ಜೆಡಿಎಸ್–ಬಿಜೆಪಿ ಮೈತ್ರಿಯಿಂದಾಗಿ ಎರಡೂ ಪಕ್ಷಗಳಲ್ಲಿ ಹಲವರು ಅಸಮಾಧಾನ ಹೊಂದಿದ್ದಾರೆ. ಅವರಲ್ಲಿ ಕೆಲವರು ನಮ್ಮ ಸಂಪರ್ಕದಲ್ಲಿದ್ದಾರೆ. ಅವರೇ ನಮ್ಮನ್ನು ಸಂಪರ್ಕಿಸಿದ್ದಾರೆ ಎಂದು ಕೃಷಿ ಸಚಿವ ಎನ್ ಚಲುವರಾಯಸ್ವಾಮಿ ಹೇಳಿದ್ದಾರೆ.
ಕೋಲಾರದಲ್ಲಿ ಮಾತನಾಡಿದ ಅವರು, “ಪಕ್ಷವು 136 ಸ್ಥಾನಗಳನ್ನು ಗೆದ್ದಿದೆ. ನಮಗೆ ಯಾರನ್ನೂ ಕರೆತರುವ ಅಗತ್ಯವಿಲ್ಲ. ನಾವು ಆಪರೇಷನ್ ಹಸ್ತ ಮಾಡುತ್ತಿಲ್ಲ. ನಾವಾಗಿಯೇ ಯಾರನ್ನೂ ಸಂಪರ್ಕಿಸಿಲ್ಲ. ತಾವಾಗಿಯೇ ಬರುವವರನ್ನು ಬೇಡ ಎನ್ನುವುದಿಲ್ಲ. ಪಕ್ಷದ ತತ್ವ, ಸಿದ್ಧಾಂತ ಒಪ್ಪಿ ಬರುವವರನ್ನು ಸೇರಿಸಿಕೊಳ್ಳಲು ಪಕ್ಷವು ಸಿದ್ದವಿದೆ” ಎಂದು ಅವರು ಹೇಳಿದ್ದಾರೆ.
“ಜೆಡಿಎಸ್ ಶಾಸಕರು ಮತ್ತು ಮುಖಂಡರು ಪಕ್ಷ ತೊರೆಯುವ ಭಯ ಕುಮಾರಸ್ವಾಮಿ ಅವರಿಗಿದೆ. ಹೀಗಾಗಿ, ಏಕಾಂಗಿಯಾಗಿ ಚುನಾವಣೆ ಎದುರಿಸುವ ಆತಂಕದಲ್ಲಿ ಅವರು ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಸೋಲಿನ ಭಯದಿಂದ ಬಿಜೆಪಿ ಕೂಡ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡಿದೆ” ಎಂದು ಹೇಳಿದ್ದಾರೆ.