ಪ್ರವಾಸಿಗರ ಬಸ್ಸೊಂದು ಚಾಲಕನ ನಿಯಂತ್ರಣ ತಪ್ಪಿ ಆಳವಾದ ಕಣಿವೆಗೆ ಬಿದ್ದಿದ್ದರಿಂದ 8 ಮಂದಿ ಪ್ರವಾಸಿಗರು ಮೃತಪಟ್ಟು 42 ಮಂದಿ ಗಾಯಗೊಂಡಿರುವ ಘಟನೆ ಶನಿವಾರ ಸಂಜೆ ಊಟಿ–ಮೆಟ್ಟುಪಾಳ್ಯಂ ರಸ್ತೆಯಲ್ಲಿ ನಡೆದಿದೆ.
ಮೃತರಲ್ಲಿ ಬಹುತೇಕರು ತಮಿಳುನಾಡಿನ ತೆಂಕಾಸಿಯ ಮೂಲದವರಾಗಿದ್ದಾರೆ ಎಂದು ತಿಳಿದುಬಂದಿದೆ. ಗಾಯಾಳುಗಳನ್ನು ಕೂನೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಊಟಿಯಿಂದ ಮೆಟ್ಟುಪಾಳ್ಯಂಗೆ ತೆರಳುತ್ತಿದ್ದ ಬಸ್, 9ನೇ ತಿರುವಿನಲ್ಲಿ ನಿಯಂತ್ರಣ ಕಳೆದುಕೊಂಡು 50 ಅಡಿ ಆಳವಾದ ಕಣಿವೆಗೆ ಉರುಳಿ ಬಿದ್ದಿದೆ. ಘಟನೆಗೆ ಸಂಬಂಧಿಸಿದ ವಿಡಿಯೋ ಮತ್ತು ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿವೆ.
“ಬಸ್ನಲ್ಲಿ 57 ಪ್ರವಾಸಿಗರು ಇದ್ದರು, ಇವರೆಲ್ಲ ಮೆಟ್ಟುಪಾಳ್ಯಂ ಸುತ್ತಮುತ್ತಲಿನ ಪ್ರವಾಸಿ ತಾಣಗಳನ್ನು ನೋಡಿಕೊಂಡು ಊಟಿಗೆ ಹಿಂದಿರುಗುವಾಗ ಈ ಘಟನೆ ನಡೆದಿದೆ. ಗಾಯಾಳುಗಳಲ್ಲಿ ನಾಲ್ವರ ಪರಿಸ್ಥಿತಿ ಗಂಭೀರವಾಗಿದೆ. ಬಸ್ನ ಬ್ರೇಕ್ ಫೇಲಾಗಿದ್ದರಿಂದ ಈ ದುರ್ಘಟನೆ ಸಂಭವಿಸಿದೆ” ಎಂದು ತಮಿಳುನಾಡಿನ ಪೊಲೀಸರು ತಿಳಿಸಿದ್ದಾರೆ.
ಬಸ್ ಅಪಘಾತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ತಮಿಳುನಾಡಿನ ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ನೇತೃತ್ವದ ಸರ್ಕಾರ ಪರಿಹಾರ ಘೋಷಣೆ ಮಾಡಿದೆ. ಅಲ್ಲದೇ ಸಿ ಎಂ ಸ್ಟಾಲಿನ್ ತೀವ್ರ ಸಂತಾಪ ಸೂಚಿಸಿದ್ದಾರೆ. ಅಪಘಾತ ನಡೆದ ಸ್ಥಳದಲ್ಲಿ ಪರಿಹಾರ ಕಾರ್ಯಗಳ ಮೇಲ್ವಿಚಾರಣೆ, ರಕ್ಷಣಾ ಪ್ರಕ್ರಿಯೆ ಹೆಚ್ಚಿಸುವಂತೆ ಪ್ರವಾಸೋದ್ಯಮ ಸಚಿವ ಕೆ.ರಾಮಚಂದ್ರನ್ ಅವರಿಗೆ ಸೂಚಿಸಿದ್ದು, ಗಂಭೀರ ಮತ್ತು ಸಣ್ಣಪುಟ್ಟ ಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಾಗಿರುವವರಿಗೆ ವಿಶೇಷ ಚಿಕಿತ್ಸೆ ನೀಡಲು ಸೂಚಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಮೈಸೂರು | ಅಜ್ಜಿ ತಿಥಿ ಕಾರ್ಯಕ್ಕೆ ಬಂದಿದ್ದ ಕುಟುಂಬ ನೀರುಪಾಲು
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, “ಮೃತರ ಕುಟುಂಬಗಳಿಗೆ ನನ್ನ ಸಂತಾಪ ಸೂಚಿಸುತ್ತೇನೆ. ಮೃತರ ಕುಟುಂಬಗಳಿಗೆ ತಲಾ 2 ಲಕ್ಷ ರೂಪಾಯಿ, ಗಂಭೀರ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವವರಿಗೆ ತಲಾ 1 ಲಕ್ಷ ರೂಪಾಯಿ ಮತ್ತು ಸಣ್ಣಪುಟ್ಟ ಗಾಯಾಳುಗಳಿಗೆ ತಲಾ 50,000 ರೂಪಾಯಿಗಳನ್ನು ನೀಡಲು ಆದೇಶಿಸಿದ್ದೇನೆ. ಮುಖ್ಯಮಂತ್ರಿಗಳ ಸಾಮಾನ್ಯ ಪರಿಹಾರ ನಿಧಿಯಿಂದ ನೆರವು ನೀಡಲಾಗುವುದು” ಎಂದಿದ್ದಾರೆ.
ಬಸ್ಸಿನಲ್ಲಿದ್ದವರ ಪತ್ತೆಗಾಗಿ ಮತ್ತು ಅವರ ಕುಟುಂಬಸ್ಥರಿಗಾಗಿ ಸರ್ಕಾರ ಸಹಾಯವಾಣಿ ಸಂಖ್ಯೆ 1077 ಮತ್ತು 9443763207 ಅನ್ನು ತೆರೆದಿದೆ.