- ಸುಸ್ಥಿರ ಕೃಷಿ ಉತ್ಪನ್ನಗಳ ಉತ್ಪಾದಕತೆಗೆ ಸ್ವಾಮಿನಾಥನ್ ನೀಡಿದ ಕೊಡುಗೆ ಅಪಾರ: ಸಿಎಂ
- ‘ಸ್ವಾಮಿನಾಥನ್ ಶಿಫಾರಸ್ಸುಗಳನ್ನು ಅನುಷ್ಠಾನಗೊಳಿಸುವುದು ಅವರಿಗೆ ಸಲ್ಲಿಸುವ ಗೌರವ’
ಅಧಿಕ ಇಳುವರಿಯ ಭತ್ತದ ತಳಿ ಅಭಿವೃದ್ಧಿಯಿಂದ ದೇಶದ ಆಹಾರ ಭದ್ರತೆಯಲ್ಲಿ ಪ್ರಮುಖ ಪಾತ್ರ ವಹಿಸುವ ಮೂಲಕ ಹಸಿರು ಕ್ರಾಂತಿಯ ಹರಿಕಾರ ಎಂದೇ ಪ್ರಸಿದ್ಧರಾಗಿದ್ದ ಎಂ ಎಸ್ ಸ್ವಾಮಿನಾಥನ್ ಅವರು ಚೆನ್ನೈನಲ್ಲಿ ಗುರುವಾರ ನಿಧನರಾಗಿದ್ದು, ರಾಜ್ಯದ ಮುಖ್ಯಮಂತ್ರಿ, ಮಾಜಿ ಮುಖ್ಯಮಂತ್ರಿಗಳು ಸಂತಾಪ ಸೂಚಿಸಿದ್ದಾರೆ.
ಸಿಎಂ ಸಿದ್ದರಾಮಯ್ಯ ಸಂತಾಪ ಸೂಚಿಸಿ ಟ್ವೀಟ್ ಮಾಡಿ, “ಖ್ಯಾತ ಕೃಷಿ ವಿಜ್ಞಾನಿ, ಹಸಿರು ಕ್ರಾಂತಿಯ ಹರಿಕಾರರಾದ ಎಂ.ಎಸ್ ಸ್ವಾಮಿನಾಥನ್ ಅವರ ನಿಧನದ ಸುದ್ದಿ ದುಃಖವುಂಟುಮಾಡಿದೆ. ಸುಸ್ಥಿರ ಕೃಷಿ ಉತ್ಪನ್ನಗಳ ಉತ್ಪಾದಕತೆಗೆ ಸ್ವಾಮಿನಾಥನ್ ಅವರು ನೀಡಿದ ಕೊಡುಗೆಗಳ ಫಲವಾಗಿ ಭಾರತವು ಕೃಷಿ ಉತ್ಪಾದಕತೆಯಲ್ಲಿ ಸ್ವಾವಲಂಬನೆ ಸಾಧಿಸಿ, ಜಾಗತಿಕ ಮನ್ನಣೆ ಗಳಿಸಲು ಸಾಧ್ಯವಾಯಿತು” ಎಂದು ಸ್ಮರಿಸಿದ್ದಾರೆ.
