- ರಾಜ್ಯಾದ್ಯಂತ ಕನ್ನಡಪರ ಸಂಘಟನೆಗಳ ಬೆಂಬಲ
- ಮೆಡಿಕಲ್, ಆಸ್ಪತ್ರೆ, ಆಂಬ್ಯುಲೆನ್ಸ್ ಸೇವೆ ಲಭ್ಯ
ರಾಜ್ಯದಲ್ಲಿ ಬರಗಾಲ ಘೋಷಣೆಯಾಗಿದ್ದು, ಈ ನಡುವೆ ತಮಿಳುನಾಡಿಗೆ ಕಾವೇರಿ ನೀರು ಬಿಡುವುದನ್ನು ಖಂಡಿಸಿ ಕನ್ನಡ ಪರ ಸಂಘಟನೆಗಳು ಶುಕ್ರವಾರ (ಸೆ. 29) ಕರ್ನಾಟಕ ಬಂದ್ ಕರೆ ನೀಡಿದ್ದು, ರಾಜ್ಯಾದ್ಯಂತ ಭಾರಿ ಬೆಂಬಲ ವ್ಯಕ್ತವಾಗುತ್ತಿದೆ.
ಕನ್ನಡ ಚಳವಳಿ ವಾಟಾಳ್ ಪಕ್ಷದ ನಾಯಕ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ನಡೆಯುತ್ತಿರುವ ಬಂದ್‌ನಲ್ಲಿ ಪಾಲ್ಗೊಳ್ಳಲು ಹಲವು ಸಂಘಟನೆಗಳು ಮುಂದೆ ಬಂದು, ಬೆಂಬಲ ಸೂಚಿಸಿವೆ.
ರಾಜ್ಯದ ನಾನಾ ಭಾಗಗಳಲ್ಲಿರುವ ಸ್ಥಳೀಯ ಸಂಘಟನೆಗಳು ಕೂಡಾ ಜೈಜೋಡಿಸಿವೆ. ಇದರಿಂದಾಗಿ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಬಂದ್ ಯಶಸ್ವಿಯಾಗುವ ಸಾಧ್ಯತೆ ಹೆಚ್ಚಿದೆ. ಕಾವೇರಿ ಜಲಾನಯನ ಪ್ರದೇಶದಲ್ಲಿ ಬಂದ್‌ನ ಕಾವು ಹೆಚ್ಚಾಗಿರಲಿದ್ದು, ವಿಶೇಷವಾಗಿ ರಾಜ್ಯದ ದಕ್ಷಿಣ ಭಾಗದಲ್ಲಿ ಸಾಮಾನ್ಯ ಜನಜೀವನ ಅಸ್ತವ್ಯಸ್ತವಾಗಲಿದೆ.
ಬೆಂಗಳೂರಿನ ಟೌನ್ ಹಾಲ್ ನಿಂದ ಫ್ರೀಡಂ ಪಾರ್ಕ್ ವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಯಲಿದ್ದು, ಬೆಂಬಲ ಸೂಚಿಸಿದ ಸಂಘಟನೆಗಳ ಕಾರ್ಯಕರ್ತರು ಭಾಗಿಯಾಗಲಿದ್ದಾರೆ ಎಂದು ಸಂಘಟಕರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಪ್ರತಿಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ಸಹ ಬಂದ್‌ಗೆ ಬೆಂಬಲ ನೀಡಿದ್ದು, ಕರ್ನಾಟಕದ ಹೋಟೆಲ್ ಮಾಲೀಕರ ಸಂಘ, ಆಟೋರಿಕ್ಷಾ ಸಂಘ ಕೂಡ ಬಂದ್‌ಗೆ ಬೆಂಬಲ ನೀಡಿವೆ. ಹೆದ್ದಾರಿಗಳು, ಟೋಲ್ ಗೇಟ್‌ಗಳು, ರೈಲು ಸೇವೆಗಳು ಮತ್ತು ವಿಮಾನ ನಿಲ್ದಾಣಗಳನ್ನು ಮುಚ್ಚುತ್ತೇವೆ ಎಂದು ಈಗಾಗಲೇ ಸಂಘಟನೆಗಳು ಎಚ್ಚರಿಕೆ ನೀಡಿವೆ.
ಸಂಘಟನೆಗಳ ಬೆಂಬಲ ಹೇಗಿದೆ?
ಬೃಹತ್ ಬೆಂಗಳೂರು ಹೋಟೆಲ್ ಅಸೋಸಿಯೇಷನ್ ಮುಷ್ಕರಕ್ಕೆ ನೈತಿಕ ಬೆಂಬಲ ನೀಡಿದೆ. ರಾಜ್ಯ ಸಾರಿಗೆ ಇಲಾಖೆಯು ತಮ್ಮ ಸೇವೆಗಳನ್ನು ಎಂದಿನಂತೆ ಮುಂದುವರಿಸಲು ರಾಜ್ಯ ಸಾರಿಗೆ ನಿಗಮಗಳಿಗೆ ನಿರ್ದೇಶನ ನೀಡಿದೆ. ಕರ್ನಾಟಕದ ಉತ್ತರ ಭಾಗದ ಬಳ್ಳಾರಿ, ಕಲಬುರಗಿ, ಬೀದರ್, ಬಾಗಲಕೋಟೆ, ವಿಜಯಪುರ, ಯಾದಗಿರಿ, ಹುಬ್ಬಳ್ಳಿ-ಧಾರವಾಡ, ಗದಗ, ಹಾವೇರಿ, ಕೊಪ್ಪಳ ಮತ್ತು ದಾವಣಗೆರೆಯ ರೈತರು ಮತ್ತು ವರ್ತಕರು ಬಂದ್‌ಗೆ ತಮ್ಮ ನೈತಿಕ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ.
