- ಈಜಿ ನದಿಯನ್ನು ದಾಟುತ್ತಿದ್ದ ರೈತರು; ಸಂಕಷ್ಟಕ್ಕೆ ಸ್ಪಂದಿಸದ ಸರ್ಕಾರಗಳು
- ಹಣ ಸಂಗ್ರಹಿಸಿ ಸೇತುವೆ ನಿರ್ಮಾಣಕ್ಕೆ ಹೊರಟ ಜಮಖಂಡಿ ತಾಲೂಕಿನ ಕಂಕಣವಾಡಿಯ ರೈತರು
ತಮ್ಮ ಊರಿನಲ್ಲಿರುವ ಕೃಷ್ಣಾ ನದಿ ದಾಟಲು ನಮಗೊಂದು ಸೇತುವೆ ಮಾಡಿಕೊಡಿ ಎಂದು ಹಲವು ಸರ್ಕಾರಗಳು ಹಾಗೂ ಜನಪ್ರತಿನಿಧಿಗಳಲ್ಲಿ ಮನವಿ ಮಾಡಿಯೂ ಸ್ಪಂದನೆ ಸಿಗದಿದ್ದಿರಂದ ಬೇಸತ್ತ ಗ್ರಾಮವೊಂದರ ರೈತರು, ತಾವೇ ವಂತಿಗೆ ಸೇರಿಸುವ ಮೂಲಕ ಯಾವ ಇಂಜಿನಿಯರ್‌ಗಳ ಸಹಾಯವೂ ಇಲ್ಲದೆ ಬ್ಯಾರಲ್ ಸೇತುವೆಯೊಂದನ್ನು ನಿರ್ಮಿಸುವ ಕಾರ್ಯಕ್ಕೆ ಕೈ ಹಾಕುವ ಮೂಲಕ ರಾಜ್ಯದ ಗಮನ ಸೆಳೆದಿದ್ದಾರೆ.
ಕೃಷ್ಣಾ ನದಿ ದಾಟಿ ಬರಲು ಸೇತುವೆ ನಿರ್ಮಿಸುವಂತೆ ಹಲವು ವರ್ಷಗಳಿಂದ ಬೇಡಿಕೆ ಸಲ್ಲಿಸಿದರೂ ಸರ್ಕಾರದಿಂದ ಸ್ಪಂದನೆ ಸಿಗದ ಕಾರಣ ಜಮಖಂಡಿ ತಾಲೂಕಿನ ಕಂಕಣವಾಡಿ ಗ್ರಾಮದ ರೈತರೇ ವಂತಿಗೆಯ ಮೂಲಕ ಹಣ ಸಂಗ್ರಹಿಸಿ ಸುಮಾರು ₹25 ಲಕ್ಷ ವೆಚ್ಚದಲ್ಲಿ ಬ್ಯಾರಲ್ ಸೇತುವೆ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದಾರೆ.

ಕಂಕಣವಾಡಿ ಗ್ರಾಮದ ಬಳಿ ಇರುವ ಗುಹೇಶ್ವರ ನಡುಗಡ್ಡೆಯಲ್ಲಿರುವ ಇರುವ ರೈತ ಕುಟುಂಬಗಳು ಪ್ರತಿಯೊಂದು ವಸ್ತುಗಳನ್ನ ತರಲು ಕೊಂಡೊಯ್ಯಲು ನದಿ ಮೂಲಕ ಬೋಟ್ಗಳನ್ನೇ ಆಶ್ರಯಿಸಬೇಕಿತ್ತು. ಅಲ್ಲದೇ, ರಾತ್ರಿ ವೇಳೆಯಂತೂ ಸಂಚಾರ ಸಾಧ್ಯವೇ ಆಗುತ್ತಿರಲಿಲ್ಲ.
ಹೀಗಾಗಿ ಆಗಾಗ ಸರ್ಕಾರಗಳಿಗೆ ಮತ್ತು ಜನಪ್ರತಿನಿಧಿಗಳಿಗೆ ಸೇತುವೆ ನಿರ್ಮಿಸುವ ಸಂಬಂಧ ಮನವಿ ಸಲ್ಲಿಸುತ್ತಲೇ ಬಂದಿದ್ದರು. ಆದರೆ ಮುಳುಗಡೆ ಕಾರಣವನ್ನೊಡ್ಡಿ ರಾಜ್ಯದಲ್ಲಿ ಅಸ್ಥಿತ್ವದಲ್ಲಿದ್ದ ಯಾವೊಂದು ಸರ್ಕಾರಗಳು ಸಹ ಇವರ ಸ್ಪಂದನೆಗೆ ಕಿವಿಗೊಡಲೇ ಇಲ್ಲ. ಹೀಗಾಗಿ ಮನವಿ ಸಲ್ಲಿಸಿ ಬೇಸತ್ತ ರೈತರು, ಈಗ ಯಾವ ಎಂಜಿನಿಯರ್‌ಗಳ ನೆರವಿಲ್ಲದೇ, ಕೇವಲ ಶ್ರಮದಾನದ ಮೂಲಕ ಬ್ಯಾರಲ್ ಸೇತುವೆ ನಿರ್ಮಾಣ ಕಾರ್ಯ ನಡೆದಿದೆ.
