ಶಿವಮೊಗ್ಗದ ರಾಗಿಗುಡ್ಡ ಪ್ರದೇಶದಲ್ಲಿ ಭಾನುವಾರ ರಾತ್ರಿ ನಡೆದ ಗಲಭೆಗೆ ಸಂಬಂಧಿಸಿದಂತೆ ಪರಿಸ್ಥಿತಿಯನ್ನು ತಕ್ಷಣವೇ ನಿಯಂತ್ರಣಕ್ಕೆ ತರಲಾಗಿದ್ದು, ಪರಿಸ್ಥಿತಿ ತಹಬದಿಗೆ ಬರುತ್ತಿದೆ. ಯಾರೂ ಅನಗತ್ಯ ಭಯಭೀತರಾಗುವ ಅಗತ್ಯವಿಲ್ಲ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ ಕೆ ಮಿಥುನ್‌ಕುಮಾರ್ ತಿಳಿಸಿದ್ದಾರೆ.
“ಗಲಭೆಯಲ್ಲಿ ಒಂದು ಕಾರು, ಮೂರು ಆಟೊ, ಎರಡು ದ್ವಿಚಕ್ರ ವಾಹನ ಜಖಂಗೊಂಡಿದ್ದು, ಕಲ್ಲು ತೂರಾಟದಿಂದ ಏಳು ಮನೆಗಳ ಕಿಟಕಿಗಳಿಗೆ ಹಾನಿಯಾಗಿದೆ. ಘಟನೆಗೆ ಸಂಬಂಧಿಸಿದಂತೆ ಈವರೆಗೆ 24 ಪ್ರಕರಣಗಳನ್ನು ದಾಖಲಿಸಿದ್ದು, 60 ಮಂದಿಯನ್ನು ಬಂಧಿಸಲಾಗಿದೆ” ಎಂದು ತಿಳಿಸಿದ್ದಾರೆ.
ಘಟನೆ ಹಿನ್ನೆಲೆ
ಮನೆಗಳಿಗೆ ಕಲ್ಲು ತೂರಾಟ, ಪೊಲೀಸರೊಂದಿಗೆ ಘರ್ಷಣೆಯಿಂದಾಗಿ ಭಾನುವಾರ ರಾತ್ರಿ ಇಡೀ ರಾಜ್ಯದ ಗಮನ ಸೆಳೆದಿದ್ದ ಶಿವಮೊಗ್ಗದ ರಾಗಿಗುಡ್ಡ ಪ್ರದೇಶದಲ್ಲಿ ಸೋಮವಾರ ನೀರವ ಮೌನ ಆವರಿಸಿತ್ತು. ಜಿಲ್ಲಾಡಳಿತ 144ನೇ ಸೆಕ್ಷನ್ ಅಡಿ ನಿಷೇಧಾಜ್ಞೆ ಜಾರಿಗೊಳಿಸಿದ್ದರಿಂದ ಇಡೀ ದಿನ ಸ್ಥಳೀಯರ ಗದ್ದಲ ಅಡಗಿತ್ತು. ಪೊಲೀಸರ ಓಡಾಟ, ಗಣ್ಯರ ಭೇಟಿಯ ಗದ್ದಲ ಮಾತ್ರ ಅಲ್ಲಿತ್ತು.
ರಾಗಿಗುಡ್ಡ ದೇವಸ್ಥಾನ, ಕೆಲವು ಮನೆಗಳ ಬಳಿ ಅಳವಡಿಸಿದ್ದ ಸಿಸಿಟಿವಿ ಕ್ಯಾಮೆರಾಗಳಲ್ಲಿನ ದೃಶ್ಯಗಳನ್ನು ಪರಿಶೀಲಿಸಿ ಗಲಾಟೆ ನಡೆಸಿದವರನ್ನು ವಶಕ್ಕೆ ಪಡೆಯುವಲ್ಲಿ ಪೊಲೀಸರು ನಿರತರಾಗಿದ್ದರು. ಆರ್‌ಎಎಫ್ ತುಕಡಿ ಮೊಕ್ಕಾಂ ಹೂಡಿದ್ದು, ಮೀಸಲು ಪಡೆ ಪೊಲೀಸರೊಂದಿಗೆ ಸೇರಿ ಆ ಪ್ರದೇಶದ ಗಸ್ತಿನ ಜೊತೆಗೆ ಬಂದು ಹೋಗುವವರ ಮೇಲೆ ನಿಗಾ ವಹಿಸಿತ್ತು. ರಾತ್ರಿಯೇ ಪೂರ್ವವಲಯ ಐಜಿಪಿ ತ್ಯಾಗರಾಜನ್ ಹಾಗೂ ಜಿಲ್ಲಾಧಿಕಾರಿ ಡಾ ಆರ್ ಸೆಲ್ವಮಣಿ ರಾಗಿಗುಡ್ಡಕ್ಕೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದ್ದರು.
ಬೆಳಿಗ್ಗೆ ಕೆಲ ಹೊತ್ತು ಅಂಗಡಿ ತೆಗೆದು ದಿನಸಿ, ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಮಾಡಿಕೊಡಲಾಗಿತ್ತು. ಬಳಿಕ ಜನರು ಮನೆಗಳನ್ನು ಬಿಟ್ಟು ಹೊರಗೆ ಬರಲಿಲ್ಲ.
ಈ ಸುದ್ದಿ ಓದಿದ್ದೀರಾ? ಶಿವಮೊಗ್ಗ ಗಲಾಟೆ | ಪರಿಸ್ಥಿತಿ ನಿಯಂತ್ರಣದಲ್ಲಿದೆ: ಗೃಹ ಸಚಿವ ಪರಮೇಶ್ವರ್
ನಿಷೇಧಾಜ್ಞೆ ಶಿವಮೊಗ್ಗ ನಗರಕ್ಕೂ ವಿಸ್ತರಿಸಿದ್ದರಿಂದ ಮಾರುಕಟ್ಟೆ ಸ್ತಬ್ಧವಾಗಿತ್ತು. ಅಂಗಡಿಗಳು ಬಾಗಿಲು ಹಾಕಿದ್ದವು. ಗಾಂಧಿ ಜಯಂತಿ ಪ್ರಯುಕ್ತ ಮದ್ಯ–ಮಾಂಸ ಮಾರಾಟಕ್ಕೂ ನಿಷೇಧ ಇದ್ದ ಕಾರಣ ಬಹಳಷ್ಟು ಹೋಟೆಲ್, ಮದ್ಯದಂಗಡಿಗಳು ಬಾಗಿಲು ಹಾಕಿದ್ದವು. ಚೇಂಬರ್ ಆಫ್ ಕಾಮರ್ಸ್‌ನ ಮನವಿ ಮೇರೆಗೆ ಸಂಜೆ ಕೆಲವು ಕಡೆ ಅಂಗಡಿಗಳ ಬಾಗಿಲು ತೆರೆಯಲು ಪೊಲೀಸರು ಅವಕಾಶ ಮಾಡಿಕೊಟ್ಟಿದ್ದರು.