ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ ತಾಲೂಕು ವೈದ್ಯಾಧಿಕಾರಿಯಾಗಿದ್ದ ಡಾ. ಎಲ್ಡೋಸ್ ಎಂಬ ವ್ಯಕ್ತಿ ಮಹಿಳೆಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿ ಜೈಲು ಪಾಲಾಗಿದ್ದಾನೆ.
ಡಿ ದರ್ಜೆಯಾಗಿ ಕೆಲಸ ಮಾಡುತ್ತಿದ್ದ ಮಹಿಳೆ, ಈ ಮೊದಲು ಕಳಸದಲ್ಲಿ ಕೆಲಸ ಮಾಡುತ್ತಿದ್ದರು. ನಂತರ ನರಸಿಂಹರಾಜಪುರ ತಾಲೂಕಿನ ಬಾಳೆಹೊನ್ನೂರಿಗೆ ವರ್ಗಾವಣೆಯಾಗಿ ಬಂದಿದ್ದರು.
ಸೆ.20ರಂದು ಬಾಳೆಹೊನ್ನೂರು ವಸತಿ ಗೃಹಕ್ಕೆ ಡಿ ದರ್ಜೆ ನೌಕರೆಯನ್ನು ಈ ವೈದ್ಯ ಬರಲು ಹೇಳಿದ್ದ. ಮಹಿಳೆ ತನ್ನ ಗಂಡ ಹಾಗೂ ಕುಟುಂಬಸ್ಥರಿಗೆ ವಿಷಯ ತಿಳಿಸಿ, ಬಾಳೆಹೊನ್ನೂರು ಪಟ್ಟಣದ ಸರ್ಕಾರಿ ವೈದ್ಯರ ವಸತಿಗೃಹಕ್ಕೆ ಎಲ್ಲರನ್ನು ಕರೆತಂದಿದ್ದರು. ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದ ವೈದ್ಯನನ್ನು ಸಾರ್ವಜನಿಕರು ಹಾಗೂ ಮಹಿಳೆಯ ಕುಟುಂಬಸ್ಥರು ಹಿಗ್ಗಾಮುಗ್ಗಾ ಥಳಿಸಿ ಪೊಲೀಸ್ ವಶಕ್ಕೆ ನೀಡಿದ್ದರು.
ಘಟನೆಯ ನಂತರ ವೈದ್ಯನನ್ನು ನರಸಿಂಹರಾಜಪುರ ತಾಲ್ಲೂಕು ಆಸ್ಪತ್ರೆ ವೈದ್ಯಾಧಿಕಾರಿ ಹುದ್ದೆಯಿಂದ ವಜಾ ಮಾಡಲಾಗಿತ್ತು. ಡಾ. ಎಲ್ಡೋಸ್ ವಿರುದ್ಧ ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಲಾಗಿದೆ. ಆರೋಪಿಗೆ ನ್ಯಾಯಾಲಯ ಜಾಮೀನು ನೀಡಿತ್ತು. ಸದ್ಯ ವಿಚಾರಣೆ ನಡೆಸಿದ ನರಸಿಂಹರಾಜಪುರ ನ್ಯಾಯಾಲಯದ ನ್ಯಾಯಾಧೀಶರು ಜಾಮೀನು ರದ್ದುಗೊಳಿಸಿ ಆದೇಶ ನೀಡಿದ್ದಾರೆ.
ಜಾಮೀನು ರದ್ದುಗೊಳಿಸಿರುವ ಎನ್.ಆರ್. ಪುರ, ಜೆ.ಎಂ.ಎಫ್.ಸಿ ನ್ಯಾಯಾಲಯ, ಅಕ್ಟೋಬರ್ 7 ರವರೆಗೆ ಆರೋಪಿ ಡಾ. ಎಲ್ಡೋಸ್ ನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದು ವೈದ್ಯ ಜೈಲು ಪಾಲಾಗಿದ್ದಾನೆ.