ಕೃಷ್ಣಾ ನದಿಗೆ ಅಡ್ಡಲಾಗಿ ಎರಡೂ ಕಡೆ 20 ಅಡಿ ಎತ್ತರದ ಮಣ್ಣಿನ ಬದು ಮಾಡಿಕೊಂಡಿದ್ದು, ಅಲ್ಲಿಂದ 600 ಅಡಿ ಉದ್ದ ಮತ್ತು 8 ಅಡಿ ಅಗಲ ಇರುವ ಬ್ಯಾರಲ್ ಸೇತುವೆ ನಿರ್ಮಾಣ ನಡೆಯುತ್ತಿದೆ. ಸೇತುವೆ ಪೂರ್ಣವಾದಲ್ಲಿ, 600 ಅಡಿ ಅಗಲದ ನದಿಯನ್ನು 5 ನಿಮಿಷದಲ್ಲಿ ದಾಟಬಹುದು ಎಂದು ಗ್ರಾಮಸ್ಥರು ಮಾಧ್ಯಮದವರಿಗೆ ಮಾಹಿತಿ ನೀಡಿದ್ದಾರೆ.

“20 ಅಡಿಯಂತೆ ಒಟ್ಟು 30 ಕಬ್ಬಿಣದ ಆಂಗಲ್‌ಗಳನ್ನು ನಟ್ಟು ಬೋಲ್ಟ್ ಮೂಲಕ ಜೋಡಿಸಿದ್ದೇವೆ. ಎರಡು ಸಾಲಿನಂತೆ ಒಟ್ಟು 300 ಬ್ಯಾರಲ್‌ಗಳನ್ನು ಜೋಡಿಸಿ, ಅದರ ಮೇಲೆ ಹಾದು ಹೋಗಲು ಎರಡೂ ಬದಿಗೆ ಕಟ್ಟಿಗೆಯ ಪಳಿಗಳನ್ನು ಹಾಕಿ ನಡುವೆ ಕಬ್ಬಿಣದ ಪಟ್ಟಿ ಹಾಕಿದ್ದೇವೆ. ಎರಡೂ ಬದಿಗೆ ಕಟಾಂಜಲಿ ನಿರ್ಮಿಸಿ ಒಟ್ಟು 13 ಟನ್ ಕಬ್ಬಿಣದಲ್ಲಿ ತಯಾರಾಗುತ್ತಿದೆ. ಗಾಳಿಗೆ ಹಾಗೂ ನೀರಿನ ರಭಸಕ್ಕೆ ಹರಿದು ಹೋಗದಂತೆ ದಪ್ಪ ಹಗ್ಗವನ್ನು ಹಾಕಿ ಎರಡು ಬದಿಗೆ ಕಟ್ಟಿದ್ದೇವೆ. ಸೇತುವೆ ಅಲ್ಲಾಡದಂತೆ ದಪ್ಪ ಕಲ್ಲುಗಳನ್ನು ನದಿಯಲ್ಲಿ ಬಿಡಲು ಸಿದ್ಧತೆ ನಡೆಸಿದ್ದೇವೆ” ಎಂದು ಗುಹೇಶ್ವರ ನಡುಗಡ್ಡೆಯ ರೈತರು ತಿಳಿಸಿದ್ದಾರೆ.
ಮಳೆಗಾಲ ಅಥವಾ ನದಿಯಲ್ಲಿ ನೀರಿನ ಮಟ್ಟ ಹೆಚ್ಚಳವಾದಾಗ ಸೇತುವೆ ಬಿಚ್ಚಿಡಬಹುದು. ಉಳಿದ ಅವಧಿಯಲ್ಲಿ ಬೈಕ್ ಮೇಲೆ 3 ರಿಂದ 4 ಕ್ವಿಂಟಲ್‌ಗಳವರೆಗೆ ಭಾರ ಒಯ್ಯುವ ವ್ಯವಸ್ಥೆಯನ್ನು ಮಾಡಿಕೊಂಡಿದ್ದಾರೆ.
ಕಳೆದ ವರ್ಷ ಕಂಕಣವಾಡಿ ಗ್ರಾಮಸ್ಥರು ನಡುಗಡ್ಡೆಯಿಂದ ಎರಡು ದೋಣಿಗಳಿಗೆ ಕಬ್ಬಿಣದ ರಾಡ್‌ಗಳನ್ನು ಜೋಡಿಸಿ ಕಬ್ಬು ತುಂಬಿದ್ದ ಟ್ರ್ಯಾಕ್ಟರ್ ಅನ್ನು ಸಾಗಿಸಿದ್ದರು. ಅದು ಸಫಲವಾದ ಬಳಿಕ ಉತ್ತೇಜಿತರಾದ ರೈತರು ಬ್ಯಾರಲ್ ಸೇತುವೆ ಮಾಡಲು ಮುಂದಾಗುವ ಮೂಲಕ ಸರ್ಕಾರ ಹಾಗೂ ಜನಪ್ರತಿನಿಧಿಗಳಿಗೆ ಸೆಡ್ಡು ಹೊಡೆದಿದ್ದಾರೆ.
ಸರ್ಕಾರಗಳಿಂದ ಸ್ಪಂದನೆ ಸಿಗದಿದ್ದಾಗ ಇದೇ ಭಾಗದ ರೈತರೇ ನಿಧಿ ಸಂಗ್ರಹಿಸಿ ಚಿಕ್ಕಪಡಸಲಗಿಯಲ್ಲಿ ತಮ್ಮ ಮತ್ತು ರಾಜ್ಯಾದ್ಯಂತದ ಸಹೃದಯರ ಶ್ರಮದಾನದಿಂದ ಕೃಷ್ಣಾ ನದಿಗೆ ಅಣೆಕಟ್ಟು ಕಟ್ಟಿದ್ದರು. ಈಗ ಈ ‘ಸೆಲ್ಫ್ ಸರ್ವಿಸ್’ ಸಾಹಸ…
👍👍✊✊👏👏👏
(ಚಿಕ್ಕಪಡಸಲಗಿ ಬೆಳಗಾವಿ ಜಿಲ್ಲೆಗೆ ಸೇರುತ್ತದೆ.)