ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರು ಜಗತ್ತು ಕಂಡ ಅಪರೂಪದ ಶ್ರೇಷ್ಠ ವ್ಯಕ್ತಿ. ಸತ್ಯ, ಪ್ರೇಮ, ಅಹಿಂಸೆ ಮೂಲಕ ನಮ್ಮ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಎಸ್.ವಿ ಸಂಕನೂರ ತಿಳಿಸಿದರು.
ಗದಗದಲ್ಲಿ ಜಿಲ್ಲಾಡಳಿತ ಆಯೋಜಿಸಿದ್ದ ಮಹಾತ್ಮಾ ಗಾಂಧೀಜಿಯವರ 154ನೇ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. “ಸತ್ಯಾಗ್ರಹ ಹಾಗೂ ಅಸಹಕಾರ ಚಳುವಳಿಗಳು ಗಾಂಧಿ ಅವರ ಹೋರಾಟದ ಅಸ್ತ್ರಗಳಾಗಿದ್ದವು. ಸುಧೀರ್ಘ ಹೋರಾಟದ ನಂತರ ನಮ್ಮ ದೇಶಕ್ಕೆ ದೇಶಕ್ಕೆ ಸ್ವಾತಂತ್ರ್ಯ ಲಭಿಸಿತು. ದೇಶದ ಜನರ ಕಲ್ಯಾಣಕ್ಕಾಗಿ ಗಾಂಧಿ ಅವರು ಹಲವಾರು ಹೋರಾಟಗಳನ್ನು ಮಾಡಿದ್ದಾರೆ. ಜಾತೀಯತೆ, ಅಸ್ಪೃಶ್ಯತೆ, ಭ್ರಷ್ಟಾಚಾರ ನಿರ್ಮೂಲನೆ, ಗೋರಕ್ಷಣೆ ಮಾಡಲು ಹಲವಾರು ಹೋರಾಟಗಳನ್ನು ದೇಶದ ಒಳಿತಿಗಾಗಿ ಮಾಡಿದ್ದಾರೆ” ಎಂದು ಅವರು ತಿಳಿಸಿದರು.
“ಸ್ವಾತಂತ್ರ್ಯ ಸಿಕ್ಕ ನಂತರ ಭಾರತವನ್ನು ರಾಮರಾಜ್ಯವನ್ನಾಗಿ ಮಾಡುವ ಕನಸನ್ನು ಗಾಂಧೀಜಿ ಹೊಂದಿದ್ದರು. ಇಂದಿನ ನಾಯಕರು, ಅಧಿಕಾರಿಗಳು ಈ ಬಗ್ಗೆ ಆತ್ಮವಿಮರ್ಶೆ ಮಾಡಿಕೊಳ್ಳಬೇಕಾಗಿದೆ. ಸಂಪೂರ್ಣವಾಗಿ ರಾಮರಾಜ್ಯ ಮಾಡಲು ಆಗಿದೆಯೇ ಅಥವಾ ಇಲ್ಲವೋ ಎನ್ನುವ ಬಗ್ಗೆ ಗಂಭೀರ ಚಿಂತನೆ ಮಾಡಬೇಕಾಗಿದೆ” ಎಂದರು.
ಹುಲಕೋಟಿ ಸಹಕಾರಿ ರೇಡಿಯೋ ನಿರ್ದೇಶಕ ಜೆ.ಕೆ.ಜಮಾದಾರ ಮಾತನಾಡಿ, “ಮಹಾತ್ಮಾ ಗಾಂಧೀಜಿಯವರು ಶತಮಾನದ ಶ್ರೇಷ್ಠೋತ್ತಮ ಮಾನವಾರಾಗಿದ್ದಾರೆ. ಗಾಂಧೀಜಿಯವರೆಂದರೆ ಅಂತಾರಾಷ್ಟ್ರೀಯ ಭಾವೈಕ್ಯತೆಯ ಸಂಕೇತ. ಗಾಂಧೀಜಿಯವರನ್ನು ಯುಗ ದೇವ ಎಂದು ಕೆಲವು ತಜ್ಞರು ಕರೆದಿದ್ದಾರೆ” ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್, ಗದಗ ಬೆಟಗೇರಿ ನಗರಸಭೆ ಅಧ್ಯಕ್ಷೆ ಶ್ರೀಮತಿ ಉಷಾ ದಾಸರ, ಉಪಾಧ್ಯಕ್ಷೆ ಶ್ರೀಮತಿ ಸುನಂದಾ ಬಾಕಳೆ, ಜಿಲ್ಲಾ ಪೊಲೀಸ ವರಿಷ್ಟಾದಿಕಾರಿ ಬಿ.ಎಸ್.ನೇಮಗೌಡ, ಅಪರ ಜಿಲ್ಲಾಧಿಕಾರಿ ಅನ್ನಪೂರ್ಣ ಎಂ, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಸಿ.ಆರ್. ಮುಂಡರಗಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ರವಿ ಗುಂಜೀಕರ್ , ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಂ.ಎ. ರಡ್ಡೇರ , ವಾರ್ತಾಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ವಸಂತ ಬ ಮಡ್ಲೂರ, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಮಹಾಂತೇಶ ಕೆ, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೆಶಕ ವೀರಯ್ಯ ಸ್ವಾಮಿ ಬಿ, ಸುಮನ್ ಕುಲಕರ್ಣಿ, ಮುಸ್ಕಾನ್ ಕುರಾನ್, ವೆಂಕಟೇಶ ಅಲ್ಕೋಡ, ಉಷಾ ಕಾರಂತ ಇದ್ದರು.