- ತನ್ನ ಊರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು ಎಂದು ಟವರ್ ಏರಿ ಯುವಕನ ಹೈಡ್ರಾಮಾ
- ಮಂಗಳೂರು ಸಮೀಪದ ಮುಲ್ಕಿ ಕೊಳ್ನಾಡು ಕೈಗಾರಿಕಾ ಪ್ರದೇಶದಲ್ಲಿ ಟವರ್ ಏರಿದ ಯುವಕ ಸತೀಶ್
ಆತನ ಊರು ವಿಜಯಪುರ. ರಸ್ತೆ ಸಮಸ್ಯೆ ಇರುವುದು ಕೂಡ ವಿಜಯಪುರದಲ್ಲಿ. ಆತ ಪ್ರತಿಭಟಿಸಿದ್ದು ಮೊಬೈಲ್ ಟವರ್ ಏರಿ. ವಿಚಿತ್ರ ಏನೆಂದರೆ ಟವರ್ ಏರಿರೋದು ವಿಜಯಪುರದಲ್ಲಿ ಅಲ್ಲ. ಮಂಗಳೂರಿನಲ್ಲಿ.
ಹೌದು. ಈ ಸುದ್ದಿ ವಿಚಿತ್ರವಾದರೂ ಸತ್ಯ. ಅ.1ರ ಭಾನುವಾರ ಬೆಳಗ್ಗೆ ಯುವಕನೋರ್ವ ಸುಮಾರು 250 ಅಡಿ ಎತ್ತರದ ಮೊಬೈಲ್ ಟವರ್ ಏರಿ ಆತಂಕ ಸೃಷ್ಟಿಸಿದ ಘಟನೆ ಮಂಗಳೂರಿನ ಮೂಲ್ಕಿ ಸಮೀಪದ ಕೊಳ್ನಾಡು ಕೈಗಾರಿಕಾ ಪ್ರದೇಶದಲ್ಲಿ ನಡೆದಿದೆ.
ಟವರ್ ಏರಿದವನನ್ನು ವಿಜಯಪುರ ಜಿಲ್ಲೆಯ ಜೇವರ್ಗಿ ಮೂಲದ ಯುವಕ ಸತೀಶ್ ಎಂದು ಗುರುತಿಸಲಾಗಿದೆ.

ಮೊಬೈಲ್ ಟವರ್‌ಗೆ ಏರಿದ ಕಾರಣ ಜನರಿಗೆ ಪುಕ್ಕಟೆ ಮನರಂಜನೆ ಮಾತ್ರವಲ್ಲದೆ ಸಾರ್ವಜನಿಕರಲ್ಲಿ ಭೀತಿ ಹುಟ್ಟಿಸಿದ್ದಾನೆ. ಸುಮಾರು 250 ಮೀಟರ್‌ಗಿಂತಲೂ ಎತ್ತರದ ಮೊಬೈಲ್ ಟವರ್ ಏರಿದ ಯುವಕ ಟವರ್‌ನ ತುತ್ತ ತುದಿಗೆ ಹೋಗಿ ವಿವಿಧ ಚೇಷ್ಟೆಗಳನ್ನು ಮಾಡುತ್ತಾ ಕುಳಿತಿದ್ದ. ಇದನ್ನು ಗಮನಿಸಿದ ಕೂಡಲೇ ಸ್ಥಳೀಯರು ಮುಲ್ಕಿ ಪೊಲೀಸರು ಮತ್ತು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ.
ಮುಲ್ಕಿ ಪೊಲೀಸರು ಹಾಗೂ ಅಗ್ನಿಶಾಮಕ ದಳ ಸ್ಥಳಕ್ಕೆ ಆಗಮಿಸಿ ಮೈಕ್ ಮೂಲಕ ಆತನಿಗೆ ಸಮಾಧಾನ ಮಾಡಿ ಕೆಳಗೆ ಬರಲು ಪ್ರಯತ್ನಿಸುತ್ತಿದ್ದರೂ ಪ್ರಯತ್ನ ವ್ಯರ್ಥವಾಯಿತು. ಸುಮಾರು ನಾಲ್ಕು ತಾಸುಗಳ ಬಳಿಕ ಆತ ತಾನಾಗಿಯೇ ಇಳಿಯುತ್ತಲೇ ಆತಂಕ ದೂರವಾಯಿತು.
ಅ.1ರ ಬೆಳಗ್ಗೆ ಯುವಕನೋರ್ವ ಸುಮಾರು 250 ಅಡಿ ಎತ್ತರದ ಮೊಬೈಲ್ ಟವರ್ ಏರಿ ಆತಂಕ ಸೃಷ್ಟಿಸಿದ ಘಟನೆ ಮಂಗಳೂರಿನ ಮೂಲ್ಕಿ ಸಮೀಪದ ಕೊಲ್ನಾಡು ಕೈಗಾರಿಕಾ ಪ್ರದೇಶದಲ್ಲಿ ನಡೆದಿದೆ.
— eedina.com (@eedinanews) October 1, 2023
ಟವರ್ ಏರಿದವನನ್ನು ವಿಜಯಪುರ ಜಿಲ್ಲೆಯ ಜೇವರ್ಗಿ ಮೂಲದ ಯುವಕ ಸತೀಶ್ ಎಂದು ಗುರುತಿಸಲಾಗಿದೆ. ತನ್ನ ಊರಿಗೆ ಮೂಲಭೂತ ಸೌಕರ್ಯ ಒದಗಿಸಬೇಕು ಎಂದು ಟವರ್ ಏರಿ ಹೈಡ್ರಾಮಾ. pic.twitter.com/Y275HyKjdx
ಸುಮಾರು ನಾಲ್ಕು ತಾಸಿನ ಬಳಿಕ ಕೆಳಗಿಳಿದ ಆತ, “ನಮ್ಮ ಬಿಜಾಪುರ ಬಾಗಲಕೋಟೆಯಲ್ಲಿ ರಸ್ತೆ ಮತ್ತು ಇತರ ಸಮಸ್ಯೆಗಳು ಬಹಳಷ್ಟು ಇರುವುದರಿಂದ ನಾನು ಇಲ್ಲಿ ಈ ರೀತಿ ಪ್ರತಿಭಟನೆ ಮಾಡುತ್ತಿದ್ದೇನೆ” ಎಂದು ಹೇಳಿ ಸ್ಥಳದಲ್ಲಿದ್ದ ಪೊಲೀಸ್ ಅಧಿಕಾರಿಗಳ ಸಹಿತ ಸಾರ್ವಜನಿಕರನ್ನು ಬೆಚ್ಚಿ ಬೀಳಿಸಿದ್ದಾನೆ.

