ಗಾಂಧಿ ಜಯಂತಿಯ ದಿನ ಸರ್ಕಾರ ಅಕ್ರಮ ಮದ್ಯ ಮಾರಾಟ ತಡೆಗಟ್ಟುವ ಬದಲು 600 ಗ್ರಾಮ ಪಂಚಾಯತಿಗಳೂ ಸೇರಿದಂತೆ ರಾಜ್ಯಾದ್ಯಂತ 1,000 ಹೊಸ ಮದ್ಯದಂಗಡಿಗಳಿಗೆ ಪರವಾನಿಗೆ ನೀಡುವ ಪ್ರಸ್ತಾವನೆ ಮುಂದಿಟ್ಟಿದೆ. ಇದು ಗ್ಯಾರಂಟಿ ಯೋಜನೆಗಳಿಂದ ಸಂತುಷ್ಟಗೊಂಡಿದ್ದ ಜನರಿಗೆ ಅಘಾತಗೊಳಿಸಿದೆ ಎಂದು ಮದ್ಯ ನಿಷೇಧ ಆಂದೋಲನ ಹಾಗೂ ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೀದರ್ ನಗರದ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಸಂಘಟನೆಗಳ ಕಾರ್ಯಕರ್ತ ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸಿದ್ದಾರೆ. ಗಾಂಧೀಜಿ ಜಯಂತಿಯಂದು ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಅವರಿಗೆ ಹಕ್ಕೊತ್ತಾಯ ಪತ್ರ ಸಲ್ಲಿಸಿದ್ದಾರೆ.
“ಅಕ್ರಮ ಮದ್ಯ ಮಾರಾಟ ತಡೆಗಟ್ಟುವುದು ಮತ್ತು ಹೊಸ ಮದ್ಯದಂಗಡಿಗಳಿಗೆ ಪರವಾನಿಗೆ ನೀಡುವ ಸರ್ಕಾರದ ಪ್ರಸ್ತಾವನೆ ಖಂಡನೀಯವಾಗಿದೆ. ಯಾವುದೇ ಸರಕಾರ ಮದ್ಯ ಮಾರಾಟದಿಂದ ಬರುವ ಆದಾಯವನ್ನು ಕಲ್ಯಾಣ ಕಾರ್ಯಕ್ರಮಗಳಿಗೆ ಬಳಸುವುದು ಅಪರಾಧ ಎಂದು ಗಾಂಧೀಜಿ ಹೇಳಿದ್ದರು. ಸಂವಿಧಾನದ ಆಶಯವೂ ಅದೇ ಆಗಿದೆ. ಆದರೆ ಸರ್ಕಾರ ಹೊಸ ಮದ್ಯದಂಗಡಿ ತೆರೆಯಲು ಅನುಮತಿ ನೀಡುವ ನಿರ್ಧಾರ ಸಮಾಜಘಾತುಕವಾಗಿದೆ” ಎಂದು ಪ್ರತಿಭಟನಾಕಾರರು ಕಿಡಿಕಾರಿದ್ದಾರೆ.
“ಮದ್ಯ ನಿಷೇಧ ಆಂದೋಲನ ಸಮಿತಿಯಿಂದ ರಾಜ್ಯದಲ್ಲಿ ಮಹಿಳೆಯರು 2015 ರಿಂದಲೂ ಸರಕಾರಕ್ಕೆ ತಮ್ಮಲ್ಲಿ ಒತ್ತಾಯಿಸಿ ಬೇಡಿಕೆಗಳನ್ನು ಮುಂದಿಡುತ್ತಿದ್ದೇವೆ. ಆದರೆ ಸರ್ಕಾರ ಮಾತ್ರ ಮಹಿಳೆಯರನ್ನು ಮತ್ತಷ್ಟು ಶೋಷಣೆಗೆ ಒಳಪಡಿಸುವ ನಿರ್ಧಾರಕ್ಕೆ ಕೈ ಹಾಕುತ್ತಿರುವುದು ವಿಪರ್ಯಾಸ” ಎಂದು ಬೇಸರ ವ್ಯಕ್ತಪಡಿಸಿದರು. ಆರೋಗ್ಯ ಹಾಳು ಮಾಡುವ ಇಂಥ ವಿಚಾರಗಳನ್ನು ಕೈ ಬಿಟ್ಟು ಗಾಂಧಿ ಆಶಯಗಳನ್ನು ಅನುಷ್ಠಾನಕ್ಕೆ ತರುವಂತೆ ಸರ್ಕಾರ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನಾಕಾರರ ಹಕ್ಕೊತ್ತಾಯಗಳು
1. ಉಚ್ಚ ನ್ಯಾಯಾಲಯದ ಆದೇಶದಂತೆ ಅಕ್ರಮ ಮದ್ಯ ಮಾರಾಟ ನಿಲ್ಲಿಸಲು ಕ್ರಮ ಕೈಗೊಳ್ಳಬೇಕು, ಅಕ್ರಮ ಮಾರಾಟಗಾರರ ಮೇಲೆ ಕಠಿಣ ಕ್ರಮ ತೆಗೆದು ಕೊಳ್ಳಬೇಕು.
2. ಕರ್ನಾಟಕ ಪಂಚಾಯತ್ ರಾಜ್ ಕಾನೂನಿನ ಅನ್ವಯ (73 ನೇ ತಿದ್ದುಪಡಿ) ಗ್ರಾಮಸಭೆಗೆ ಪರಮಾಧಿಕಾರ ನೀಡುವ ಆದೇಶ ಹೊರಡಿಸಬೇಕು. ಮಹಾರಾಷ್ಟ್ರ ಮತ್ತು ಹರ್ಯಾಣ ರಾಜ್ಯಗಳಂತೆ ಶೇ.10 ರಷ್ಟು ಮಹಿಳೆಯರು ಆಯಾ ಪಂಚಾಯತಿ ವ್ಯಾಪ್ತಿಯಲ್ಲಿ ಮದ್ಯ ಮಾರಾಟಕ್ಕೆ ಪರವಾನಗಿ ನೀಡಬಾರದೆಂದು ಗ್ರಾಮಸಭೆಯಲ್ಲಿ ನಿರ್ಧರಿಸಿದಲ್ಲಿ ಆ ಠರಾವನ್ನು ಸರಕಾರ ಎತ್ತಿ ಹಿಡಿಯಬೇಕು.
3. ಸರಕಾರ ಹೊಸದಾಗಿ 1000 ಮದ್ಯದಂಗಡಿಗಳಿಗೆ ಪರವಾನಿಗೆ ನೀಡುವ, ಮಾಲ್, ಸುಪ ಮಾರ್ಕೆಟ್ ಗಳಲ್ಲಿ ಮತ್ತು ಅನೈನ್ ಮಾರಾಟ ಮಾಡುವ ಪ್ರಸ್ತಾವನೆಯನ್ನು ತಕ್ಷಣ ಹಿಂತೆಗೆದುಕೊಳ್ಳಬೇಕು.
ಈ ಸಂದರ್ಭದಲ್ಲಿ ಸಂಘಟನೆ ಪ್ರಮುಖರಾದ ರಾಜಕುಮಾರ್ ಡಿಗಾರೆ, ಸುರೇಖಾ, ಸುಶೀಲಾ, ಗೀತಾ ಡಿಗಾರೆ, ರೇಷ್ಮಾ, ಶಾರದಾ ನಾರಾಯಣಪುರ, ರೇಖಾ ಸೇರಿದಂತೆ ಸಂಘಟನೆಯ ಕಾರ್ಯಕರ್ತರು ಇದ್ದರು.