ಅಕ್ರಮವಾಗಿ ಡಿಜಿಟಲ್ ಖಾತಾಗಳನ್ನು ಮಾಡಿಕೊಟ್ಟು ಸರ್ಕಾರಕ್ಕೆ ಲಕ್ಷಾಂತರ ರೂಪಾಯಿ ನಷ್ಟ ಉಂಟು ಮಾಡಿದ ಬೀದರ್ ತಾಲ್ಲೂಕಿನ ಯದಲಾಪೂರ ಗ್ರಾಮ ಪಂಚಾಯತ್ ಪಿಡಿಒ ಶ್ರೀಧರ್ ಎಂಬುವರನ್ನುಜಿಲ್ಲಾ ಪಂಚಾಯತ್ ಸಿಇಒ ಶಿಲ್ಪಾ ಎಂ. ಶನಿವಾರ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.
ಸದ್ಯ ಗಾದಗಿ ಗ್ರಾಮ ಪಂಚಾಯತ್ ನಲ್ಲಿ ಪಿಡಿಒ ಆಗಿರುವ ಶ್ರೀಧರ್, ಈ ಹಿಂದೆ ಮಲ್ಕಾಪುರ ಗ್ರಾಮ ಪಂಚಾಯತ್ ನಲ್ಲಿ ಕಾರ್ಯನಿರ್ವಹಿಸುತ್ತಿರುವ ಅವಧಿಯಲ್ಲಿ ಡಿಜಿಟಲ್ ಖಾತಾ ನಮೂನೆ 11-A ಮತ್ತು ನಮೂನೆ 11-B ಅನಧಿಕೃತವಾಗಿ ತೆಗೆದುಕೊಟ್ಟು ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟು ಮಾಡಿ ಲಕ್ಷಾಂತರ ರೂಪಾಯಿ ಕೊಳ್ಳೆ ಹೊಡೆದಿದ್ದಾರೆ ಎಂಬ ದೂರುಗಳು ಸಲ್ಲಿಕೆಯಾಗಿದ್ದವು. ಸದರಿ ದೂರಿನ ಬಗ್ಗೆ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗೆ ಸೂಚಿಸಿದ್ದರು. ಅವರ ವರದಿ ಆಧರಿಸಿ ಪಿಡಿಒ ಮೇಲೆ ಶಿಸ್ತು ಕ್ರಮ ಜರುಗಿಸಿದ್ದಾರೆ.
ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗೆ ಮಲ್ಕಾಪುರ ಪಂಚಾಯತ್ ಗೆ ಭೇಟಿ ನೀಡಿ ಪರಿಶೀಲಿಸಿದಾಗ ಯಾವುದೇ ದಾಖಲಾತಿಗಳು ಇಲ್ಲದೆ ಡಿಜಿಟಲ್ ಖಾತಾ ವಿತರಣೆ ಮಾಡಿದ್ದು ಗಮನಕ್ಕೆ ಬಂದ ಕಾರಣ ಮಲ್ಕಾಪುರ ಪಂಚಾಯತ್ ದಿಂದ ಯದಲಾಪುರ ಪಂಚಾಯತ್ ಗೆ ವರ್ಗಾಹಿಸಿದ್ದರು. ಆದರೆ ಪ್ರಭಾರ ಹಸ್ತಾಂತರ ಮಾಡದೇ ಅನಧಿಕೃತವಾಗಿ ಖಾತಾ ವಿತರಣೆ ಮಾಡಿದ್ದು ತನಿಖೆಯಿಂದ ಗೊತ್ತಾಗಿದೆ ಎಂದು ಸಿಇಒ ಆದೇಶದಲ್ಲಿ ತಿಳಿಸಿದ್ದಾರೆ.