ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಉಪ ಯೋಜನೆಯಡಿ ಹಲವು ಇಲಾಖೆಗಳಿಗೆ ಬಿಡುಗಡೆಯಾಗಿರುವ ಎಸ್‌ಸಿಪಿ ಮತ್ತು ಟಿಎಸ್‌ಪಿ ಅನುದಾನವನ್ನು ನಿಗದಿತ ಅವಧಿಯೊಳಗೆ ಬಳಕೆ ಮಾಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಅಪರ ಜಿಲ್ಲಾಧಿಕಾರಿ ಡಾ ಕೆ.ಆರ್ ದುರ್ಗೇಶ್ ಸೂಚಿಸಿದ್ದಾರೆ.
ರಾಯಚೂರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ನಡೆದ ಪರಿಶಿಷ್ಟ ಜಾತಿ, ಗಿರಿಜನ ಉಪ ಯೋಜನೆ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.
“ಜಿಲ್ಲೆಯಲ್ಲಿ ಎಸ್‌ಸಿಪಿ, ಟಿಎಸ್‌ಪಿ ಯೋಜನೆಯಡಿ ಕೈಗೊಂಡ ಕಾಮಗಾರಿಗಳ ಕುರಿತು ತಾಲೂಕು ಮಟ್ಟದಲ್ಲಿ ಸಭೆಗಳನ್ನು ನಡೆಸಿ, ಜವಾಬ್ದಾರಿಯಿಂದ ಕಾರ್ಯಕ್ರಮ ಅನುಷ್ಠಾನಗೊಳಿಸಬೇಕು. ನೀಡಲಾದ ನಮೂನೆಯಂತೆ ಮಾಹಿತಿ ಮತ್ತು ವರದಿಯನ್ನು ಸಿದ್ಧಪಡಿಸಿ ಅಧಿಕೃತ ಜಾಲತಾಣಕ್ಕೆ ಅಪ್‌ಲೋಡ್ ಮಾಡಬೇಕು. ಅನುದಾನ ಕೈತಪ್ಪದಂತೆ ಎಚ್ಚರಿಕೆ ವಹಿಸಬೇಕು” ಎಂದು ಸೂಚನೆ ನೀಡಿದರು.
“ಎಸ್‌ಸಿಪಿ ಮತ್ತು ಟಿಎಸ್‌ಪಿ ಯೋಜನೆ ಕುರಿತು ಆಯಾ ಇಲಾಖೆಯ ವೆಬ್‌ಸೈಟ್‌ಗಳಲ್ಲಿ ಪ್ರಗತಿ ವರದಿ ಸಲ್ಲಿಸಬೇಕು. ಜಿಲ್ಲೆಯಲ್ಲಿ 8 ತಾಲೂಕುಗಲ್ಲಿ ಸಿರವಾರ ಮತ್ತು ಮಸ್ಕಿ ತಾಲೂಕಿನಲ್ಲಿ ಇಲಾಖಾವಾರು ಸಭೆಗಳನ್ನು ನಡೆಸಬೇಕು. ರಾಯಚೂರು ನಗರ, ಗ್ರಾಮೀಣ ಪ್ರದೇಶಗಳಲ್ಲಿ ಮಾತ್ರ ಸಭೆಗಳನ್ನು ಮಾಡಲಾಗಿದೆ. ಮಾನ್ವಿಯಲ್ಲಿ 1 ಸಭೆ ಮಾಡಲಾಗಿದೆ. ಉಳಿದ ತಾಲೂಕುಗಳು ಸಭೆ ಮಾಡಿ ಎಸ್‌ಸಿಪಿ ಮತ್ತು ಟಿಎಸ್‌ಪಿ ಯೋಜನೆಗಳ ಕ್ರಿಯಾ ಯೋಜನೆ ಸಲ್ಲಿಸಿ ಮಾಹಿತಿ ಅಪ್ಲೋಡ್ ಮಾಡಬೇಕು” ಎಂದು ತಿಳಿಸಿದರು.
“ಎಸ್‌ಸಿಪಿ ಮತ್ತು ಟಿಎಸ್‌ಪಿ ಯೋಜನೆಗಳ ಕುರಿತು ತಾಲೂಕುವಾರು ಕಡ್ಡಾಯವಾಗಿ ಪ್ರತಿ ತಿಂಗಳು ಸಭೆ ನಡೆಸಿ ಮಾಹಿತಿ ನೀಡಬೇಕು. ಕಳೆದ ವರ್ಷದ ಬಾಕಿ ಅನುದಾನ ಉಳಿಸಿಕೊಳ್ಳದೇ ಬಳಕೆ ಮಾಡಬೇಕು. ಅ ವರದಿ ಅಪ್‌ಲೋಡ್ ಮಾಡಬೇಕು” ಎಂದು ಸೂಚಿಸಿದರು.
“ಜಿಲ್ಲೆಯ 33 ಇಲಾಖೆಗಳಿಗೆ ಈಗಾಗಲೇ ಎಸ್‌ಸಿಪಿ ಯೋಜನೆಯಡಿ ಶೇ.69.43ರಷ್ಟು ಹಾಗೂ ಟಿಎಸ್‌ಪಿ ಯೋಜನೆಯಡಿ ಶೇ. 67.72ರಷ್ಟು ಅನುದಾನ ಬಿಡುಗಡೆಯಾಗಿದೆ. ಇದರಲ್ಲಿ ಕೆಲವು ಇಲಾಖೆಗಳು ಅನುದಾನ ಬಳಕೆ ಮಾಡಿದ್ದು, ಕೆಲವು ಇಲಾಖೆಗಳು ಅನುದಾನ ಬಳಕೆಯಲ್ಲಿ ಹಿಂದಿವೆ. ಕೂಡಲೇ ನಿಗದಿತ ಅವಧಿಯೊಳಗೆ ಅನುದಾನ ಬಳಕೆಗೆ ಕ್ರಮಕೈಗೊಳ್ಳಬೇಕು” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಗದಗ | ಸೆ.30ರಂದು ಜಿಲ್ಲಾ ಉಸ್ತುವಾರಿ ಸಚಿವರ ಜನತಾ ದರ್ಶನ; ಅಹವಾಲುಗಳಿಗೆ ಸ್ಥಳದಲ್ಲಿಯೇ ಪರಿಹಾರ
ಸಭೆಯಲ್ಲಿ ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಮಹೇಶ ಪೋತದಾರ, ಪರಿಶಿಷ್ಟ ವರ್ಗಗಳ ಕಲ್ಯಾಣಾಕಾರಿ ರಾಜೇಂದ್ರ ಜಲ್ದಾರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಚೇತನಕುಮಾರ, ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಆರ್.ದೇವಿಕಾ, ಡಿಡಿಪಿಐ ಸುರೇಶ ಹುಗ್ಗಿ, ಜಿಲ್ಲಾ ಆಯುಷ್ ಅಕಾರಿ ಡಾ.ಶಂಕರಗೌಡ ಪಾಟೀಲ್, ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಈರೇಶ ನಾಯಕ ಉಪಸ್ಥಿತರಿದ್ದರು.
ವರದಿ: ಹಫೀಜುಲ್ಲ, ಸಿಟಿಜನ್ ಜರ್ನಲಿಸ್ಟ್, ರಾಯಚೂರು