ಪಾಕಿಸ್ತಾನದ ಪ್ರಕ್ಷುಬ್ಧ ಪ್ರದೇಶವಾದ ಬಲೂಚಿಸ್ತಾನ್ ಪ್ರಾಂತ್ಯದ ಮಸೀದಿಯೊಂದರ ಬಳಿ ಶುಕ್ರವಾರ ಪ್ರವಾದಿ ಮುಹಮ್ಮದ್ ಅವರ ಜನ್ಮದಿನವನ್ನು ಆಚರಿಸಲು ರ್‍ಯಾಲಿಗಾಗಿ ಜನರು ಸೇರುತ್ತಿದ್ದಾಗ ನಡೆದ ಆತ್ಮಹತ್ಯಾ ಬಾಂಬ್ ದಾಳಿಯಲ್ಲಿ ಕನಿಷ್ಠ 50 ಜನರು ಸಾವನ್ನಪ್ಪಿದ್ದು, 130ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.
ಮಸ್ತುಂಗ್ ಜಿಲ್ಲೆಯ ಮದೀನಾ ಮಸೀದಿ ಬಳಿ ಸ್ಫೋಟ ಸಂಭವಿಸಿದೆ ಎಂದು ಪಾಕಿಸ್ತಾನದ ಜಿಯೋ ನ್ಯೂಸ್ ವರದಿ ಮಾಡಿದೆ.

ರ್‍ಯಾಲಿಯ ಹಿನ್ನೆಲೆಯಲ್ಲಿ ಕರ್ತವ್ಯದಲ್ಲಿದ್ದ ಮಸ್ತುಂಗ್‌ನ ಉಪ ಪೊಲೀಸ್ ವರಿಷ್ಠಾಧಿಕಾರಿ (ಡಿಎಸ್‌ಪಿ) ನವಾಜ್ ಗಶ್ಕೋರಿ ಕೂಡ ಮೃತಪಟ್ಟವರಲ್ಲಿ ಸೇರಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರವಾದಿ ಮುಹಮ್ಮದ್ ಅವರ ಜನ್ಮದಿನದ ಪ್ರಯುಕ್ತ ಮೀಲಾದುನ್ನಬಿ ರ್‍ಯಾಲಿಗಾಗಿ ಜನರು ಸೇರುತ್ತಿದ್ದಾಗ ಆತ್ಮಹತ್ಯಾ ಬಾಂಬ್ ದಾಳಿ ನಡೆಸಲಾಗಿದೆ. ಗಾಯಗೊಂಡವರಲ್ಲಿ ಕೆಲವರ ಸ್ಥಿತಿ ಚಿಂತಾಜನಕವಾಗಿದ್ದು, ಎಲ್ಲರನ್ನು ಸ್ಥಳೀಯ ಆಸ್ಪತ್ರೆಗಳಿಗೆ ರವಾನಿಸಲಾಗಿದೆ.
ಈ ದಾಳಿಯ ಹಿಂದಿರುವ ವ್ಯಕ್ತಿಗಳು ಮತ್ತು ಸಂಘಟನೆಗಳನ್ನು ಪತ್ತೆ ಹಚ್ಚುತ್ತೇವೆ ಎಂದು ಬಲೂಚಿಸ್ತಾನದ ನಿಯೋಜಿತ ಮುಖ್ಯಮಂತ್ರಿ ಅಲಿ ಮರ್ದಾನ್ ಡೊಮ್ಕಿ ತಿಳಿಸಿದ್ದಾರೆ.