ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ವಿವಾದಾತ್ಮಕ ಚುನಾವಣಾ ಬಾಂಡ್‌ಗಳನ್ನು ವಿತರಣೆ ಮಾಡಲು ಮತ್ತೊಮ್ಮೆ ಮುಂದಾಗಿದೆ. ಅಕ್ಟೋಬರ್ 4 ರಂದು 10 ದಿನಗಳ ಅವಧಿಗೆ ತೆರೆಯುವ 28 ನೇ ಹಂತದ ಚುನಾವಣಾ ಬಾಂಡ್‌ಗಳ ವಿತರಣೆಗೆ ಕೇಂದ್ರ ಸರ್ಕಾರ ಶುಕ್ರವಾರ ಅನುಮೋದನೆ ನೀಡಿದೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ತನ್ನ 29 ಅಧಿಕೃತ ಶಾಖೆಗಳ ಮೂಲಕ ಚುನಾವಣಾ ಬಾಂಡ್‌ಗಳನ್ನು ವಿತರಿಸುವ ಮತ್ತು ಎನ್‌ಕ್ಯಾಶ್ ಮಾಡುವ ಅಧಿಕಾರ ಹೊಂದಿದೆ ಎಂದು ಹಣಕಾಸು ಸಚಿವಾಲಯದ ಹೇಳಿಕೆ ತಿಳಿಸಿದೆ. ಅಧಿಕೃತ SBI ಶಾಖೆಗಳು ಬೆಂಗಳೂರು, ಲಕ್ನೋ, ಶಿಮ್ಲಾ, ಡೆಹ್ರಾಡೂನ್, ಕೋಲ್ಕತ್ತಾ, ಗುವಾಹಟಿ, ಚೆನ್ನೈ, ಪಾಟ್ನಾ, ನವದೆಹಲಿ, ಚಂಡೀಗಢ, ಶ್ರೀನಗರ, ಗಾಂಧಿನಗರ, ಭೋಪಾಲ್, ರಾಯ್ಪುರ್ ಮತ್ತು ಮುಂಬೈ ನಗರಗಳಲ್ಲಿವೆ.
ಈ ವರ್ಷಾಂತ್ಯದಲ್ಲಿ ನಡೆಯಲಿರುವ ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್‌ಗಢ, ತೆಲಂಗಾಣ ಮತ್ತು ಮಿಜೋರಾಂ ರಾಜ್ಯಗಳ ವಿಧಾನಸಭಾ ಚುನಾವಣೆಗೆ ಮುನ್ನ ಈ ಘೋಷಣೆ ಮಾಡಲಾಗಿದೆ.
ಈ ಬಗ್ಗೆ ಕಾಂಗ್ರೆಸ್ ಮುಖಂಡ ತೀವ್ರ ಟೀಕೆ ಮಾಡಿದ್ದು, ‘ಚುನಾವಣಾ ಬಾಂಡ್ ಎಂಬುದು ಕಾನೂನುಬದ್ಧ ಲಂಚ. ಅ.4ರಂದು ಇದು ಪುನಃ ತೆರೆಯಲಿದ್ದು, ಬಿಜೆಪಿಗೆ ಚಿನ್ನದ ಫಸಲನ್ನೇ ನೀಡಲಿದೆ’ ಎಂದಿದ್ದಾರೆ.
ಚಿದಂಬರಂ ತಮ್ಮ ಎಕ್ಸ್ ಖಾತೆಯಲ್ಲಿ ಈ ಬಗ್ಗೆ ಒಂದು ಪೋಸ್ಟ್ ಹಾಕಿದ್ದಾರೆ. ‘ಅ.4ರಿಂದ ಮಾರಾಟವಾಗಲಿರುವ ಚುನಾವಣಾ ಬಾಂಡ್‌ಗಳಲ್ಲಿ ಈ ಹಿಂದಿನಂತೆಯೇ ಬಿಜೆಪಿಗೆ ಶೇ.90ರಷ್ಟು ದೇಣಿಗೆ ಸಲ್ಲಿಕೆಯಾಗಲಿದೆ. ಹೀಗಾಗಿ ಬಿಜೆಪಿಗೆ ಇದು ಚಿನ್ನದ ಫಸಲನ್ನೇ ನೀಡಲಿದೆ’ ಎಂದಿದ್ದಾರೆ.
‘ಕ್ರೋನಿ ಬಂಡವಾಳಶಾಹಿಗಳು ದೆಹಲಿಯಲ್ಲಿ ಕುಳಿತಿರುವ ತಮ್ಮ ಪ್ರಭು ಹಾಗೂ ಧಣಿಗಳಿಗೆ ಕಾಣಿಕೆ ನೀಡಲು ಚೆಕ್ ಪುಸ್ತಕಗಳನ್ನು ತೆರೆದಿಟ್ಟುಕೊಂಡಿದ್ದಾರೆ’ ಎಂದು ಅವರು ಲೇವಡಿ ಮಾಡಿದ್ದಾರೆ.
ಈ ಸುದ್ದಿ ಓದಿದ್ದೀರಾ: ಮಹಿಳಾ ಮೀಸಲಾತಿ ಮಸೂದೆ 2034ರವರೆಗೂ ಜಾರಿಯಾಗುವುದಿಲ್ಲ, ಬಿಜೆಪಿ ಜನರನ್ನು ದಾರಿ ತಪ್ಪಿಸುತ್ತಿದೆ: ಖರ್ಗೆ
2016-17ರ ಆರ್ಥಿಕ ವರ್ಷ ಮತ್ತು 2021-22 ರ ಆರ್ಥಿಕ ವರ್ಷಗಳ ನಡುವೆ ಬಿಜೆಪಿಯ 5,271.97 ಕೋಟಿ ರೂಪಾಯಿಗಳ ರಾಜಕೀಯ ದೇಣಿಗೆಯಲ್ಲಿ ಶೇಕಡಾ 52 ಕ್ಕಿಂತ ಹೆಚ್ಚು ಚುನಾವಣಾ ಬಾಂಡ್‌ಗಳಿಂದ ಬಂದಿದೆ. ಇದು ಕಪ್ಪು ಹಣವನ್ನು ಬಿಳಿ ಮಾಡುವ ತಂತ್ರವಾಗಿದೆ. ಹಾಗಾಗಿ ಚುನಾವಣಾ ಬಾಂಡ್‌ಗಳ ನಿಯಮವನ್ನು ಪಾರದರ್ಶಕಗೊಳಿಸಬೇಕು ಎನ್ನುವ ಒತ್ತಡ ಎಂದು ಕಾಂಗ್ರೆಸ್ ಸೇರಿದಂತೆ ಎಲ್ಲ ಪ್ರಮಖ ವಿರೋಧ ಪಕ್ಷಗಳಿಂದ ಕೇಳಿಬರುತ್ತಲೇ ಇದೆ.