ಹೊಸದಾಗಿ 1000 ಮದ್ಯದಂಗಡಿಗಳಿಗೆ ಪರವಾನಿಗೆ ನೀಡುವ ಪ್ರಸ್ತಾವನೆಯನ್ನು ಹಿಂಪಡೆಯಬೇಕು. ಅಕ್ರಮ ಮದ್ಯ ಮಾರಾಟ ತಡೆಗಟ್ಟಬೇಕು ಎಂದು ಆಗ್ರಹಿಸಿ ಬಳ್ಳಾರಿಯ ಗಾಂಧಿ ಪ್ರತಿಮೆ ಬಳಿ ಮದ್ಯ ನಿಷೇಧ ಆಂದೋಲನದ ಪದಾಧಿಕಾರಿಗಳು ಮೌನ ಪ್ರತಿಭಟನೆ ನಡೆಸಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ನಾಗೇಂದ್ರ ಅವರಿಗೆ ಹಕ್ಕೊತ್ತಾಯ ಪತ್ರ ಸಲ್ಲಿಸಿದರು.
ಸಂಘಟನೆ ಮುಖಂಡೆ ಅಕ್ಕ ಮಹಾದೇವಿ ಅವರು ಮಾತನಾಡಿ, “ಯಾವುದೇ ಸರ್ಕಾರ ಮದ್ಯ ಮಾರಾಟದಿಂದ ಬರುವ ಆದಾಯವನ್ನು ಕಲ್ಯಾಣ ಕಾರ್ಯಕ್ರಮಗಳಿಗೆ ಬಳಸುವುದು ಅಪರಾಧ. ಅಂತಹ ಹಣವನ್ನು ದೇಶ ಕಟ್ಟಲು ಬಳಸಬಾರದೆಂದು ಗಾಂಧೀಜಿ ದೃಢವಾಗಿ ನಂಬಿದ್ದರು. ಸಂವಿಧಾನದ ಆಶಯವೂ ಅದೇ ಆಗಿರುವುದರಿಂದ ಸರ್ಕಾರಗಳು ಮದ್ಯ ನಿಷೇಧದತ್ತ ಸಾಗಬೇಕು” ಎಂದರು.
“ವಿಪರ್ಯಾಸವೆಂದರೆ ಸರ್ಕಾರ ಅಕ್ರಮ ಮದ್ಯ ಮಾರಾಟ ತಡೆಗಟ್ಟುವ ಬದಲಾಗಿ ಗಾಂಧಿ ಜಯಂತಿಯ ದಿನದಂದೇ 600 ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿ 1000 ಹೊಸ ಮದ್ಯದಂಗಡಿ ತೆರೆಯಲು ಪರವಾನಿಗೆ ನೀಡುವ ಪ್ರಸ್ತಾವನೆ ಮುಂದಿಟ್ಟಿದೆ. ಗ್ಯಾರಂಟಿ ಯೋಜನೆಗಳಿಂದ ಸಂತಸಗೊಂಡಿದ್ದ ನಾವು ಮದ್ಯದಂಗಡಿ ಪ್ರಸ್ತಾವನೆಯಿಂದ ಆಘಾತಗೊಂಡಿದ್ದೇವೆ” ಎಂದರು.
ಉಚ್ಛ ನ್ಯಾಯಾಲಯದ ಆದೇಶದಂತೆ ಅಕ್ರಮ ಮದ್ಯ ಮಾರಾಟ ನಿಲ್ಲಿಸಲು ಕ್ರಮ ಕೈಗೊಳ್ಳಬೇಕು. ಅಕ್ರಮ ಮಾರಾಟಗಾರರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಕರ್ನಾಟಕ ಪಂಚಾಯತ್ ರಾಜ್ ಕಾನೂನಿನ ಅನ್ವಯ(73ನೇ ತಿದ್ದುಪಡಿ) ಗ್ರಾಮಸಭೆಗೆ ಪರಮಾಧಿಕಾರ ನೀಡುವ ಅದೇಶ ಹೊರಡಿಸಬೇಕು” ಎಂದು ಒತ್ತಾಯಿಸಿದರು.
“ಮಹಾರಾಷ್ಟ್ರ ಮತ್ತು ಹರಿಯಾಣ ರಾಜ್ಯಗಳಂತೆ ಶೇ.10ರಷ್ಟು ಮಹಿಳೆಯರು ಆಯಾ ಪಂಚಾಯತಿ ವ್ಯಾಪ್ತಿಯಲ್ಲಿ ಮದ್ಯ ಮಾರಾಟಕ್ಕೆ ಪರವಾನಗಿ ನೀಡಬಾರದೆಂದು ಗ್ರಾಮಸಭೆಯಲ್ಲಿ ನಿರ್ಧರಿಸಿದಲ್ಲಿ ಆ ಠರಾವನ್ನು ಸರ್ಕಾರ ಎತ್ತಿ ಹಿಡಿಯಬೇಕು. ಸರ್ಕಾರ ಹೊಸದಾಗಿ 1,000 ಮದ್ಯದಂಗಡಿಗಳಿಗೆ ಪರವಾನಿಗೆ ನೀಡುವ, ಮಾಲ್, ಸೂಪರ್ ಮಾರ್ಕೆಟ್‌ಗಳಲ್ಲಿ ಮಾರಾಟ ಮಾಡುವ ಪ್ರಸ್ತಾವನೆಯನ್ನು ಕೂಡಲೇ ಹಿಂತೆಗೆದುಕೊಳ್ಳಬೇಕು” ಎಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ಬೀದರ್ | ಹೊಸ ಮದ್ಯದಂಗಡಿಗಳಿಗೆ ಪರವಾನಿಗೆ ನೀಡುವ ಸರ್ಕಾರದ ನಡೆಗೆ ಖಂಡನೆ
“ಮಹಿಳೆಯರಿಗೆ ಮಾತ್ರವಲ್ಲ ಸಮಾಜದ ನೆಮ್ಮದಿ, ಆರೋಗ್ಯ ಎಲ್ಲವನ್ನೂ ಹಾಳು ಮಾಡುವ ಈ ವಿಚಾರಗಳನ್ನು ಕೈ ಬಿಟ್ಟು ಗಾಂಧಿ ಆಶಯಗಳನ್ನು ಅನುಷ್ಠಾನಕ್ಕೆ ತರಬೇಕು. ನಮ್ಮ ಬೇಡಿಕೆಗಳನ್ನು ಈಡೇರಿಸುವ ಮೂಲಕ ಕಾರ್ಯರೂಪಕ್ಕೆ ತಂದು ಗೌರವದಿಂದ ನಡೆಸಿಕೊಳ್ಳಬೇಕು” ಎಂದರು.
ಈ ಸಂದರ್ಭದಲ್ಲಿ ರೇಣುಕಾ, ದೀಪಿಕಾ, ಶಾಂತಮ್ಮ, ಪಾರ್ವತಿ, ಸುಜಾತಾ ಅನಿತಾ ಬಸವರಾಜ್ ಕಾವೇರಿ ಸೇರಿದಂತೆ ಇತರರು ಇದ್ದರು.