ಗಾಂಧಿಯವರನ್ನು ಯಾರೂ ಪ್ರಶ್ನೆ ಮಾಡದಂತೆ ತಡೆಯಲಾಗಿತ್ತು. ಅವರ ಬಗೆಗಿನ ಟೀಕೆಗಳನ್ನು ತಡೆಯಲಾಯಿತು, ಅವರನ್ನು ಕೇವಲ ಸ್ತುತಿ ಮಾಡಲಾಯಿತು ಅನ್ನುವುದು ಗಾಂಧೀಜಿಯವರ ವಿರೋಧಿಗಳ ಅಪವಾದ. ಹೀಗೆ ಅಪಾದನೆ ಮಾಡುವವರು ಗಾಂಧಿಯವರ ಕೃತಿ ಮತ್ತು ಗಾಂಧಿಯವರ ಕುರಿತು ಇತರರ ಕೃತಿಗಳನ್ನು ಓದಿಲ್ಲವೆಂದೇ ಅರ್ಥ
ಗಾಂಧೀಜಿಯವರು ಪ್ರಶ್ನಾತೀತರೇ ಎಂದು ಎಲ್ಲಿಯವರೆಗೆ ಪ್ರಶ್ನೆ ಜೀವಂತವಾಗಿರುತ್ತದೋ ಅಲ್ಲಿಯವರೆಗೂ ಗಾಂಧೀಜಿಯವರು ಪ್ರಸ್ತುತ ಎಂದೇ ಭಾವಿಸಬೇಕಾಗುತ್ತದೆ. ಪ್ರಸ್ತುತ ಅಲ್ಲವೆಂದಾದರೆ ಗಾಂಧಿಯವರ ಕುರಿತು ಪ್ರಶ್ನೆಗಳೇ ಹುಟ್ಟಲಾರವು.
ಮಹಾತ್ಮ ಗಾಂಧಿಯವರನ್ನು ಯುವಕರು ಅರ್ಥ ಮಾಡಿಕೊಳ್ಳಬೇಕಾದ ಬಗೆ ಹೇಗೆ ? ಎಂಬ ಪ್ರಶ್ನೆಗೆ ಉತ್ತರ ಬರೆಯುವಂತೆ ಈ ದಿನ.ಕಾಮ್ ನವರು ಕೋರಿದ್ದಾರೆ. ಐತಿಹಾಸಿಕವಾದ ಸಂಗತಿ/ ವಿಷಯ/ ವ್ಯಕ್ತಿಯ ಬಗ್ಗೆ ತಿಳಿದುಕೊಳ್ಳಲು ಮತ್ತು ಅರ್ಥ ಮಾಡಿಕೊಳ್ಳಲು ಓದು ಕಡ್ಡಾಯ.
ಇಲ್ಲಿ ತಿಳಿದುಕೊಳ್ಳುವುದು ಮತ್ತು ಅರ್ಥಮಾಡಿಕೊಳ್ಳಲು ಎಂಬ ಎರಡು ಶಬ್ದಗಳ ನಡುವೆ ವ್ಯತ್ಯಾಸವಿದೆ. ಗಾಂಧಿಯವರ ಬಗ್ಗೆ ತಿಳಿದುಕೊಂಡೆ. ಏನನ್ನು? ಅವರ ಜೀವನ ಕಥೆಯ ಬಗ್ಗೆ ಅವರ ನಿಲುವುಗಳ ಬಗ್ಗೆ. ಅಲ್ಲಿಗೆ ಒಂದು ಭಾಗ ಮುಗಿಯಿತು.
ಈ ತಿಳಿದುಕೊಳ್ಳುವ ಪ್ರಕ್ರಿಯೆಯಲ್ಲಿ ಗಾಂಧಿಯವರ ಬಗ್ಗೆ ಮೂಡುವ ಸಂಶಯಗಳ, ಪ್ರಶ್ನೆಗಳ, ವಿರೋಧಾಭಾಸಗಳ ಬಗ್ಗೆ ಪರ – ವಿರೋಧಗಳನ್ನು ಅಧ್ಯಯನ ಮಾಡಿ ತಾರ್ಕಿಕ ಉತ್ತರ ಕಂಡುಕೊಂಡಾಗ ಅದು ನಾವು ಗಾಂಧಿಯವರನ್ನು ಅರ್ಥ ಮಾಡಿಕೊಂಡಂತಾಗುತ್ತದೆ.