ಕರ್ನಾಟಕ ಬಂದ್‌ಗೆ ನೈತಿಕ ಬೆಂಬಲ ನೀಡಲು ಶಾಲೆಗಳು ಮುಂದಾಗಿದೆ. ಶಾಲೆಗಳಿಗೆ ರಜೆ ನೀಡುವ ಜವಾಬ್ದಾರಿಯನ್ನು ಆಯಾ ಆಡಳಿತ ಮಂಡಳಿ ತೆಗೆದುಕೊಳ್ಳುವಂತೆ ಸೂಚನೆ ನೀಡಿದ್ದಾರೆ. ಸರ್ಕಾರ ಹಾಗೂ ಜಿಲ್ಲಾಧಿಕಾರಿಗಳು ಶಾಲೆಗಳ ರಜೆ ನೀಡುವ ಬಗ್ಗೆ ನಿರ್ಧಾರಕ್ಕೆ ಮನವಿ ನೀಡಲಾಗಿದೆ ಎಂದು ರೂಪ್ಸಾ ಖಾಸಗಿ ಶಾಲೆಗಳ ಸಂಘಟನೆಯ ಲೋಕೇಶ್ ತಾಳಿಕಟ್ಟೆ ಹೇಳಿದ್ದಾರೆ.
ಬೀದಿ ಬದಿ ವ್ಯಾಪಾರಿಗಳು ಕೂಡ ಬಂದ್‌ಗೆ ಸಂಪೂರ್ಣ ಬೆಂಬಲ ನೀಡಿದ್ದಾರೆ. ಬೆಳಗ್ಗೆ 6 ರಿಂದ ಸಂಜೆ 6 ವರೆಗೂ ರಾಜ್ಯಾದ್ಯಂತ ಬೀದಿ ಬದಿ ವ್ಯಾಪಾರಿಗಳು ಹಾಗೂ ಸ್ಥಳೀಯ ಮಾರ್ಕೆಟ್ ಬೀದಿ ಬದಿ ವ್ಯಾಪಾರಗಳು ಸಂಪೂರ್ಣ ಸ್ಥಗಿತವಾಗಲಿದೆ ಎಂದು ಕರ್ನಾಟಕ ಬೀದಿ ಬದಿ ವ್ಯಾಪಾರಿ ಸಂಘಟನೆಗಳ ಒಕ್ಕೂಟ ರಾಜ್ಯಾಧ್ಯಕ್ಷ ರಂಗಸ್ವಾಮಿ ತಿಳಿಸಿದ್ದಾರೆ.
ಮಂಡ್ಯದಲ್ಲಿ ಪ್ರತಿಭಟನೆ
ಕಾವೇರಿ ವಿಚಾರವಾಗಿ ಕರ್ನಾಟಕ ಬಂದ್ ಹಿನ್ನೆಲೆ ಬಂದ್ ಬೆಂಬಲಿಸಿ ನಾಳೆ ಹೆದ್ದಾರಿ, ರೈಲು ತಡೆದು ಚಳವಳಿ ನಡೆಸಲಾಗುವುದು ಎಂದು ಮಂಡ್ಯದಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷ ಕೆಂಪೂಗೌಡ ಹೇಳಿದ್ದಾರೆ. ಮಂಡ್ಯದಲ್ಲಿ ಕಾವೇರಿ ಹೋರಾಟ ಮತ್ತಷ್ಟು ತೀವ್ರಗೊಳಿಸಲು ನಿರ್ಧಾರ ಮಾಡಲಾಗಿದ್ದು, ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇ ಹಾಗೂ ರೈಲು ತಡೆಗೆ ನಿರ್ಧಾರ ಮಾಡಲಾಗಿದೆ.
ಮೆಟ್ರೊ ವ್ಯತ್ಯಯ
ನಾಳೆ ಬೆಂಗಳೂರು ಮೆಟ್ರೋ ರೈಲು ಸಂಚಾರದಲ್ಲಿ ವ್ಯತ್ಯಯವಾಗಲಿದೆ. ಮೆಟ್ರೋ ರೈಲು ಸುರಕ್ಷತಾ ವಿಭಾಗದ ಆಯುಕ್ತರು ಕೆಂಗೇರಿಯಿಂದ ಚಲ್ಲಘಟ್ಟ ನಡುವೆ ಹೊಸ ಮಾರ್ಗ ಪರಿಶೀಲನೆ ನಡೆಸಲಿದ್ದು, ಈ ಹಿನ್ನಲೆ ನಾಳೆ ಕೆಂಗೇರಿಯಿಂದ ಮೈಸೂರು ರಸ್ತೆ ನಿಲ್ದಾಣಗಳ ನಡುವೆ ಸಂಚಾರವಿಲ್ಲ. ಆದರೆ, ಬೈಯ್ಯಪ್ಪನಹಳ್ಳಿಯಿಂದ ಮೈಸೂರು ರಸ್ತೆ ನಿಲ್ದಾಣಗಳ ನಡುವೆ ಸೇವೆ ಲಭ್ಯವಿರಲಿದೆ.
ಯಾವ ಸೇವೆಗಳು ಲಭ್ಯ
ಅಗತ್ಯ ಸೇವೆಗಳಾದ ಮೆಡಿಕಲ್, ಆಸ್ಪತ್ರೆ, ಆಂಬ್ಯುಲೆನ್ಸ್, ಹಾಲಿನ ಬೂತ್‌ಗಳು ನಾಳೆ ಎಂದಿನಂತೆ ತೆರೆದಿರುತ್ತವೆ.