- ಅಕ್ಟೋಬರ್ 7ರವರೆಗೂ 2000 ರೂ. ನೋಟು ವಿನಿಮಯಕ್ಕೆ ಅವಕಾಶ
- ಅ.8ರ ನಂತರ 2000 ರೂ. ನೋಟುಗಳ ಸ್ವೀಕಾರ ಬ್ಯಾಂಕ್‌ಗಳಲ್ಲಿ ಸ್ಥಗಿತ
2 ಸಾವಿರ ರೂ. ಮುಖಬೆಲೆಯ ನೋಟುಗಳ ವಿನಿಮಯಕ್ಕೆ ನೀಡಿರುವ ಗಡುವನ್ನು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಅಕ್ಟೋಬರ್ 7ರವರೆಗೂ ವಿಸ್ತರಿಸಿದೆ.
ಈ ಮುಂಚೆ ಸೆಪ್ಟೆಂಬರ್ 30 (ಶನಿವಾರ) ಕೊನೆಯ ದಿನ ಎಂದು ಆರ್‌ಬಿಐ ಹೇಳಿತ್ತು. ಈಗ ಒಂದು ವಾರದ ಮಟ್ಟಿಗೆ ನೋಟುಗಳ ವಿನಿಮಯಕ್ಕೆ ಅವಕಾಶ ಮಾಡಿಕೊಟ್ಟಿದೆ.
ಅಕ್ಟೋಬರ್ 8ರ ನಂತರ 2 ಸಾವಿರ ರೂ ನೋಟುಗಳ ಸ್ವೀಕಾರವನ್ನು ಬ್ಯಾಂಕುಗಳು ನಿಲ್ಲಿಸಲಿವೆ. ಆದರೆ, ಜನರು ಆರ್‌ಬಿಐನ 19 ಶಾಖೆಗಳಲ್ಲಿ 2 ಸಾವಿರ ರೂ ನೋಟುಗಳನ್ನು ಆನಂತರವೂ ವಿನಿಮಯ ಮಾಡಿಕೊಳ್ಳಲು ಅವಕಾಶವಿದೆ ಎಂದು ಆರ್‌ಬಿಐ ತಿಳಿಸಿದೆ.
ಹಾಗೆಯೇ ಭಾರತೀಯ ಅಂಚೆಯಿಂದ ಆರ್‌ಬಿಐನ ‘ಇಷ್ಯೂ ಆಫೀಸರ್‍ಸ್’ಗಳಿಗೆ ಅಂಚೆ ಮುಖಾಂತರವೂ 2000 ನೋಟುಗಳನ್ನು ಕಳುಹಿಸಬಹುದಾಗಿದೆ. ಈ ನೋಟುಗಳು ವಿನಿಮಯದ ಕೊನೆಯ ದಿನ ಮುಗಿದ ಬಳಿಕವೂ ಮಾನ್ಯವಾಗಿರುತ್ತವೆ ಎಂದು ಆರ್‌ಬಿಐ ಹೇಳಿದೆ.
ಮೇ 19ರಂದು ಹೊರಡಿಸಿದ ಸುತ್ತೋಲೆ ಪ್ರಕಾರ ಆರ್‌ಬಿಐ ಚಲಾವಣೆಯಲ್ಲಿ ಇದ್ದ 3.56 ಲಕ್ಷ ಕೋಟಿ ರೂ. ಮೊತ್ತದಲ್ಲಿ 3.42 ಲಕ್ಷ ಕೋಟಿ ರೂ. ಮೊತ್ತದ 2 ಸಾವಿರ ರೂ. ಮುಖಬೆಲೆಯ ನೋಟುಗಳನ್ನು ಮರಳಿ ಪಡೆದಿದೆ. ಇದರಿಂದ ಸೆಪ್ಟೆಂಬರ್ 29ರವರೆಗೂ ಕೇವಲ 0.14 ಲಕ್ಷ ಕೋಟಿ ರೂ. ಮೊತ್ತದ 2 ಸಾವಿರ ರೂ. ಚಲಾವಣೆಯಲ್ಲಿ ಬಾಕಿ ಉಳಿದಿತ್ತು.