ಗಾಂಧಿಯವರನ್ನು ಯಾರೂ ಪ್ರಶ್ನೆ ಮಾಡದಂತೆ ತಡೆಯಲಾಗಿತ್ತು. ಅವರ ಬಗೆಗಿನ ಟೀಕೆಗಳನ್ನು ತಡೆಯಲಾಯಿತು, ಅವರನ್ನು ಕೇವಲ ಸ್ತುತಿ ಮಾಡಲಾಯಿತು ಅನ್ನುವುದು ಗಾಂಧೀಜಿಯವರ ವಿರೋಧಿಗಳ ಅಪವಾದ. ಹೀಗೆ ಅಪಾದನೆ ಮಾಡುವವರು ಗಾಂಧಿಯವರ ಕೃತಿ ಮತ್ತು ಗಾಂಧಿಯವರ ಕುರಿತು ಇತರರ ಕೃತಿಗಳನ್ನು ಓದಿಲ್ಲವೆಂದೇ ಅರ್ಥ.
ಗಾಂಧಿಯವರನ್ನು ಯಾರೂ ಪ್ರಶ್ನೆ ಮಾಡುವಂತಿರಲಿಲ್ಲ ಅನ್ನುವುದೇ ಸುಳ್ಳು. ಅವರ ಪ್ರಾರ್ಥನಾ ಸಭೆಯಲ್ಲಿ ಪ್ರಶ್ನೋತ್ತರ ಮಾಡಿದ ಅನೇಕ ದಾಖಲೆಗಳು ವಿವಿಧ ಪುಸ್ತಕಗಳಲ್ಲಿದೆ. ಗಾಂಧಿಯವರನ್ನು ಟೀಕೆ ಮಾಡುವಂತಿಲ್ಲ. ಮತ್ತೊಂದು ಸುಳ್ಳು.
ಫ್ರೆಡ್ .ಜೆ. ಬ್ಲಮ್ ಜರ್ಮನಿಯವರು. ಗಾಂಧೀಜಿಯವರ ಸಹವರ್ತಿಗಳನ್ನು ಸಂಪರ್ಕ ಮಾಡಿ ಅವರುಗಳ ಅಭಿಪ್ರಾಯ ಸಂಗ್ರಹ ಮಾಡಿ ಬರೆದ ಪುಸ್ತಕ ” understanding Gandhi ( Gandhian’s in conversation with Fred j blum) ಈ ಪುಸ್ತಕವನ್ನು ಉಷಾತಕ್ಕರ್ ಮತ್ತು ಜಯಶ್ರೀ ಮೆಹ್ತಾ ಸಂಪಾದಿಸಿದ್ದಾರೆ. ಇಲ್ಲಿ ಗಾಂಧಿಯವರ ಜೊತೆಗೆ ಕೊನೆಯವರೆಗೂ ಇದ್ದ ಕೃಪಲಾನಿ, ರೈಯಾನಾ ತಬ್ಜೀಮಾ, ಸುಶೀ ನಾಯರ್, ಜಾವೇರ್ ಪಟೇಲ್, ಸುಚೇತಾ ಕೃಪಲಾನಿ ಇವರುಗಳು ಗಾಂಧಿಯವರನ್ನು ಅನೇಕ ವಿಷಯಗಳಲ್ಲಿ ಒಪ್ಪದೇ ವಿಮರ್ಶೆ ಮಾಡಿದ, ಟೀಕೆ ಮಾಡಿದ ನೈಜ ದಾಖಲೆಯಿದೆ.
