ಉಚಿತ ಆರೋಗ್ಯ ಶಿಬಿರವು ನಗರ ಹಾಗೂ ಗ್ರಾಮೀಣ ಜನರ ಆರೋಗ್ಯ ಜಾಗೃತಿಗೆ ಸಹಕಾರಿ. ಈಗಾಗಲೇ ಆರೋಗ್ಯ ಇಲಾಖೆಯು ನಗರ, ಗ್ರಾಮೀಣ ಪ್ರದೇಶಗಳಲ್ಲಿ ಆರೋಗ್ಯ ಶಿಬಿರಗಳನ್ನು ನಡೆಸುತ್ತಿದೆ ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್.ಬೋಸರಾಜು ಹೇಳಿದ್ದಾರೆ.
ರಾಯಚೂರಿನ ಕೃಷಿ ವಿಜ್ಞಾನ ವಿಶ್ವವಿದ್ಯಾಲಯ ಆವರಣದಲ್ಲಿ ನ್ಯಾಯಮೂರ್ತಿ ಶಿವರಾಜ ವಿ.ಪಾಟೀಲ್ ಪ್ರತಿಷ್ಟಾನ ಹಾಗೂ ಮೀನಾ ಎಡಿಡಿ ಚಾರಿಟಿ, ಇನಿಶಿಯೇಟಿವ್ ಫೌಂಡೇಶನ್, ಸಪ್ತಗಿರಿ ಆಸ್ಪೆತ್ರೆ, ಕಿದ್ವಾಯಿ ಆಸ್ಪೆತ್ರೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಐಎಂಎ ಸಹಯೋಗದಲ್ಲಿ ಉಚಿತ ಆರೋಗ್ಯ ಶಿಬಿರ ಆಯೋಜಿಸಲಾಗಿತ್ತು. ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
“ಗ್ರಾಮೀಣ ಭಾಗದಲ್ಲಿ ಜನ ಸಾಕಷ್ಟು ಆರೋಗ್ಯ ಸಮಸ್ಯೆ ಎದುರಿಸುತ್ತಾರೆ. ಆದ್ದರಿಂದ, ಇಂತಹ ಕಾರ್ಯಕ್ರಮಗಳು ಇನ್ನೂ ಹೆಚ್ಚು ನಡೆಯಬೇಕಿದೆ. ಆರೋಗ್ಯ ಇಲಾಖೆ ಜೊತೆ, ಖಾಸಗಿ ಸಂಸ್ಥೆಗಳು ಕೈಜೋಡಿಸಿ ತಾಲೂಕು ಮತ್ತು ಗ್ರಾಮೀಣ ಪ್ರದೇಶದಲ್ಲಿ ಆರೋಗ್ಯ ಶಿಬಿರ ಆಯೋಜಿಸಿದರೆ, ಜನರು ಜಾಗೃತರಾಗುತ್ತಾರೆ” ಎಂದು ಸಚಿವರು ಸಲಹೆ ನೀಡಿದರು.
ಸಿಂಧನೂರು ಶಾಸಕ ಹಂಪನಗೌಡ ಬಾದರ್ಲಿ ಮಾತನಾಡಿ, “ಜಿಲ್ಲೆಯಲ್ಲಿ ನೀರಾವರಿ ಪ್ರದೇಶ ಹೆಚ್ಚಳವಾದಮೇಲೆ, ಬೆಳವಣಿಗೆಗಳನ್ನು ಕಂಡಿದ್ದೇವೆ. ಅದೇ ರೀತಿ, ಆರೋಗ್ಯ ಕ್ಷೇತ್ರದಲ್ಲಿ ಕೂಡ ಬಹಳಷ್ಟು ಸಮಸ್ಯೆಗಳು ಕಾಡುತ್ತಿದ್ದು, ಜನರ ಆರೋಗ್ಯದ ಮೇಲೆ ಪರಿಣಾಮವಾಗಿದೆ. ಪರಿಸರವನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವ ಕೆಲಸವಾಗಬೇಕಿದೆ ಮತ್ತು ಶುದ್ಧವಾದ ನೀರು, ಒಳ್ಳೆಯ ಆಹಾರ ಸೇವನೆ ಮಾಡಬೇಕು. ಸಾಕಷ್ಟು ಜನರು ದುಶ್ಚಟಗಳಿಗೆ ಬಲಿಯಾಗಿ ದೊಡ್ಡ ದೊಡ್ಡ ರೋಗಗಳಿಗೆ ತುತ್ತಾಗುತ್ತಿದ್ದಾರೆ” ಎಂದರು.
