ರೈತರಿಗೆ ಅಗತ್ಯ ಸೇವೆಗಳನ್ನು-ಮಾಹಿತಿಗಳನ್ನು ಒದಗಿಸುವುದು ರೈತ ಸಂಪರ್ಕ ಕೇಂದ್ರ. ಇಲ್ಲಿ ಕೃಷಿಗೆ ಸಂಬಂಧಿಸಿದ ಬಿತ್ತನೆ ಬೀಜ, ಗೊಬ್ಬರ, ರಾಸಾಯನಿಕ ಧಾನ್ಯಗಳು ಇನ್ನಿತರ ವಸ್ತುಗಳು ದೊರೆಯುತ್ತವೆ. ದಿನನಿತ್ಯ ಇಲ್ಲಿ ನೂರಾರು ಸಂಖ್ಯೆಯಲ್ಲಿ ರೈತರು ಬೇಕಾದ ಸಾಮಾಗ್ರಿಗಳ ಖರೀದಿಗೆ ಬರುತ್ತಾರೆ. ಆದರೆ, ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ರೈತರಿಗೆ ಈ ಕೇಂದ್ರದ ಸೇವೆ ಪಡೆಯಲು ಸಾಧ್ಯವೇ ಆಗುತ್ತಿಲ್ಲ.
ಮಸ್ಕಿ ರೈತ ಸಂಪರ್ಕ ಕೇಂದ್ರಕ್ಕೆ ವಿವಿಧ ಹುದ್ದೆಗಳಿಗೆ ಆರು ಮಂದಿ ಅಧಿಕಾರಿಗಳ ಅಗತ್ಯವಿದೆ. ಆದರೆ, ಒಬ್ಬರೇ ಒಬ್ಬರು ಅಧಿಕಾರಿಗಳೂ ಈ ಕೇಂದ್ರದಲ್ಲಿಲ್ಲ. ಇದು ಇಂದು-ನಿನ್ನೆಯ ಪರಿಸ್ಥಿತಿಯಲ್ಲ. ಬರೋಬ್ಬರಿ 08 ತಿಂಗಳುಗಳಿಂದ ಕೇಂದ್ರವು ಅಧಿಕಾರಿಗಳಿಲ್ಲದೆ ಖಾಲಿ ಬಿದ್ದಿದೆ.
ಅಗತ್ಯವಿರುವ ಆರು ಮಂದಿ ಅಧಿಕಾರಿಗಳಲ್ಲಿ, ಕೆಲವರು ಇದ್ದರು. ಆದರೆ, ಎಂಟು ತಿಂಗಳ ಹಿಂದೆ ಅವರು ವರ್ಗಾವಣೆಯಾಗಿದ್ದಾರೆ. ಮೊಲದೇ ಕೆಲವು ಅಧಿಕಾರಿಗಳ ಕೊರತೆಯಿದ್ದ ಕೇಂದ್ರಕ್ಕೆ, ಇದ್ದ ಅಧಿಕಾರಗಳೂ ವರ್ಗಾವಣೆಯಾಗಿದ್ದರಿಂದ ಸಂಪೂರ್ಣ ಖಾಲಿಯಾಗಿದೆ.
ಕೆಲವೊಮ್ಮೆ ಲಿಂಗಸಗೂರು ಮೇಲಾಧಿಕಾರಿ ಉಸ್ತುವಾರಿಗಳು ಈ ಕೇಂದ್ರಕ್ಕೆ ಬಂದು ಕೃಷಿ ಯೋಜನೆ ಅಡಿಯಲ್ಲಿ ಕೇಂದ್ರಕ್ಕೆ ಬರುವ ತಾಡ್ ಪತ್ರ , ಪೈಪ್‌ಗಳು, ಬಿತ್ತನೆ ಬೀಜಗಳನ್ನು ವಿತರಿಸಿ ಹೋಗುತ್ತಾರೆ. ಆದರೆ, ಅವರು ಯಾವಾಗ ಬರುತ್ತಾರೆ ಎಂಬುದು ಗೊತ್ತಿಲ್ಲದ ರೈತರು ಕೇಂದ್ರದ ಸೇವೆಗಳಿಂದ ವಂಚಿತರಾಗುತ್ತಿದ್ದಾರೆ.