ಅದೇ ರೀತಿ ಪಾಸ್ಕಲ್ ಅಲೇನ್ ಕೃತಿ ಗಾಂಧಿ -ಆತ್ಮಶಕ್ತಿಯ ಯೋಧ (ಕನ್ನಡಕ್ಕೆ-ಫ್ರೊ. ಮೀನಾ ದೇಶಪಾಂಡೆ) ಪುಸ್ತಕದಲ್ಲಿ ಗಾಂಧಿಯವರ ನಡೆಗಳನ್ನು ಪ್ರಯೋಗಗಳನ್ನು ವಿಮರ್ಶೆಮಾಡಲಾಗಿದೆ. ಲೂಯಿ ಪಿಶರ್ ಅವರ ಗಾಂಧೀ ಚರಿತ್ರೆ ಪುಸ್ತಕದಲ್ಲಿ, ಸುರೇಶ ದ್ವಾದಶೀವಾರ ಅವರ ಪುಸ್ತಕ – ಗಾಂಧೀಜಿ ಮತ್ತು ಟೀಕಾಕಾರರು (ಕನ್ನಡ – ಚಂದ್ರಕಾಂತ ಪೋಕಳೆ) ಪುಸ್ತಕಗಳಲ್ಲಿ ಡಾ ಅಂಬೇಡ್ಕರ್ ಗಾಂಧಿಯವರನ್ನು ವಿಮರ್ಶಿಸಿದ ವಿವರ ಹಾಗೂ ಅನೇಕ ಗಣ್ಯರು ಗಾಂಧಿಯವರನ್ನು ಸಂವಾದಿಸಿದ ಸಂಗತಿಗಳು ಸಿಗುತ್ತವೆ.
ಗಾಂಧಿಯವರ ಕುರಿತು ಪ್ರಕಟಗೊಂಡ ಪುಸ್ತಕಗಳು ಒಂದು ಲಕ್ಷ ಇದೆ ಎಂದು ಅಂದಾಜಿಸಲಾಗಿದೆ. ಅಂದಿನ ಸ್ವಾತಂತ್ರ್ಯ ಹೋರಾಟದ ಮಹಾನ್ ನಾಯಕರುಗಳು ಗಾಂಧೀಜಿಯವರನ್ನು ಉಲ್ಲೇಖ ಮಾಡಿದ್ದಾರೆ. ಅದು ಕೇವಲ ಹೊಗಳಿಕೆ ಮಾತ್ರವಲ್ಲ. ಭಿನ್ನಾಭಿಪ್ರಾಯ, ಟೀಕೆ, ವಿಮರ್ಶೆ ಎಲ್ಲವೂ ಇದೆ. ಹಾಗಿರುವಾಗ ಗಾಂಧಿಯವರನ್ನು ಫೇಸ್‌ಬುಕ್ ಲೇಖನವೋ ವಾಟ್ಸಾಪ್ ಸಂದೇಶದಿಂದಲೋ ಅರ್ಥ ಮಾಡಿಕೊಳ್ಳುತ್ತೇವೆ ಮತ್ತು ಅದನ್ನೇ ನಂಬುತ್ತೇವೆ ಅನ್ನುವುದೇ ಮೂರ್ಖತನ. ಆದ್ದರಿಂದ ಗಾಂಧಿಯವರ ಕಾಲಾವಧಿಯಲ್ಲಿ ಪ್ರಶ್ನೆ ಮಾಡಿದವರೂ ಇದ್ದರು. ಟೀಕಿಸಿದವರೂ ಇದ್ದರು. ಟೀಕಿಸುತ್ತಲೇ ಅವರ ಉನ್ನತ ವಿಚಾರಧಾರೆ, ತತ್ವ, ಸಿದ್ಧಾಂತಗಳನ್ನು ಪಾಲಿಸುವವರೂ ಇದ್ದರು.
