- ಡಿಕೆ ಶಿವಕುಮಾರ್ ಅವರ ಕುತಂತ್ರದಿಂದ ರಾಜ್ಯದ ಜನರಿಗೆ ಸಮಸ್ಯೆ
- ನೀರು ಬಿಡುವುದಕ್ಕಿಂತ ಮೊದಲೇ ಇವರು ಯಾಕೆ ಸಭೆ ಕರೆಯಲಿಲ್ಲ?
ಚೆನ್ನಾಗಿ ಒದೆ ತಿಂದ ಕಳ್ಳನಿಗೆ ಕೊನೆಗೆ ಬುದ್ಧಿ ಬಂತಂತೆ ರಾಜ್ಯ ಸರ್ಕಾರದ ಪರಿಸ್ಥಿತಿ. ತಮಿಳುನಾಡಿಗೆ ಕಾವೇರಿ ನೀರು ಬಿಟ್ಟಾಗ ಇವರನ್ನು ಕಳ್ಳರು ಅಂದಿದ್ದೆ, ಈಗ ದಡ್ಡರು ಎನ್ನಬೇಕಿದೆ ಎಂದು ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಟೀಕಿಸಿದರು.
ಶಿವಮೊಗ್ಗದಲ್ಲಿ ಮಾತನಾಡಿದ ಅವರು, “ಡಿಕೆ ಶಿವಕುಮಾರ್ ಕುತಂತ್ರದಿಂದ ರಾಜ್ಯದ ಜನ ಸಮಸ್ಯೆ ಅನುಭವಿಸುವಂತಾಗಿದೆ. ನೀರು ಬಿಟ್ಟ ಮೇಲೆ ಸಭೆ ಮಾಡಿದರೆ ಏನು ಪ್ರಯೋಜನ” ಎಂದು ವಾಗ್ದಾಳಿ ನಡೆಸಿದರು.
“ನೀರು ಬಿಡುವುದಕ್ಕಿಂತ ಮೊದಲೇ ಇವರು ಯಾಕೆ ಸಭೆ ಕರೆಯಲಿಲ್ಲ. ಎಲ್ಲ ರಾಜಕೀಯ ಪಕ್ಷಗಳು, ಸಂಸದರು, ರೈತರ ಸಭೆ ಮಾಡಬಹುದಿತ್ತು. ಕಳ್ಳತನದಲ್ಲಿ ತಮಿಳುನಾಡಿಗೆ ನೀರು ಬಿಟ್ಟರು” ಎಂದರು.
“ನಾವು ಜನರ ಜೊತೆ ಇದ್ದೇವೆ ಎಂದು ಈಗ ಹೇಳುತ್ತಿದ್ದಾರೆ. ಇದಕ್ಕಿಂತ ಅನ್ಯಾಯ ಮತ್ತೇನಿದೆ. ರೈತರು, ವಕೀಲರು ಹಾಗೂ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹಿಂದೆ ಸಿಎಂ ನೀರು ಬಿಟ್ಟಿದ್ದ ಉದಾಹರಣೆ ಇದೆ. ಇವರಿಬ್ಬರು ರಾಜ್ಯದ ಜನರ ಕ್ಷಮೆ ಕೋರಬೇಕು” ಎಂದು ಆಗ್ರಹಿಸಿರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಇನ್ನಷ್ಟು ಮದ್ಯದಂಗಡಿಗಳ ಸಿದ್ದು ಕ್ರಮ ಸಮಾಜಘಾತಕ- ಕೈಬಿಡುತ್ತೇವೆಂದು ಆರನೆಯ ‘ಗ್ಯಾರಂಟಿ’ ನೀಡಲಿ
“ರಾಜ್ಯದಲ್ಲಿ ಬರದಿಂದ ಜನ ತತ್ತರಿಸಿ ಹೋಗಿದ್ದಾರೆ. ಎಷ್ಟು ಕಡೆ ಬರ ಬಂದಿದೆ. ಬೆಳೆ ನಷ್ಟ ಎಷ್ಟು ಅಂದು ಸಮೀಕ್ಷೆ ಕೂಡ ಮಾಡಿಲ್ಲ. ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರನ್ನು ದೂಷಿಸುವುದೇ ಇವರ ಕೆಲಸ. ಈಗಲೂ ಎಲ್ಲರನ್ನು ಕರೆದು, ಸಭೆ ಮಾಡಿ, ನಿರ್ಧಾರ ಕೈಗೊಳ್ಳಲಿ” ಎಂದು ಒತ್ತಾಯಿಸಿದರು.
“ಕೇಂದ್ರದ ಬಿಜೆಪಿ ನಾಯಕರೂ ರಾಜ್ಯದ ಬೆಳವಣಿಗೆ ಗಮನಿಸುತ್ತಿದ್ದಾರೆ. ಆದಷ್ಟು ಬೇಗ ವಿರೋಧ ಪಕ್ಷದ ನಾಯಕರ ಆಯ್ಕೆ ಆಗಲಿದೆ. ನಮ್ಮ ತಪ್ಪೇನಾದರೂ ಇದ್ದರೆ ಕರೆದು ಬುದ್ಧಿ ಹೇಳಲಿ. ಕಾಂಗ್ರೆಸ್‌ನವರು ಇದೇ ವಿಚಾರದಲ್ಲಿ ನಮ್ಮನ್ನು ಟೀಕಿಸುತ್ತಿದ್ದಾರೆ. ಸದನದಲ್ಲಿ ಲೇವಡಿ ಮಾಡುತ್ತಿದ್ದಾರೆ” ಎಂದರು.