ಈ ವರ್ಷ ಮಸ್ಕಿಯಲ್ಲಿ ಒಂದೆಡೆ ಮುಂಗಾರು ಮಳೆ ಕೈಕೊಟ್ಟಿದ್ದಾರೆ, ಮತ್ತೊಂದೆಡೆ ಬಿತ್ತನೆ ಬೀಜ ಸೇರಿದಂತೆ ಅಗತ್ಯ ಕೃಷಿ ಸೌಲಭ್ಯಗಳು ದೊರೆಯದೆ ರೈತರು ಕಂಗಾಲಾಗಿದ್ದಾರೆ. ರೈತ ಸಂಪರ್ಕ ಕೇಂದ್ರದಲ್ಲಿ ಅಧಿಕಾರಿಗಳಿಲ್ಲವೆಂದು ಆಕ್ರೋಶಗೊಂಡಿದ್ದಾರೆ.
ಸ್ಥಳೀಯ ರೈತ ಮುಖಂಡ ವಿಜಯ ಬಡಿಗೇರ್ ಈದಿನ.ಕಾಮ್ ಜೊತೆ ಮಾತನಾಡಿ, “ಸುಮಾರು 08 ತಿಂಗಳಿಂದ ಅಧಿಕಾರಿಗಳು ಇಲ್ಲ. ಸರ್ಕಾರದಿಂದ ತಾಡಪಾತ್ರೆ ಬಂದಿವೆ. ಆದ್ರೆ ಅದನ್ನು ಕೊಡುವುದಕ್ಕೆ ಅಧಿಕಾರಿಗಳೇ ಇಲ್ಲ. ಈ ಸಮಸ್ಯೆಗಳ ಬಗ್ಗೆ ನಾವು ಯಾರಿಗೆ ಕೇಳಬೇಕು” ಎಂಬುದೇ ತಿಳಿಯುತ್ತಿಲ್ಲ ಎಂದಿದ್ದಾರೆ.
ಈ ಸುದ್ದಿ ಓದಿದ್ದೀರಾ?: ಸನಾತನ ಧರ್ಮ ಹೇಳಿಕೆ: ಉದಯನಿಧಿ ಸ್ಟಾಲಿನ್ ವಿರುದ್ಧದ ಅರ್ಜಿಯ ವಿಚಾರಣೆಗೆ ಸುಪ್ರೀಂ ಕೋರ್ಟ್ ಸಮ್ಮತಿ
“ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳ ಕೊರತೆ ಬಗ್ಗೆ ಮಸ್ಕಿ ಶಾಸಕರು ಬಸನಗೌಡ ತುರುವಿಹಾಳ ಅವರಿಗೆ ಕೂಡ ಮನವಿ ಸಲ್ಲಿಸಲಾಗಿದೆ. ಸಂಬಂಧ ಪಟ್ಟ ಇಲಾಖೆ ಕೂಡಲೇ ಅಧಿಕಾರಿಗಳನ್ನು ನೇಮಕ ಮಾಡಬೇಕು. ಇಲ್ಲವಾದಲ್ಲಿ, ಮುಂದಿನ ದಿನಗಳಲ್ಲಿ ಶಾಸಕರ ಭವನ ಮುಂದೆ ಪ್ರತಿಭಟನೆ ಮಾಡಲಾಗುವುದು” ಎಂದು ಎಚ್ಚರಿಕೆ ನೀಡಿದ್ದಾರೆ.
ಈದಿನ.ಕಾಮ್ ಜೊತೆ ಮಾತನಾಡಿದ ಲಿಂಗಸಗೂರು ಸಹಾಯಕ ಕೃಷಿ ಅಧಿಕಾರಿ ಅಮರೇಗೌಡ, “ಸಿಬ್ಬಂದಿಗಳ ಕೊರತೆ ಇದೆ. ಕೇಂದ್ರಕ್ಕೆ 06 ಮಂದಿ ಸಿಬ್ಬಂದಿ ಬೇಕಾಗಿದ್ದಾರೆ. ಮಸ್ಕಿ ರೈತ ಸಂಪರ್ಕ ಕೇಂದ್ರದಲ್ಲಿ ಕರ್ತವ್ಯದಲ್ಲಿದ್ದವರು ವರ್ಗಾವಣೆ ಆಗಿದ್ದಾರೆ. ಈ ಕೊರತೆಯಿಂದ ಸಮಸ್ಯೆ ಆಗಿದೆ. ಪ್ರಸ್ತುತ ನಾನು ಕೂಡ 2 ಕಡೆ ಉಸ್ತುವಾರಿಯಾಗಿ ಕೆಲಸ ನಿರ್ವಹಿಸುತ್ತಿದ್ದೇನೆ. ಸಮಸ್ಯೆ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ತರಲಾಗಿದೆ. ಆದಷ್ಟು ಬೇಗ ಬಗೆಹರಿಸಲಾಗುವುದು” ಎಂದು ಹೇಳಿದ್ದಾರೆ.