ಆದರೆ, ಇತ್ತೀಚೆಗೆ ಗಾಂಧಿಯವರ ವಿರೋಧಿಗಳು, ಅವರನ್ನು ಚಾರಿತ್ರ್ಯ ಹೀನ ಎಂದು ಬಿಂಬಿಸುತ್ತಿರುವುದು, ಅವರ ಕೊಡುಗೆ ಶೂನ್ಯ ಎಂದು ಪ್ರತಿಪಾದಿಸುತ್ತಿರುವುದು ಕಳೆದ ಒಂದು ದಶಕದಿಂದ ಜೋರಾಗಿಯೇ ನಡೆದಿದೆ. ಗಾಂಧಿಯವರನ್ನು ಸಂಪೂರ್ಣವಾಗಿ ಜನಮಾನಸದಿಂದ ದೂರಗೊಳಿಸಬೇಕು ಎಂಬ ದೊಡ್ಡ ಮಟ್ಟದ ಸಂಚು ನಡೆದಿದೆ. ಅದು ಭಾರತ ಸರ್ಕಾರದಲ್ಲಿರುವ ಗಾಂಧಿಯವರ ಸಂಕೇತಗಳನ್ನು ಅಳಿಸಬೇಕು, ಗಾಂಧಿಯವರ ಕುರಿತಿರುವ ಪಠ್ಯಪುಸ್ತಕ ತೆಗೆಯಬೇಕು. ಗಾಂಧಿಯವರ ಹೋರಾಟದಿಂದ ಸ್ವಾತಂತ್ರ್ಯ ಬಂದದ್ದಲ್ಲ. ಹೀಗೆ ನಿರ್ದಿಷ್ಟ ಕಾರ್ಯಸೂಚಿಯೊಂದಿಗೆ ಈ ತಂಡ ಕೆಲಸ ಮಾಡುತ್ತಿದೆ.
ಗಾಂಧಿಯವರಿಂದ ಮಾತ್ರ ಸ್ವಾತಂತ್ರ್ಯ ಬಂತು ಅನ್ನುವ ವಾದ ಯಾರೂ ಮಾಡಲಾರರು. ಅಂದಿನ ಸಂದಿಗ್ಧ ಪರಿಸ್ಥಿತಿಯಲ್ಲಿ ಗಾಂಧಿಯವರ ನಾಯಕತ್ವ ಸ್ವಾತಂತ್ರ್ಯ ಹೋರಾಟಕ್ಕೆ ವರದಾನವಾಯಿತು ಅನ್ನುವುದು ಅರ್ಥವಾಗ ಬೇಕಾದರೆ, ವರ್ತಮಾನವನ್ನು ಹೆಗಲ ಮೇಲಿರಿಸಿಕೊಂಡೇ ಭೂತಕಾಲದ ಚಿತ್ರವನ್ನು ಓದಿದರೆ ಅರ್ಥವಾಗುತ್ತದೆ.
ಗಾಂಧೀಜಿಯವರು ಕೇವಲ ಸ್ವಾತಂತ್ರ್ಯ ಹೋರಾಟ ಮಾಡಿದ್ದಲ್ಲ. ಹಿಂದೂಧರ್ಮದ ಬಗ್ಗೆ, ಸಾಮಾಜಿಕ, ಶೈಕ್ಷಣಿಕ, ಆರ್ಥಿಕ, ಗ್ರಾಮೀಣ ವ್ಯವಸ್ಥೆ, ಹೀಗೆ ಹತ್ತು ಹಲವು ವಿಷಯಗಳ ಬಗ್ಗೆ ಆಳವಾಗಿ ಅಧ್ಯಯನ ಮಾಡುತ್ತ ಸ್ಪಷ್ಟವಾದ ಅಭಿಪ್ರಾಯ ತೆರೆದಿಟ್ಟವರು.

ಜಗತ್ತಿನ ನೂರಾರು ದೇಶಗಳ ಮಹಾನ್ ಲೇಖಕರು, ಆಧ್ಯಾತ್ಮಿಕ ಪುರುಷರು, ರಾಜಕೀಯ ಮುತ್ಸದ್ಧಿಗಳು, ವಿಜ್ಞಾನಿಗಳು, ಕವಿಗಳು, ನಾಟಕಕಾರರು, ಹೋರಾಟಗಾರರು ಗಾಂಧೀಜಿಯವರ ಬಗ್ಗೆ ಅವರಿಂದ ಪ್ರಭಾವಿತರಾದ ಬಗ್ಗೆ ಬರೆದಿರುವುದು ಗಾಂಧಿಯವರ ವ್ಯಕ್ತಿತ್ವದ ಘನತೆಗೆ ಸಾಕ್ಷಿ. ಇಂದಿಗೂ ಜಗತ್ತಿನಾದ್ಯಂತ ಜನ ಗಾಂಧಿಯವರ ತತ್ವಗಳನ್ನು ಜೀವಂತವಾಗಿರಿಸುವ ಸಾಹಸ ಮಾಡುತ್ತಲೇ ಇದ್ದಾರೆ ಅನ್ನುವುದೇ ಗಾಂಧಿ ಪ್ರಸ್ತುತರೋ ಅಲ್ಲವೋ ಅನ್ನುವುದಕ್ಕೆ ಉತ್ತರ.