ಪ್ರತಿಯೊಬ್ಬರ ಆರೋಗ್ಯ ಚೆನ್ನಾಗಿರಬೇಕು. ಈ ಆಲೋಚನೆಪ್ರತಿಯೋಬ್ಬರಲ್ಲು ಬಂದಾಗ ಮಾತ್ರ ಆರೋಗ್ಯವಾದ, ಸದೃಢವಾಧ ಸಮಾಜ ನಿರ್ಮಾಣ ಮಾಡಲು ಸಾಧ್ಯ. ೩೬ ವರ್ಷಗಳ ಹಿಂದೆ ಸರ್ವೆ ಮಾಡಿದಾಗ, ರಾಯಚೂರು ಜಿಲ್ಲೆಯ ಸುಮಾರು ೧೨೦೦ ಹಳ್ಳಿಗಳ ಪೈಕಿ, ೮೪೬ ಹಳ್ಳಿಗಳಲ್ಲಿ ನೀರು ಕುಡಿಯುವುದಕ್ಕೆ ಯೋಗ್ಯವಿಲ್ಲ ಎಂದು ತಿಳಿದುಬಂದಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದರು ಕೂಡ ಸರಿಯಾಗಿ ಸದ್ಬಳಕೆ ಮಾಡಿಕೊಳ್ಳುವಲ್ಲಿ ಜನ ವಿಫಲರಾಗಿದ್ದಾರೆ ಎಂದರು.
ಕಿಲ್ಲೆ ಬೃಹನ್ಮಠದ ಶಾಂತಮಲ್ಲ ಶಿವಾಚಾರ್ಯ ಮಹಾಸ್ವಾಮಿಗಳು ಮತ್ತು ಸೋಮವಾರ ಪೇಟೆ ಹಿರೇಮಠದ ಅಭಿನವ ರಾಚೋಟಿವೀರ ಶಿವಾಚಾರ್ಯ ಮಹಾಸ್ವಾಮಿಗಳು ದಿವ್ಯ ಸಾನಿಧ್ಯವನ್ನು ವಹಿಸಿದ್ದರು.
ಜಿಲ್ಲೆಯ ಎಲ್ಲ ತಾಲೂಕುಗಳಿಂದ ಆಗಮಿಸಿದ್ದ ಜನರು ಶಿಬಿರದಲ್ಲಿ ಪಾಲ್ಗೊಂಡು, ಆರೋಗ್ಯ ತಪಾಸಣೆ ಮಾಡಿಸಿಕೊಂಡರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ನ್ಯಾಯಮೂರ್ತಿ ಶಿವರಾಜ ವಿ.ಪಾಟೀಲ್, ಪ್ರತಿಷ್ಟಾನ ಅಧ್ಯಕ್ಷ ಎಸ್.ಎಂ.ರೆಡ್ಡಿ, ಮುಖ್ಯ ಅಥಿತಿಗಳಾಗಿ ಶಾಸಕ ಡಾ.ಶಿವರಾಜ ಪಾಟೀಲ್, ಮಾಜಿ ಶಾಸಕ ಬಸನಗೌಡ ಬ್ಯಾಗವಾಟ, ಪ್ರಜಾ ಪ್ರಸಿದ್ಧ ಪತ್ರಿಕೆ ಸಂಪಾದಕ ಬಿ.ಶಿವರಾಜ, ಎನ್.ಶರಣಪ್ಪ, ರಿಮ್ಸ್ ಡೀನ್ ಬಸವರಾಜ ಮಿರಪೂರು, ಡಿಎಚ್‌ಓ ಡಾ.ಸುರೇಂದ್ರಬಾಬು ಸೇರಿದಂತೆ ಇತರರು ಶಿಬಿರದಲ್ಲಿ ಉಪಸ್ಥಿತರಿದ್ದರು.