ಸಂಕ್ರಾಂತಿ ಹಬ್ಬದ ನಂತರ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇರುವುದು ಅನುಮಾನ. ಸಂಕ್ರಾಂತಿ ವೇಳೆ ಸೂರ್ಯ ಪಥ ಬದಲಿಸುವಂತೆ, ರಾಜ್ಯದಲ್ಲಿ ಸರ್ಕಾರ ಬದಲಾಗಬಹುದು ಎಂದು ಮಾಜಿ ಸಚಿವ, ಬಿಜೆಪಿ ಮುಖಂಡ ಸಿ.ಪಿ ಯೋಗೇಶ್ವರ್ ಹೇಳಿದ್ದಾರೆ.
ಇತ್ತೀಚೆಗಷ್ಟೇ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರು ಇನ್ನು ಆರು ತಿಂಗಳಲ್ಲಿ ಸರ್ಕಾರ ಉರುಳುತ್ತದೆ ಎಂದು ಹೇಳಿದ್ದರು. ಅವರ ಹೇಳಿಕೆ ರಾಜಕೀಯ ವಲಯದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಜಿದ್ದಾಜಿದ್ದಿಗೆ ಕಾರಣವಾಗಿತ್ತು. ಈ ಬೆನ್ನಲ್ಲೇ, ಸಿ.ಪಿ ಯೋಗೇಶ್ವರ್ ಕೂಡ ಅಂತದ್ದೇ ಹೇಳಿಕೆ ನೀಡಿದ್ದಾರೆ. ಅಂದಹಾಗೆ, ಯೋಗೇಶ್ವರ್ ಮತ್ತು ಕುಮಾರಸ್ವಾಮಿ ಪರಸ್ಪರ ವಿರೋಧಿಗಳಾಗಿದ್ದು, ಚನ್ನಪಟ್ಟಣದಲ್ಲಿ ಹಲವಾರು ಭಾರೀ ನೇರಾ-ನೇರಾ ವಾಗ್ದಾಳಿ ನಡೆಸಿದ್ದರು. ಇದೀಗ, ಬಿಜೆಪಿ-ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದು, ಈ ಇಬ್ಬರೂ ಒಂದೇ ರೀತಿ ಮಾತನಾಡುತ್ತಿದ್ದಾರೆ.
ಚನ್ನಪಟ್ಟಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ರಾಜ್ಯದಲ್ಲಿನ ಇಂದಿನ ರಾಜಕೀಯ ಬೆಳವಣಿಗೆಯಿಂದಾಗಿ ಕಾಂಗ್ರೆಸ್ ನಾಯಕರ ನಡುವೆ ಬಿರುಕಿದೆ.ಕಾಂಗ್ರೆಸ್‌ನಲ್ಲಿ ಅಸಮಾಧಾನಗೊಂಡಿರುವ ಶಾಸಕರು ವಿಮುಖವಾಗಿ ಯೋಚಿಸುತ್ತಿದ್ದಾರೆ. ಹೀಗಾಗಿ, 2023ರ ಬಳಿಕ ರಾಜಕೀಯ ಬದಲಾಗುವ ಸಾಧ್ಯತೆ ಇದೆ” ಎಂದು ಹೇಳಿದ್ದಾರೆ.
“ಕಾಂಗ್ರೆಸ್ ಶಾಸಕರಿಗೆ ರಾಜಕೀಯ ಭವಿಷ್ಯದ ಆತಂಕ ಇದೆ. ಕೆಲವರು ನನ್ನೊಂದಿಗೆ ಮಾತನಾಡಿದ್ದಾರೆ. ಕಾಂಗ್ರೆಸ್ ಶಾಸಕರೇ ಸರ್ಕಾರದ ವಿರುದ್ಧ ತಿರುಗಿ ಬೀಳುತ್ತಾರೆ. ನಾವು ಯಾವುದೇ ಆಪರೇಷನ್ ಮಾಡುತ್ತಿಲ್ಲ” ಎಂದು ಹೇಳಿದ್ದಾರೆ.
“ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಧಮನಕಾರಿ ಆಡಳಿತ ಮಾಡುತ್ತಿದೆ. ಡಿಕೆ ಶಿವಕುಮಾರ್ ಆಪರೇಷನ್ ಹಸ್ತ ನಡೆಸಲು ಮುಂದಾಗಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಎದುರಿಸಲು ಮೈತ್ರಿ ಅನಿವಾರ್ಯ” ಎಂದು ಅವರು ಹೇಳಿದ್ದಾರೆ.
“ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ಹಂಚಿಕೆ ವಿಚಾರ ಹೈಕಮಾಂಡ್ ನಿರ್ಧಾರ ಮಾಡುತ್ತದೆ. ಹೈಕಮಾಂಡ್ ನಿರ್ಧಾರಕ್ಕೆ ನಾವು ಬದ್ದರಾಗಿದ್ದೇವೆ” ಎಂದಿದ್ದಾರೆ.