ಅರೆಬೆಂದ, ಕೊಳತೆ ಮಿದುಳುಗಳು ಗಾಂಧಿಯವರ ನಿಂದನೆ ಎಷ್ಟೇ ಮಾಡಿದರೂ, ಅದು ಗಾಂಧಿಯವರ ಒಂದು ಪುಸ್ತಕದ ಧೂಳನ್ನು ಕೊಡವಿದಂತೆ.
ಇದಕ್ಕೆ ಕಾರಣವೇನು?
ಗೋಡ್ಸೆ ಹೇಳಿ ಹೋದ ಕಾರಣಗಳು. ಗಾಂಧಿಯವರು ಹಿಂದೂ ವಿರೋಧಿ. ದೇಶ ವಿಭಜನೆ ಅವರೇ ಮಾಡಿದ್ದು.
ಇನ್ನು ಕೆಲವರಿಗೆ ಗಾಂಧಿಯವರ ಅಸ್ಪ್ರಶ್ಯತಾ ವಿರೋಧಿ ಚಳವಳಿ ಸಹ್ಯವಾಗಿಲ್ಲ. ಡಾ . ಅಂಬೇಡ್ಕರ್ ಅವರ ವಿಷಯದಲ್ಲಿ ಇರುವ ಸಿಟ್ಟೂ ಗಾಂಧಿಯವರ ಮೇಲೂ ಅಂತರಂಗದಲ್ಲಿದೆ.
ಅದೆಲ್ಲಕ್ಕಿಂತ ಮುಖ್ಯವಾಗಿ ಈಗಲೂ ಗಾಂಧಿಯವರ ಹೆಸರಿನಲ್ಲಿ ಒಟ್ಟಾಗಿ ಬಿಡುತ್ತಾರೆ. ಸಣ್ಣಪುಟ್ಟ ಭಿನ್ನಾಭಿಪ್ರಾಯ ಇದ್ದರೂ ಅಂಬೇಡ್ಕರ್ ವಾದಿಗಳು, ನೈಜ ಹಿಂದೂ ಧರ್ಮದ ಅನುಯಾಯಿಗಳು (ಗೋಡ್ಸೆ ವಾದಕ್ಕೆ ವಿರುದ್ಧವಿರುವ) ಭಯೋತ್ಪಾದನೆಗೆ ವಿರುದ್ಧವಿರುವ ಜಾತ್ಯಾತೀತ ಮುಸ್ಲಿಮರು, ಕ್ರೈಸ್ತರು, ಕಮ್ಯೂನಿಸ್ಟರು, ಹೀಗೆ ವಿವಿಧ ಸೈದ್ಧಾಂತಿಕ ರಾಜಕೀಯ ಮಂದಿಗಳೂ ಗಾಂಧಿಯವರ ವೇದಿಕೆಯಲ್ಲಿ ಒಂದಾಗಿ ಬಿಡುತ್ತಾರೆ.
ಜಗತ್ತಿನ ಅತೀ ಪ್ರಬಲ ದೇಶಗಳ ನಾಯಕರೂ ಗಾಂಧಿಯವರ ವಿಚಾರಧಾರೆಯೆದುರು ಮಂಡಿಯೂರುತ್ತಾರೆ. ಇದರಿಂದಾಗಿ ಗಾಂಧಿಯವರ ವಿಚಾರಧಾರೆ ಜೀವಂತವಾಗಿರುವ ತನಕ ಮತೀಯ ಮೂಲಭೂತವಾದ ಭಾರತವನ್ನು ಆಕ್ರಮಿಸಿಕೊಳ್ಳಲಾಗದು. ಹಾಗಾಗಿ ಗಾಂಧಿಯವರ ಅಸ್ಮಿತೆ ಅಳಿಯಬೇಕು.
