- ಹೆಣ್ಣುಮಕ್ಕಳ ಮೇಲಿನ ದೌರ್ಜನ್ಯಗಳ ಹೆಚ್ಚಳಕ್ಕೆ ಮದ್ಯಪಾನ ಕಾರಣ
- ಹೊಸ ಮದ್ಯದಂಗಡಿ ತೆರೆಯುವ ಸರ್ಕಾರದ ನಿರ್ಧಾರ ಖಂಡನೀಯ
ಸರ್ಕಾರ ಹೊಸ ಮದ್ಯದಂಗಡಿ ತೆರೆಯಲು ಪರವಾನಗಿ ನೀಡುವ ಪ್ರಸ್ತಾವನೆ ಕೂಡಲೇ ಹಿಂಪಡೆಯುವಂತೆ ಆಗ್ರಹಿಸಿ ಸಿಪಿಐಎಂಎಲ್ ರೆಡ್ ಸ್ಟಾರ್ ಪಕ್ಷದ ಕಾರ್ಯಕರ್ತರು ರಾಯಚೂರಿನಲ್ಲಿ ಪತ್ರ ಚಳವಳಿ ನಡೆಸಿದರು.
ರಾಜ್ಯದಲ್ಲಿ ಒಂದು ಸಾವಿರಕ್ಕೂ ಹೆಚ್ಚು ಹೊಸ ಮದ್ಯದಂಗಡಿಗಳಿಗೆ ಪರವಾನಗಿ ನೀಡುವ ಸರ್ಕಾರದ ನಿರ್ಧಾರ ಖಂಡಿಸಿ ಮುಖ್ಯಮಂತ್ರಿಗಳಿಗೆ ಬರೆದ ಹಕ್ಕೊತ್ತಾಯ ಪತ್ರವನ್ನು ಅಂಚೆ ಮುಖಾಂತರ ರವಾನಿಸಿದರು.
ನಗರದ ಪ್ರಧಾನ ಅಂಚೆ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿ ಮಾತನಾಡಿದ ಪ್ರತಿಭಟನಾಕಾರರು “ಅಬಕಾರಿ ಇಲಾಖೆಯ ಈ ನಿರ್ಧಾರವನ್ನು ಸಿಪಿಐಎಂಎಲ್ ರೆಡ್ ಸ್ಟಾರ್ ಪಕ್ಷ ಉಗ್ರವಾಗಿ ಖಂಡಿಸುತ್ತದೆ. ಈಗಾಗಲೇ ಮದ್ಯಪಾನದಂಥ ದುಶ್ಚಟಗಳಿಂದ ಲಕ್ಷಾಂತರ ಕುಟುಂಬಗಳು ಬೀದಿಪಾಲಾಗಿವೆ. ಈ ನಡುವೆ ಬೆಲೆಯೇರಿಕೆ, ಬಡತನ, ನಿರುದ್ಯೋಗದಿಂದ ಬಡವರ ಜೀವನ ತತ್ತರಿಸಿದೆ. ಜೊತೆಗೆ ನೈತಿಕ ಮೌಲ್ಯಗಳು ಕುಸಿಯುತ್ತಿವೆ” ಎಂದು ಬೇಸರ ವ್ಯಕ್ತಪಡಿಸಿದರು.
“ಹೆಣ್ಣುಮಕ್ಕಳ ಮೇಲಿನ ಅತ್ಯಾಚಾರ, ದೌರ್ಜನ್ಯಗಳ ಸಂಖ್ಯೆ ಹೆಚ್ಚಳಕ್ಕೆ ಮದ್ಯಪಾನ ಕೂಡ ಮುಖ್ಯ ಕಾರಣ ಎನ್ನುವುದನ್ನು ಹಲವು ವರದಿಗಳು ಸಾಬೀತುಪಡಿಸುತ್ತಲೇ ಇವೆ. ಆದರೆ, ಸರ್ಕಾರ ಹೊಸ ಮದ್ಯದಂಗಡಿಗಳಿಗೆ ಪರವಾನಗಿ ನೀಡುವ ನಿರ್ಧಾರ ಕೈಗೆತ್ತಿಕೊಂಡಿರುವುದು ಸಮಂಜಸವಲ್ಲ. ಐದು ಗ್ಯಾರಂಟಿಗಳಿಗೆ ಹಣ ಹೊಂದಿಸಲು ಹೊಸ ಮದ್ಯದಂಗಡಿ ತೆರೆಯಲು ಸಿದ್ಧತೆ ನಡೆಸುತ್ತಿರುವ ರಾಜ್ಯ ಸರ್ಕಾರದ ಈ ನಡೆ ಸರಿಯಲ್ಲ. ಜನರಿಗೆ ಬದುಕುವ ಗ್ಯಾರಂಟಿ ಬೇಕು, ಸಾಯುವ ಗ್ಯಾರಂಟಿ ಬೇಡ” ಎಂದು ಅಸಮಾಧಾನ ಹೊರಹಾಕಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಮಾವಿನಕೆರೆಗೆ ಉದ್ದೇಶಪೂರ್ವಕವಾಗಿ ಕಸ ಸುರಿಯುತ್ತಿದ್ದಾರೆ: ಮಾರುತಿ ಬಗಾಡೆ ಕಳವಳ
ಈ ಸಂದರ್ಭದಲ್ಲಿ ಪಕ್ಷದ ಪ್ರಮುಖರಾದ ಆರ್.ಹುಚ್ಚರೆಡ್ದಿ, ಜಿ ಅಮರೇಶ್, ಅಜೀಜ್ ಜಾಗೀರದಾರ್, ಸೈಯದ್ ಅಬ್ಬಾಸ್ ಅಲಿ, ಮಲ್ಲಯ್ಯ ಕಟ್ಟೀಮನಿ, ನಿರಂಜನ್, ಲಕ್ಷ್ಮಣ್ ಇದ್ದರು.