ತಮಿಳುನಾಡಿಗೆ ನೀರು ಹರಿಸುವುದನ್ನು ಖಂಡಿಸಿ ಶುಕ್ರವಾರ ಕರ್ನಾಟಕ ಬಂದ್‌ಗೆ ಕರೆಕೊಡಲಾಗಿದೆ. ಬಂದ್‌ಗೆ ರಾಜ್ಯದಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಮೈಸೂರು ನಗರ ಅಕ್ಷರಶಃ ಸ್ತಬ್ಧವಾಗಿದೆ.
ಮೈಸೂರಿನಲ್ಲಿ ಅಂಗಡಿ ಮುಂಗಟ್ಟುಗಳು ಸಂಪೂರ್ಣವಾಗಿ ಮುಚ್ಚಿವೆ. ಶಾಲಾ-ಕಾಲೇಜಿಗೆ ರಜೆ ನೀಡಲಾಗಿದೆ. ಕೆಎಸ್‌ಆರ್‌ಟಿಸಿ ಬಸ್, ಖಾಸಗಿ ಬಸ್, ಆಟೋಗಳು ಸೇರಿದಂತೆ ವಾಹನಗಳು ರಸ್ತೆಗಿಳಿದಿಲ್ಲ.
ಮೈಸೂರಿನ ರಸ್ತೆಗಳು ಖಾಲಿ-ಖಾಲಿ ಹೊಡೆಯುತ್ತಿವೆ. ಕನ್ನಡಪರ-ರೈತಪರ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ. ನಗರದ ಪ್ರಮುಖ ರಸ್ತೆಗಳು ಮತ್ತು ಸ್ಥಳಗಳಲ್ಲಿ ಪೊಲೀಸರು ಮತ್ತು ಕೆಎಸ್‌ಆರ್‌ಪಿ ತುಕಡಿಗಳನ್ನು ನಿಯೋಜಿಸಲಾಗಿದೆ.
ಬಸ್ ಸಂಚಾರ ಸ್ಥಗಿತಗೊಂಡಿರುವ ಮಾಹಿತಿ ದೊರೆಯದೆ ಹಲವರು ಪ್ರಯಾಣಿಕರು ಬಸ್ ನಿಲ್ಧಾಣಗಳಿಗೆ ಬಂದಿದ್ದು, ಬಸ್‌ಗಳಿಲ್ಲದೆ ಪರದಾಡಿದ್ದಾರೆ.
ಬಸ್ ನಿಲ್ಧಾಣಕ್ಕೆ ಬಂದಿದ್ದ ಮೈಸೂರು ನಿವಾಸಿ ಗಾಯತ್ರಿ ಈದಿನ.ಕಾಮ್ ಜೊತೆ ಮಾತನಾಡಿ, “ಬಂದ್‌ಗೆ ಸಾರಿಗೆ ಸಂಸ್ಥೆ ಬೆಂಬಲ ನೀಡಿಲ್ಲ. ಬಸ್‌ಗಳು ಕಾರ್ಯಾಚರಣೆ ನಡೆಸುತ್ತವೆ ಎಂಬ ಮಾಹಿತಿ ಇತ್ತು. ಹೀಗಾಗಿ, ಚನ್ನರಾಯಪಟ್ಟಣಕ್ಕೆ ತೆರಳಲು ಬಸ್ ನಿಲ್ದಾಣಕ್ಕೆ ಬಂದೆ. ಇಲ್ಲಿ ನೋಡಿದರೆ ಬಸ್‌ಗಳೇ ಇಲ್ಲ. ಸಾರಿಗೆ ಸಂಸ್ಥೆ ಸರಿಯಾಗಿ ಮಾಹಿತಿ ನೀಡಿಲ್ಲ. ಇಂತಹ ಸಂದರ್ಭಗಳಲ್ಲಿ ಸಂಸ್ಥೆಯು ಜವಬ್ದಾರಿಯಿಂದ ನಡೆದುಕೊಳ್ಳಬೇಕು” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
“ಬಂದ್ – ಪ್ರತಿಭಟನೆಯ ತೀವ್ರತೆ ಕಡಿಮೆಯಾದ ನಂತರ ಬಸ್ ಸಂಚಾರ ಆರಂಭಿಸುತ್ತೇವೆ. ಈದ ಎಲ್ಲ ಬಸ್‌ಗಳನ್ನು ಡಿಪೊಗೆ ಕಳುಹಿಸಲಾಗಿದೆ” ಎಂದು ಕೆಎಸ್‌ಆರ್‌ಟಿಸಿ ಸಿಬ್ಬಂದಿ ಹೇಳಿದ್ದಾರೆ.
ಈ ಮಧ್ಯೆ, ಜಿಲ್ಲಯಲ್ಲಿರುವ ಕಬಿನಿ ಜಲಾಶಯಕ್ಕೆ ಮುತ್ತಿಗೆ ಹಾಕಲು ಕರ್ನಾಟಕ ಜಲ ಸಂರಕ್ಷಣಾ ಸಮಿತಿಯ ಸದಸ್ಯರು ಸಿದ್ದತೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಜಲಾಶಯದ ಸುತ್ತಮುತ್ತ ಶುಕ್ರವಾರ ಸಂಜೆ 5ರವರೆಗೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.