ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಅವಹೇಳನಕಾರಿ ಪೋಸ್ಟ್ ಹಾಕಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ದಾವಣಗೆರೆ ಸೈಬರ್ ಕ್ರೈಂ (ಸಿಇಎನ್) ಪೊಲೀಸ್ ಠಾಣೆಗೆ ಕೆಪಿಸಿಸಿ ವಕ್ತಾರ ಡಿ ಬಸವರಾಜ್ ದೂರು ನೀಡಿದ್ದಾರೆ.
ಫೇಸ್‌ಬುಕ್‌ನಲ್ಲಿ ಖದೀಮ ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತ ದಾವಣಗೆರೆ ಎಂಬ ಪೇಜ್‌ಗಳಲ್ಲಿ ಪೋಸ್ಟ್ ಒಂದನ್ನು ಹಾಕಲಾಗಿದೆ. ಪೋಸ್ಟ್‌ನಲ್ಲಿ ಹಂದಿಯ ಮೇಲೆ ಸಿದ್ದರಾಮಯ್ಯ ಕುಳಿತು ಸವಾರಿ ಮಾಡುತ್ತಿರುವಂತೆ ಫೋಟೋ ಶಾಪ್ ಮಾಡಲಾಗಿದೆ. ಅಲ್ಲದೆ, ‘ಮಸೀದಿ ಕಡೆ ಸಿದ್ದು ಸವಾರಿ’ ಎಂದು ಬರೆಯಲಾಗಿದೆ. ಪೋಸ್ಟ್‌ನ ಸ್ಕ್ರೀನ್‌ಶಾಟ್ ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಪೋಸ್ಟ್‌ನ ಸ್ಕ್ರೀನ್‌ಶಾಟ್ ಜೊತೆಗೆ ದೂರು ದಾಖಲಿಸಿರುವ ಬಸವರಾಜ್, ಪೋಸ್ಟ್ ಹಾಕಿದವರು ಮತ್ತು ಕಮೆಂಟ್ ಮಾಡಿರುವವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸಿದ್ದಾರೆ.

ಚುನಾವಣಾ ಫಲಿತಾಂಶ ಬಂದ ಸಂದರ್ಭದಲ್ಲಿ ಸಿದ್ದರಾಮಯ್ಯ ವಿರುದ್ಧ ಚಿತ್ರದುರ್ಗ ಜಿಲ್ಲೆಯ ಶಿಕ್ಷಕ ಶಾಂತಮೂರ್ತಿ ಎಂಬವರು ಪೋಸ್ಟ್ ಹಾಕಿದ್ದರು. ಅವರನ್ನು ಅಮಾನತು ಮಾಡಲಾಗಿತ್ತು. ಅಲ್ಲದೆ, ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಹಾಗೂ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ಪೋಸ್ಟ್ ಹಾಕಿದ್ದವರ ವಿರುದ್ಧವೂ ಬೆಂಗಳೂರಿನಲ್ಲಿ ಪ್ರಕರಣ ದಾಖಲಾಗಿತ್ತು.