ಘಟನೆಯ ಬಗ್ಗೆ ಈ ದಿನ.ಕಾಮ್ ಜೊತೆಗೆ ಮಾತನಾಡಿದ ಮುಲ್ಕಿ ಪೊಲೀಸ್ ಠಾಣೆಯ ಸಿಬ್ಬಂದಿಯೋರ್ವರು, “ಈತ ಮೂಲತಃ ವಿಜಯಪುರ ಜಿಲ್ಲೆಯವನಾಗಿದ್ದು, ಬೆಳಗಾಂ ಸಹಿತ ಅನೇಕ ನಾಲ್ಕು ಕಡೆಗಳಲ್ಲಿ ಇದೇ ರೀತಿ ಮೊಬೈಲ್ ಟವರ್ ಏರಿ ಆತಂಕ ಸೃಷ್ಟಿಸಿದ್ದ. ಕೆಳಗಿಳಿದ ಬಳಿಕ ಈ ಬಗ್ಗೆ ಆತನೇ ಹೇಳಿಕೊಂಡಿದ್ದಾನೆ. ಆತನ ಊರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು ಎಂದು ಈ ಕೃತ್ಯ ಎಸಗಿದ್ದಾನೆ. ಆತನ ಬಲ್ಲವರು ಆತನ ಮಾನಸಿಕ ಸ್ಥಿಮಿತ ಸರಿ ಇಲ್ಲ ಎಂದು ತಿಳಿಸಿದ್ದಾರೆ. ಸದ್ಯ ಕುಟುಂಬದವರು ಸತೀಶ್‌ನನ್ನು ಕರೆದುಕೊಂಡು ಹೋಗಿದ್ದಾರೆ. ವಿಚಾರಿಸಿದಾಗ, ಈಗಾಗಲೇ ಆತನ ಮೇಲೆ ಕೆಲವೊಂದು ಪ್ರಕರಣಗಳು ದಾಖಲಾಗಿದೆ ಎಂದು ತಿಳಿದುಬಂದಿದೆ. ನಮ್ಮ ಠಾಣೆಯ ಅಧಿಕಾರಿಗಳು ಬುದ್ಧಿಮಾತು ಹೇಳಿ ಕಳುಹಿಸಿದ್ದಾರೆ. ನಾವು ಯಾವುದೇ ಪ್ರಕರಣ ದಾಖಲಿಸಿಕೊಂಡಿಲ್ಲ” ಎಂದು ಮಾಹಿತಿ ನೀಡಿದ್ದಾರೆ.

ಸತೀಶ್ ಮೊಬೈಲ್ ಟವರ್‌ಗೆ ಹತ್ತುವ ದೃಶ್ಯವು ಸ್ಥಳೀಯ ಕಂಪನಿಯೊಂದರ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಘಟನೆಯ ವೇಳೆ ಸ್ಥಳದಲ್ಲಿ ನೂರಾರು ಮಂದಿ ಊರಿನವರು ಜಮಾಯಿಸಿದ್ದರಿಂದ ಪಣಂಬೂರು ಎಸಿಪಿ ಮನೋಜ್ ಕುಮಾರ್ ಹಾಗೂ ಮುಲ್ಕಿ ಪೊಲೀಸರು ಬಂದೋಬಸ್ತ್ ಏರ್ಪಡಿಸಿದ್ದರು.
ಮೊಬೈಲ್ ಟವರ್‌ಗೆ ಯಾವುದೇ ತಡೆಬೇಲಿಗಳಿಲ್ಲದೆ ಇರುವುದನ್ನು ಗಮನಿಸಿಯೇ ಆತ ಹತ್ತಿದ್ದಾನೆ. ಹಾಗಾಗಿ, ಸಂಬಂಧಪಟ್ಟವರಿಗೆ ಈ ಬಗ್ಗೆ ಪೊಲೀಸರು ಕರೆದು ಮಾಹಿತಿ ನೀಡಬೇಕು ಎಂದು ಸ್ಥಳೀಯರು ಪೊಲೀಸರಲ್ಲಿ ಮನವಿ ಮಾಡಿದ್ದಾರೆ.