ಅದಕ್ಕಾಗಿ ನಮ್ಮ ಯುವಪೀಳಿಗೆ ಗಾಂಧಿಯವರ ಬಗ್ಗೆ ಅರ್ಥವಾಗುವಂತೆ ಓದಿಕೊಳ್ಳಬೇಕು. ತನ್ಮೂಲಕ ಗಾಂಧಿಯವರ ವಿರೋಧಿಗಳು ಎದ್ದು ನಿಂತು ನಿಂದಿಸುವಾಗ, ಚಾರಿತ್ಯ್ರ ಹನನ ಮಾಡುವಾಗ ದಿಟ್ಟ ಪ್ರತ್ಯುತ್ತರ ನೀಡಬೇಕು.
ಗಾಂಧಿ ನಿಂದಕರು ಪದೇ ಪದೇ ಎದುರಿಡುವುದು ಹಂತಕ ಗೋಡ್ಸೆಯ ನ್ಯಾಯಾಲಯ ಹೇಳಿಕೆಯೆಂಬುದನ್ನ ಆಧರಿಸಿದ ಪುಸ್ತಕವನ್ನು. ಅದು ಸಂಪೂರ್ಣ ಕಪೋಲಕಲ್ಪಿತ ಅನ್ನುವುದನ್ನು ಪುರಾವೆ ಸಹಿತವಾಗಿ ನನ್ನ “ಮಿನುಗು ನೋಟ“ದಲ್ಲಿ ನಿರೂಪಿಸಿದ್ದೇನೆ. (ಗಾಂಧಿ ವಿಚಾರ ವೇದಿಕೆ ಪ್ರಸ್ತುತಪಡಿಸಿದ ಪುಸ್ತಕ).
ಇದನ್ನೂ ಓದಿ ಗಾಂಧಿ ಜಯಂತಿ ವಿಶೇಷ | ಜಾತಿ ಪದ್ಧತಿ ಬಗೆಗಿನ ಗಾಂಧೀಜಿಯವರ ನಿಲುವು ನಿಂತ ನೀರಾಗಿರಲಿಲ್ಲ
ಗಾಂಧಿಯವರ ವಿಚಾರಧಾರೆ ಸಂಪೂರ್ಣ ಅಳಿಸಿಹಾಕಿ ಅಲ್ಲಿ ಸ್ಥಾನ ಪಡೆಯಬೇಕು ಎಂಬ ಹುನ್ನಾರವೇ ಅಪಾಯಕಾರಿ. ಯಾಕೆಂದರೆ ಇಡೀ ಜಗತ್ತು ಸಧ್ಯ ಒಪ್ಪಿಕೊಂಡಿರುವುದು ಗಾಂಧೀಜಿಯವರ ಸಿದ್ಧಾಂತಗಳನ್ನು. ಅದಕ್ಕಿಂತ ಮಿಗಲಾದ ಸಿದ್ಧಾಂತ ಪ್ರತಿಪಾದನೆಯಾಗುವ ತನಕ ಇದುವೇ ಉಳಿದುಕೊಳ್ಳುವುದು. ಆದರೆ ರಾಜಕೀಯ , ಮತೀಯ ದಬ್ಬಾಳಿಕೆಯಿಂದ ಗಾಂಧಿಯವರ ವಿಚಾರಧಾರೆಯನ್ನು ಸ್ತಂಭನಗೊಳಿಸುವುದನ್ನು ನಾವು ವಿರೋಧಿಸಲೇಬೇಕು.
ಗಾಂಧೀಜಿ ಭಾರತದ ಬಹುಮುಖಿ ಸಂಸ್ಕೃತಿಯ ಪ್ರತಿನಿಧಿ. ಶಾಂತಿ ಸಹನೆ ಸತ್ಯದ ಪ್ರತಿಪಾದನೆಯ ಮೂಲಕ ಭಾರತದ ಸಂವೇದನಾಶೀಲ ಗುಣಗಳ ರಾಯಭಾರಿ. ಅವರನ್ನು ಸ್ಮರಿಸುಕೊಳ್ಳುವ ಸಂದರ್ಭದಲ್ಲಿ ಬೊಬ್ಬಿರುವ ನಿಂದಕರ ಮಾತುಗಳು ಮೂಲೆಗೆ ಸರಿಸುವಂತೆ ನಾವೂ ಮಾತನಾಡೋಣ.

ಎಂ ಜಿ ಹೆಗಡೆ, ಮಂಗಳೂರು
ಲೇಖಕ, ಜನಪರ ಹೋರಾಟಗಾರ