ಕುರುಬ ಸಮುದಾಯಕ್ಕೆ ಎಸ್ಟಿ ಮೀಸಲಾತಿ ನೀಡಬೇಕೆಂಬ ಹೋರಾಟ ಮತ್ತೆ ಮುನ್ನೆಲೆಗೆ ಬಂದಿದೆ. ಕುರುಬ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿರುವ ಬೆಳಗಾವಿಯಲ್ಲಿ ಸಮುದಾಯವು ತಮ್ಮ ಪ್ರಾಬಲ್ಯ ತೋರಿಸಲು ಮುಂದಾಗಿದ್ದು, ಮಂಗಳವಾರ ಸಮುದಾಯದ ಮಹಾಧಿವೇಶ ಆಯೋಜಿಸಿದೆ.
ಲೋಕಸಭಾ ಚುನಾವಣೆಯ ಹತ್ತಿರಬರುತ್ತಿರುವ ಸಮಯದಲ್ಲಿ ಸಮುದಾಯದ ಹೋರಾಟ ಮತ್ತೆ ಮುಂಚೂಣಿಗೆ ಬಂದಿದೆ. ಎಸ್ಟಿ ಮೀಸಲಾತಿ ಮತ್ತು ಅಧಿವೇಶನದ ಕುರಿತು ಮಾತನಾಡಿರುವ ಬೆಳಗಾವಿ ಕಾಂಗ್ರೆಸ್ ಮುಖಂಡ ಲಕ್ಷ್ಮಣ ರಾಮ ಚಿಂಗಳೆ, “ಅಧಿವೇಶನಕ್ಕೆ ದೇಶದ ಮೂಲೆ ಮೂಲೆಗಳಿಂದ ರಾಜಕೀಯ ನಾಯಕರು ಆಗಮಿಸಲಿದ್ದಾರೆ. ಅವರೆಲ್ಲರ ನೇತೃತ್ವದಲ್ಲಿ ‘ಕೇಂದ್ರ ಸರ್ಕಾರ ಕುರುಬ ಸಮುದಾಯಕ್ಕೆ ಎಸ್ಟಿ ಮೀಸಲಾತಿ ನೀಡಬೇಕು’ ಎಂದು ಹಕ್ಕು ಮಂಡನೆ ಮಾಡಲಾಗುತ್ತದೆ” ಎಂದು ಹೇಳಿದ್ದಾರೆ.
“ಕುರುಬ ಸಮುದಾಯಕ್ಕೆ ಎಸ್ಟಿ ಮೀಸಲಾತಿ ನೀಡಬೇಕೆಂದು ಹಿಂದಿನ ರಾಜ್ಯ ಸರ್ಕಾರಕ್ಕೆ ಶಾಸ್ತ್ರೀಯ ಅಧ್ಯಯನ ವರದಿ ನೀಡಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಹೊಸ ಸಂಪುಟದಲ್ಲಿ ಒಪ್ಪಿಗೆ ಪಡೆದು ಕೇಂದ್ರಕ್ಕೆ ಶಿಫಾರಸು ಮಾಡಿದ್ದಾರೆ. ಕೇಂದ್ರವು ಶಿಫಾರಸನ್ನು ಅಂಗೀಕರಿಸಬೇಕೆಂದು ಸಮಾವೇಶದಲ್ಲಿ ಒತ್ತಾಯಿಸಲಾಗುತ್ತದೆ” ಎಂದು ಅವರು ತಿಳಿಸಿದ್ದಾರೆ.
“ಬೆಳಗಾವಿ ಜಿಲ್ಲೆಯಲ್ಲಿ ಕುರುಬ ಸಮುದಾಯದ ಜನರೂ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಜಿಲ್ಲೆಯಲ್ಲಿರವು ಎರಡು ಲೋಕಸಭಾ ಕ್ಷೇತ್ರಗಳ (ಬೆಳಗಾವಿ-ಚಿಕ್ಕೂಡಿ) ಪೈಕಿ ಒಂದು ಕ್ಷೇತ್ರದ ಟಿಕೆಟ್ಅನ್ನು ಕುರುಬ ಸಮುದಾಯಕ್ಕೆ ನೀಡಬೇಕು” ಎಂದು ಅವರು ಒತ್ತಾಯಿಸಿದ್ದಾರೆ.