ಲಂಚ ಪಡೆಯುವ ಸಂದರ್ಭದಲ್ಲಿ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್‌ರಾಜ್ ಇಲಾಖೆಯ ಅಧಿಕಾರಿಗಳಿಬ್ಬರು ಲೋಕಾಯುಕ್ತ ಬಲೆಗೆ ಬಿದ್ದಿರುವ ಘಟನೆ ದಾವಣಗೆರೆ ಜಿಲ್ಲೆಯ ಹರಿಹರದಲ್ಲಿ ನಡೆದಿದೆ.
ಹರಿಹರ ತಾಲೂಕು ಪಂಚಾಯಿತಿ ಇಒ ರವಿ ಹಾಗೂ ಸಾರಥಿ ಗ್ರಾಮ ಪಂಚಾಯಿತಿ ಪಿಡಿಒ ರಾಘವೇಂದ್ರ ಅವರನ್ನು ಲೋಕಾಯುಕ್ತರು ಬಂಧಿಸಿದ್ದಾರೆ.
ಲಂಚ ಪ್ರಕರಣದಲ್ಲಿ ಗ್ರಾಮ ಪಂಚಾಯಿತಿ ಪಿಡಿಒ ಜತೆಗೆ ತಾಲೂಕು ಪಂಚಾಯಿತಿ ಇಒ ಪಾತ್ರವೂ ಇದ್ದುದರಿಂದ ಇಬ್ಬರನ್ನೂ ಬಂಧಿಸಲಾಗಿದೆ. ಜಮೀನಿನ ಪ್ಲಾನ್‌ಗೆ ಮಂಜೂರಾತಿ ನೀಡಲು ಒಟ್ಟು 1.60 ಲಕ್ಷ ರೂ. ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದು, 1.50 ಲಕ್ಷ ರೂ. ಲಂಚ ಪಡೆಯುವಾಗ ಹಣದ ಸಮೇತ ಸಾರಥಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸಿಕ್ಕಿ ಬಿದ್ದಿದ್ದಾರೆ. ಎರಡನೇ ಆರೋಪಿ ಹರಿಹರ ತಾಲೂಕು ಪಂಚಾಯಿತಿ ಇಒ ಸೇರಿದಂತೆ ಇಬ್ಬರನ್ನೂ ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.
ದಾವಣಗೆರೆ ಶಿವಾಜಿ ನಗರದ ಸಿದ್ದಣ್ಣನ ಗಲ್ಲಿ ನಿವೇಶನಗಳ ವ್ಯವಹಾರಸ್ಥ ಟಿ ವಿ ಶ್ರೀನಿವಾಸ ನೀಡಿದ ದೂರಿನ ಮೇರೆಗೆ 1.50 ಲಕ್ಷ ರೂ. ಹಣವನ್ನು ದೂರುದಾರರಿಂದ ಸ್ವೀಕರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಅಧಿಕಾರಿಗಳ ತಂಡ ಇಬ್ಬರನ್ನೂ ಬಂಧಿಸಿದೆ.
ದೂರುದಾರ ಟಿ ವಿ ಶ್ರೀನಿವಾಸ ಹಾಗೂ ಕರಲಹಳ್ಳಿ ಗ್ರಾಮದ ಸೈಯದ್ ಕರೀಂ ಎಂಬುವರು 2022ರ ಫೆಬ್ರವರಿ 17ರಂದು ಅದೇ ಗ್ರಾಮದ ಶೌಕತ್ ಖಾನ್ ಹಾಗೂ ಕುಟುಂಬದಿಂದ ಒಂದು ಎಕರೆ ಹಾಗೂ 2022ರ ಸೆಪ್ಟಂಬರ್ 7ರಂದು ಡಿ ಎನ್ ಸಂತೋಷ್, ಸೈಯದ್ ಕರೀಂ ಜಂಟಿಯಾಗಿ ಕರಲಹಳ್ಳಿ ಗ್ರಾಮದ 1 ಎಕರೆ ಜಮೀನನ್ನು ಕೆ ಪಿ ಅಯೂಬ್ ಖಾನ್, ಪತ್ನಿ, ಮಕ್ಕಳಿಂದ ಸ್ವಾಧೀನ ರಹಿತ ಕ್ರಯದ ಕರಾರು ಪತ್ರ ಮಾಡಿಸಿಕೊಂಡು, ಎರಡೂ ಜಮೀನುಗಳನ್ನು ಮೂಲ ಮಾಲೀಕರ ಹೆಸರಿನಲ್ಲಿಯೇ ನಿವೇಶನ ಮಾಡಲು ಒಪ್ಪಂದ ಮಾಡಿಕೊಂಡಿದ್ದರು.
