ಬರಪೀಡಿತ ರೈತರಿಗೆ ನೆರವಾಗಲು ಬೆಳಗಾವಿ ಜಿಲ್ಲೆಯಲ್ಲಿ ಬೆಳಗಾವಿ ಶುಗರ್ಸ್ ಪ್ರೈವೇಟ್ ಲಿಮಿಟೆಡ್ ವತಿಯಿಂದ ಶುಕ್ರವಾರ ಮೋಡ ಬಿತ್ತನೆ ಕಾರ್ಯಾಚರಣೆ ನಡೆಸಿದೆ.
ಸಕ್ಕರೆ ಕಾರ್ಖಾನೆ ನಡೆಸುತ್ತಿರುವ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರ ಮೇಲ್ವಿಚಾರಣೆಯಲ್ಲಿ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಿಂದ ಮೋಡ ಬಿತ್ತನೆ ಕಾರ್ಯಾಚಾರಣೆ ಆರಂಭವಾಗಿದೆ. ಮೂರು ದಿನಗಳ ಕಾಲ ಕಾರ್ಯಾಚರಣೆ ನಡೆಯಲಿದೆ. “ಮೋಡ ಬಿತ್ತನೆಗೆ ಕೇಂದ್ರ ಸರ್ಕಾರದಿಂದ ಅನುಮೋದನೆ ಪಡೆಯಲು 20 ದಿನಗಳು ಬೇಕಾಯಿತು” ಎಂದು ಸತೀಶ್ ಹೇಳಿದರು.
“ಗೋಕಾಕ್ ಮತ್ತು ಖಾನಾಪುರ ಭಾಗದಲ್ಲಿ ಕಾರ್ಯಾಚರಣೆ ನಡೆಸಲಾಗಿದ್ದು, ವಾರಾಂತ್ಯದಲ್ಲಿ ಜಿಲ್ಲೆಯ ಇತರ ಭಾಗಗಳಲ್ಲಿಯೂ ಕಾರ್ಯಾಚರಣೆ ನಡೆಯಲಿದೆ. ಪ್ರತಿದಿನ ಮೂರು ಗಂಟೆಗಳ ಕಾಲ ಮೋಡ ಬಿತ್ತನೆ ನಡೆಯಲಿದೆ. ಬೆಳಗಾವಿ ಜಿಲ್ಲೆಯ ಒಣ ಪ್ರದೇಶಗಳಲ್ಲಿ ಮೋಡ ಬಿತ್ತನೆಯ ನಂತರ ಮಳೆಯಾದರೆ ಉತ್ತಮವಾಗಿರುತ್ತದೆ” ಎಂದು ಸತೀಶ್ ಹೇಳಿದರು.
“ಬೆಳಗಾವಿಯ ಮೋಡ ಬಿತ್ತನೆ ಯಶಸ್ವಿಯಾದರೆ, ಸರ್ಕಾರ ಅನುಮತಿ ನೀಡಿದರೆ, ಕಾವೇರಿ ಜಲಾನಯನ ಪ್ರದೇಶಗಳಾದ ಮಡಿಕೇರಿ ಮತ್ತು ಹಾಸನದಲ್ಲಿಯೂ ಬೆಳಗಾವಿ ಶುಗರ್ಸ್ ಪ್ರೈವೇಟ್ ಲಿಮಿಟೆಡ್‌ನಿಂದ ಮೋಡ ಬಿತ್ತನೆ ಕೈಗೊಳ್ಳಲಾಗುವುದು” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಗದಗ | ಜನತಾದರ್ಶನ: ವೃದ್ಧೆಗೆ ಆಧಾರ್ ಕಾರ್ಡ್, ಮಾಸಾಶನ ಆದೇಶ ಪತ್ರ ವಿತರಣೆ
ಶಾಸಕ ಪ್ರಕಾಶ ಕೋಳಿವಾಡ ಮಾತನಾಡಿ, “ಹಾವೇರಿ ಜಿಲ್ಲೆಯಲ್ಲಿ ಇತ್ತೀಚೆಗೆ ಮೋಡ ಬಿತ್ತನೆ ಮಾಡಿದ್ದರಿಂದ 5 ರಿಂದ 30 ಮಿ.ಮೀ ಮಳೆಯಾಗಿದೆ” ಎಂದು ತಿಳಿಸಿದರು.
ಕ್ಯಾಪ್ಟನ್ ವೀರೇಂದ್ರ ಸಿಂಗ್ ಮತ್ತು ಕ್ಯಾಪ್ಟನ್ ಆದರ್ಶ್ ಪಾಂಡೆ ಮೋಡ ಬಿತ್ತನೆ ವಿಮಾನವನ್ನು ಪೈಲಟ್ ಮಾಡುತ್ತಿದ್ದಾರೆ. ಕಡಿಮೆ ಎತ್ತರದಲ್ಲಿ ಮೋಡಗಳನ್ನು ಸ್ಪರ್ಶಿಸಲು, ಸಿಎಸಿಎಲ್ -2 ಅಯೋಡೈಡ್ ಅನ್ನು ಸಿಂಪಡಿಸಲಾಗುವುದು. 20,000 ಅಡಿ ಮತ್ತು ಅದಕ್ಕಿಂತ ಹೆಚ್ಚಿನ ಎತ್ತರದಲ್ಲಿರುವ ಮೋಡಗಳಿಗೆ ಸಿಲ್ವರ್ ಅಯೋಡೈಡ್ ಸಿಂಪಡಿಸಲಾಗುವುದು ಎಂದು ತಿಳಿದುಬಂದಿದೆ.