ನೃತ್ಯ ಸಂಯೋಜಕರೊಬ್ಬರು (ಡಾನ್ಸ್ ಕೊರಿಯೋಗ್ರಾಫರ್) ಬರೋಬ್ಬರಿ 99 ಬಾರಿ ಸಂಚಾರ ನಿಯಮಗಳನ್ನು ಉಲ್ಲಂಘಿಸಿದ್ದಾರೆ. 100ನೇ ಬಾರಿ ಉಲ್ಲಂಘನೆ ಮಾಡಿದಾಗ ಸಂಚಾರ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದು, ಆತನಿಗೆ 56,000 ರೂ. ದಂಡ ವಿಧಿಸಿದ್ದಾರೆ.
ಬೆಂಗಳೂರಿನ ಬಿಳೇಕಹಳ್ಳಿ ನಿವಾಸಿ, ನೃತ್ಯ ಸಂಯೋಜಕ ಹಸನ್ ರೆಹಮಾನ್ 100 ಬಾರಿ ನಿಮಯ ಉಲ್ಲಂಘಿಸಿರುವ ಮಹಾಶಯ. ಆತನ ಬೈಕ್ ಅನ್ನು ವಶಕ್ಕೆ ಪಡೆದಿರುವ ಪೊಲೀಸರು ದಂಡ ಪಾವತಿಸಲು ಎರಡು ತಿಂಗಳ ಗಡುವು ನೀಡಿದ್ದಾರೆ. ಆ ಅವಧಿಯೊಳಗೆ ದಂಡ ಪಾವತಿಸಿ, ಬೈಕ್ ಅನ್ನು ಮರಳಿ ಪಡೆಯಬೇಕು. ಇಲ್ಲದಿದ್ದರೆ ಬೈಕ್ ಹರಾಜು ಹಾಕುವುದಾಗಿ ಎಚ್ಚರಿಕೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ರೆಹಮಾನ್ ಬಿಟಿಎಂ ಲೇಔಟ್‌ನಲ್ಲಿ ಡಾನ್ಸ್ ಕ್ಲಾಸ್ ನಡೆಸುತ್ತಿದ್ದಾರೆ. ಅವರು ಬನ್ನೇರುಘಟ್ಟ ರೆಸ್ತೆಯ ವೆಗಾ ಸಿಟಿ ವೃತ್ತದಲ್ಲಿ ರಸ್ತೆಯ ವಿರುದ್ಧ ಪಥದಲ್ಲಿ ಚಲಿಸುತ್ತಿದ್ದಾಗ ಕಾರೊಂದರ ಡ್ಯಾಶ್ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಕಾರು ಚಾಲಕ ಆತನ ಬೈಕ್ ನಂಬರ್‌ನನ್ನು ಸಂಚಾರ ನಿಯಮ ಉಲ್ಲಂಘನೆ ವೆಬ್‌ಸೈಟ್‌ನಲ್ಲಿ ಪರಿಶೀಲಿಸಿದ್ದು, ಆತ 99 ಬಾರಿ ಸಂಚಾರ ನಿಯಮ ಉಲ್ಲಂಘಿಸಿರುವುದು ಕಂಡುಬಂದಿದೆ.
ಕೂಡಲೇ, ಕಾರು ಚಾಲಕ ಬೈಕ್‌ನ ಫೋಟೋ ತೆಗೆದು, ನಿಯಮ ಉಲ್ಲಂಘನೆಯ ಪಟ್ಟಿ ಇರುವ ಸ್ಕ್ರೀನ್‌ಶಾಟ್‌ನೊಂದಿಗೆ ಟ್ವಿಟರ್‌ನಲ್ಲಿ ಹಂಚಿಕೊಂಡು ಬೆಂಗಳೂರು ಸಂಚಾರ ಪೊಲೀಸರನ್ನು ಟ್ಯಾಗ್ ಮಾಡಿದ್ದಾರೆ.
ಎಚ್ಚೆತ್ತ ಪೊಲೀಸರು, ಬೈಕ್ ಸವಾರ ರೆಹಮಾನ್ ಅವರನ್ನು ಪತ್ತೆ ಮಾಡಿ ಬೈಕ್ ವಶ ಪಡಿಸಿಕೊಂಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಕಾವೇರಿ | ಸಂಸದರ ಭಾವಚಿತ್ರಗಳಿಗೆ ಹಾರ ಹಾಕಿ, ಧಿಕ್ಕಾರ ಕೂಗಿದ ಕರವೇ ಮಹಿಳಾ ಹೋರಾಟಗಾರರು
“ರೆಹಮಾನ್ ಅವರ ಚಾಲನಾ ಪರವಾನಗಿಯನ್ನು ಅಮಾನತುಗೊಳಿಸಲು ಶಿಫಾರಸು ಮಾಡಿದ್ದೇವೆ. ದಂಡ ಪಾವತಿಸಲು ಎರಡು ತಿಂಗಳ ಕಾಲಾವಕಾಶ ನೀಡಲಾಗಿದೆ. ಎರಡು ತಿಂಗಳಲ್ಲಿ ದಂಡ ಪಾವತಿಸದಿದ್ದರೆ, ಅವರ ವಾಹನವನ್ನು ಹರಾಜು ಮಾಡಲಾಗುವುದು” ಎಂದು ಮೈಕೋ ಲೇಔಟ್ ಪೊಲೀಸರು ತಿಳಿಸಿದ್ದಾರೆ.
“ರೆಹಮಾನ್ 54 ಬಾರಿ ಹೆಲ್ಮೆಟ್ ಧರಿಸದೆ ಬೈಕ್ ಚಲಾಯಿಸಿದ್ದಾರೆ. ನಂಬರ್ ಪ್ಲೇಟ್ ದೋಷಪೂರಿತ ಪ್ರಕರಣಗಳು 34 ಬಾರಿ ದಾಖಲಾಗಿವೆ. ವಾಹನ ಚಲಾಯಿಸುವಾಗ ಐದು ಬಾರಿ ಮೊಬೈಲ್ ಬಳಸಿದ್ದಾರೆ. ಒನ್ ವೇ, ನೋ ಎಂಟ್ರಿ, ನೋ ಪಾರ್ಕಿಂಗ್ ಟ್ರಿಪಲ್ ರೈಡಿಂಗ್ ಸೇರಿದಂತೆ ಇನ್ನೂ ಕೆಲವು ಪ್ರಕರಣಗಳು ಅವರ ವಿರುದ್ಧ ದಾಖಲಾಗಿವೆ” ಎಂದು ತಿಳಿದುಬಂದಿದೆ.