ವಸತಿ ಉದ್ದೇಶಕ್ಕಾಗಿ ಅಲಿನೇಷನ್ ಮಾಡಿಸಿ, ಆ ಪ್ರದೇಶದಲ್ಲಿ ನಿವೇಶನಗಳಾಗಿ ವಿಂಗಡಿಸಿ, ಈ ಬಗ್ಗೆ ನಿವೇಶನದ ನಕ್ಷೆ ತಯಾರಿಸಿ, ಪ್ಲಾನ್‌ನಲ್ಲಿ ಕಂಡ ನಿವೇಶನಗಳಿಗೆ ಇ-ಸ್ವತ್ತು ಖಾತೆ ದಾಖಲು ಮಾಡಿಸಿದ್ದರು. ನಂತರ ತಮ್ಮ ಹಸರಿಗಾಗಲೀ, ತಾವು ಹೇಳುವವರ ಹೆಸರಿಗಾಗಲೀ ನಿವೇಶನಗಳನ್ನು ನೋಂದಣಿ ಮಾಡಿಕೊಡುವಂತೆ ಜಮೀನು ಮಾಲೀಕರಿಂದ ಕ್ರಯದ ಕರಾರು ಪತ್ರ ಮಾಡಿಕೊಂಡು, ಈ ವಿಚಾರವಾಗಿ ತಾವು, ಸ್ನೇಹಿತ ಸಂತೋಷ್‌ರ ಅಣ್ಣ ಭರತ್ ಕುಮಾರ ಕಚೇರಿಗಳಿಗೆ ಓಡಾಡಿ, ದಾಖಲೆಗಳನ್ನು ಮಾಡಿಸುತ್ತಿದ್ದರು. ಜಮೀನುಗಳಿಗೆ ಜಿಲ್ಲಾಧಿಕಾರಿಗಳಿಂದ ಅಲಿನೇಷನ್ ಮಾಡಿಸಿ, ತಾಂತ್ರಿಕ ಅನುಮೋದನೆ ಮತ್ತು ವಿನ್ಯಾಸ ನಕ್ಷೆ ರಚಿಸಲು ಎರಡೂ ಜಮೀನುಗಳ ಮಾಲೀಕರಿಂದ ಸಾರಥಿ ಗ್ರಾಪಂ ಪಿಡಿಒ ರಾಘವೇಂದ್ರ ಬಳಿ ಅರ್ಜಿ ಕೊಡಿಸಿದ್ದರು.
ಈ ಸುದ್ದಿ ಓದಿದ್ದೀರಾ? ಬೆಳಗಾವಿ | ಮೋಡ ಬಿತ್ತನೆ ಕಾರ್ಯಾಚರಣೆ ಆರಂಭ; ಯಶಸ್ವಿಯಾದರೆ ಕಾವೇರಿ ಜಲಾನಯನ ಪ್ರದೇಶಗಳಲ್ಲಿ ಯತ್ನ
ಸಾರಥಿ ಗ್ರಾಪಂ ಪಿಡಿಒ ರಾಘವೇಂದ್ರ, ಹರಿಹರ ತಾಪಂ ಇಒ ರವಿ ಜಮೀನುಗಳ ಪ್ಲಾನ್ ಅಪ್ರೂವಲ್ ಮಾಡಲು ಪಿರ್ಯಾದಿಯಿಂದ ಒಟ್ಟು 1.60 ಲಕ್ಷ ರೂ. ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ಲೋಕಾಯಕ್ತಕ್ಕೆ ಪಿರ್ಯಾದಿ ದೂರು ನೀಡಿದ್ದರು. ಸೆ.30ರ ಬೆಳಿಗ್ಗೆ ಹರಿಹರದ ಅಮರಾವತಿ ಕಾಲನಿಯಲ್ಲಿ ಪಿಡಿಒ ರಾಘವೇಂದ್ರ ಮನೆಯಲ್ಲಿ 1.50 ಲಕ್ಷ ರೂ. ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಗಾಳಕ್ಕೆ ಸಿಕ್ಕಿಬಿದ್ದಿದ್ದಾರೆ. 2ನೇ ಆರೋಪಿ ತಾಲೂಕು ಪಂಚಾಯಿತಿ ಇಒ ರವಿಯವರನ್ನೂ ಬಂಧಿಸಲಾಗಿದೆ.
ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಎಂ ಎಸ್ ಕೌಲಾಪುರೆ ಮಾರ್ಗದರ್ಶನದಲ್ಲಿ ಇನ್ಸ್‌ಪೆಕ್ಟರ್‌ಗಳಾದ ಸಿ ಮಧುಸೂದನ್, ಪ್ರಭು ಬಸೂರಿನ, ಎಚ್ ಎಸ್ ರಾಷ್ಟ್ರಪತಿ, ಲೋಕಾಯುಕ್ತ ಠಾಣೆಯ ಸಿಬ್ಬಂದಿಯಾದ ಆಂಜನೇಯ, ವೀರೇಶಯ್ಯ, ಧನರಾಜ್, ಲಿಂಗೇಶ, ಮಲ್ಲಿಕಾರ್ಜುನ, ಗಿರೀಶ, ಕೋಟಿನಾಯ್ಕ, ಕೃಷ್ಣನಾಯ್ಕ, ಬಸವರಾಜ, ಜಂಷೀದ್ ಖಾನಂ ಪ್ರಕರಣದ ಟ್ರ್ಯಾಪ್ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದು, ತನಿಖೆ ಮುಂದುವರಿದಿದೆ.