“ವಿಶ್ವಸಂಸ್ಥೆಯಿಂದ ಆರ್ಥಿಕ ಪರಿಸರ ವಿಜ್ಞಾನದ ಪಿತಾಮಹ ಎಂದು ಕರೆಯಲ್ಪಟ್ಟ ಹಿರಿಯ ಸಸ್ಯ ತಳಿ ಶಾಸ್ತ್ರಜ್ಞ ಸ್ವಾಮಿನಾಥನ್ ಅಗಲಿಕೆ ನಾಡಿಗೆ ತುಂಬಲಾರದ ನಷ್ಟ. ಮೃತರ ಆತ್ಮಕ್ಕೆ ಶಾಂತಿ ಸಿಗಲಿ, ಅವರ ಕುಟುಂಬವರ್ಗ ಮತ್ತು ಬಂಧು ಮಿತ್ರರಿಗೆ ನೋವು ಭರಿಸುವ ಶಕ್ತಿ ದೊರಕಲಿ ಎಂದು ಪ್ರಾರ್ಥಿಸುತ್ತೇನೆ” ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಟ್ವೀಟ್ ಮಾಡಿ, “ಡಾ. ಎಂ ಎಸ್ ಸ್ವಾಮಿನಾಥನ್ ರವರು ಭಾರತ ಕಂಡ ಶ್ರೇಷ್ಠ ಕೃಷಿ ವಿಜ್ಞಾನಿ. ಭಾರತದ ಆರ್ಥಿಕತೆಯ ಪ್ರಮುಖ ಬೆನ್ನೆಲುಬಾಗಿರುವ ಕೃಷಿ ಕ್ಷೇತ್ರಕ್ಕೆ ಅವರ ಕೊಡುಗೆ ಅಪಾರವಾದುದು. ಅವರು ಇಂದು ಇಹಲೋಕವನ್ನು ತ್ಯಜಿಸಿರುವುದು ಭಾರತದ ಕೃಷಿ ವಲಯಕ್ಕೆ ತುಂಬಲಾರದ ನಷ್ಟವಾಗಿದೆ. ಈ ದೇಶದ ಕೃಷಿ ಸುಧಾರಣೆಗೆ ಅವರು ನೀಡಿದ್ದ ಶಿಫಾರಸ್ಸುಗಳನ್ನು ಸಮಗ್ರವಾಗಿ ಅನುಷ್ಠಾನಗೊಳಿಸುವುದೊಂದೆ ಅವರಿಗೆ ಸಲ್ಲಿಸುವ ಪರಮೋಚ್ಛ ಗೌರವ” ಎಂದಿದ್ದಾರೆ.
ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಟ್ವೀಟ್ ಮಾಡಿ, “ಭಾರತವು ಆಹಾರ ಭದ್ರತೆ ಸಾಧಿಸುವಲ್ಲಿ ಮಹತ್ವದ ಕೊಡುಗೆ ನೀಡಿದ, ಅಧಿಕ ಇಳುವರಿಯ ಭತ್ತದ ತಳಿ ಅಭಿವೃದ್ಧಿಪಡಿಸಿದ ಶ್ರೇಷ್ಠ ಕೃಷಿ ವಿಜ್ಞಾನಿ ಪದ್ಮವಿಭೂಷಣ ಎಂ.ಎಸ್.ಸ್ವಾಮಿನಾಥನ್ ಅವರು ನಿಧನರಾದ ಸುದ್ದಿ ತಿಳಿದು ದುಃಖವಾಯಿತು. ಸ್ವಾತಂತ್ರ್ಯ ಭಾರತವು ಆಹಾರ ಪದಾರ್ಥಗಳ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸುವುದಕ್ಕೆ ಸ್ವಾಮಿನಾಥನ್ ಅವರ ದುಡಿಮೆ ಬಹಳ ದೊಡ್ಡದು. ಅಷ್ಟೇ ಅಲ್ಲ; ಅವರು ದೇಶದ ಕೃಷಿ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಕಾರಣರಾದ ಹಸಿರುಕ್ರಾಂತಿಯ ಹರಿಕಾರರು. ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ ಹಾಗೂ ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿಯನ್ನು ಆ ಭಗವಂತ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ” ಎಂದು ತಿಳಿಸಿದ್ದಾರೆ.
ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಕೂಡ ಟ್ವೀಟ್ ಮಾಡಿದ್ದು, “ಡಾ. ಎಂ.ಎಸ್.ಸ್ವಾಮಿನಾಥನ್ ಅವರ ನಿಧನವನ್ನು ತಿಳಿದು ದುಃಖವಾಗುತ್ತಿದೆ. ಅನೇಕ ಸಂದರ್ಭಗಳಲ್ಲಿ ಅವರ ಸಲಹೆಯಿಂದ ನಾನು ಹೆಚ್ಚು ಪ್ರಯೋಜನ ಪಡೆದಿದ್ದೇನೆ ಮತ್ತು ಇತ್ತೀಚಿನವರೆಗೂ ಅವರೊಂದಿಗೆ ಸಂಪರ್ಕದಲ್ಲಿದ್ದೆ. ಅವರ ಕುಟುಂಬ ಮತ್ತು ಸ್ನೇಹಿತರಿಗೆ ನನ್ನ ಸಂತಾಪ” ಎಂದು ತಿಳಿಸಿದ್ದಾರೆ.
ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಕೂಡ ಸಂತಾಪ ಸೂಚಿಸಿ ಟ್ವೀಟ್ ಮಾಡಿದ್ದು, “ಭಾರತದ ಹಸಿರು ಕ್ರಾಂತಿಯ ಹರಿಕಾರ, ಪ್ರಖ್ಯಾತ ಕೃಷಿ ವಿಜ್ಞಾನಿ, ಹಿರಿಯರಾದ ಪದ್ಮವಿಭೂಷಣ ಎಂ.ಎಸ್.ಸ್ವಾಮಿನಾಥನ್ ಅವರು ನಿಧನರಾದ ವಿಷಯ ತಿಳಿದು ತೀವ್ರ ದುಃಖವಾಗಿದೆ. ಅವರ ಸುದೀರ್ಘ ಅನುಭವ, ಸಾಧನೆಗಳು, ರೈತರ ಜೀವನದಲ್ಲಿ ಉಂಟುಮಾಡಿದ ಪರಿವರ್ತನೆ, ರಾಷ್ಟ್ರದ ಆರ್ಥಿಕ ಬೆಳವಣಿಗೆಗೆ ಅವರ ಕೊಡುಗೆ ಅಸಾಮಾನ್ಯವಾದದ್ದು. ಅಗಲಿದ ಆ ಹಿರಿಯ ಚೇತನಕ್ಕೆ ಸದ್ಗತಿ ಕೋರುತ್ತಾ, ಅವರ ಕುಟುಂಬ ಹಾಗೂ ಅಭಿಮಾನಿಗಳಿಗೆ ಈ ನೋವನ್ನು ಭರಿಸುವ ಶಕ್ತಿಯನ್ನು ದೇವರು ನೀಡಲಿ ಎಂದು ಪ್ರಾರ್ಥಿಸುತ್ತೇನೆ” ಎಂದಿದ್ದಾರೆ.
“ಹೆಸರಾಂತ ಭಾರತೀಯ ಕೃಷಿ ವಿಜ್ಞಾನಿ ಡಾ. ಎಂ ಎಸ್ ಸ್ವಾಮಿನಾಥನ್ ಅವರು ಭಾರತದ ಹಸಿರು ಕ್ರಾಂತಿಯ ಹರಿಕಾರರು. ನಮ್ಮ ಬೆಳವಣಿಗೆಯಲ್ಲಿ ನಿರ್ಣಾಯಕ ಹಂತದಲ್ಲಿ ಆಹಾರ ಉತ್ಪಾದನೆಯ ವಿಷಯದಲ್ಲಿ ನಮ್ಮ ರಾಷ್ಟ್ರವು ಸ್ವಾವಲಂಬಿಯಾಗಲು ಸಹಾಯ ಮಾಡಿದರು. ಅವರ ಕುಟುಂಬ ಸದಸ್ಯರಿಗೆ ದುಃಖ ಭರಿಸುವ ಶಕ್ತಿ ದೇವರು ಕೊಡಲಿ ಎಂದು ಪ್ರಾರ್ಥಿಸುತ್ತೇನೆ” ಎಂದು ಡಿಸಿಎಂ ಡಿಕೆ ಶವಕುಮಾರ್ ಸಂತಾಪ ಸೂಚಿಸಿ ಟ್ವೀಟ್ ಮಾಡಿದ್ದಾರೆ.