ನಿತೀಶ್ ಕುಮಾರ್ ಮತ್ತು ಸಿದ್ದರಾಮಯ್ಯ ಇಬ್ಬರೂ ಸಮಾಜವಾದಿ ಹಿನ್ನೆಲೆಯಿಂದ ಬಂದವರು. ನಿತೀಶ್ ಕುಮಾರ್ ಕರ್ಪೂರಿ ಠಾಕೂರ್ ರಿಂದ ಪ್ರಭಾವಿತರಾದರೆ ಸಿದ್ದರಾಮಯ್ಯನವರು ದೇವರಾಜ ಅರಸು ಅವರಿಂದ ಪ್ರಭಾವಿತರಾದವರು. ತಮಿಳುನಾಡನ್ನು ಹೊರತುಪಡಿಸಿದರೆ ಸಾಮಾಜಿಕ ನ್ಯಾಯ ಕೊಡುವುದರಲ್ಲಿ ಎರಡೂ ರಾಜ್ಯಗಳು ಮುಂಚೂಣಿಯಲ್ಲಿವೆ.
1931ರ ನಂತರ ದೇಶದಲ್ಲಿ ಜಾತೀವಾರು ಸಮೀಕ್ಷೆ ಆಗಿರಲಿಲ್ಲ. ಅದು ಬ್ರಿಟೀಷರ ಕಾಲದಲ್ಲಿ ಆದ ಸಮೀಕ್ಷೆ. ಸ್ವಾತಂತ್ರ್ಯ ಬಂದ ನಂತರ ಜಾತೀವಾರು ಸಮೀಕ್ಷೆ ನಡೆಸಬೇಕು ಎಂಬ ಬೇಡಿಕೆ ಇದ್ದರೂ, ಸಂವಿಧಾನದಲ್ಲಿ ಪ್ರತಿ ಹತ್ತು ವರ್ಷಕ್ಕೊಮ್ಮೆ ಜಾತೀವಾರು ಸಮೀಕ್ಷೆ ಮಾಡಬೇಕು ಎಂದು ಹೇಳಿದ್ದರೂ ಯಾರೂ ಮುಂದಾಗಿರಲಿಲ್ಲ. ಬಹಳ ಮುಖ್ಯವಾಗಿ 1982ರಲ್ಲಿ ತಮಿಳುನಾಡು ಸರ್ಕಾರ ಜಾತೀವಾರು ಸಮೀಕ್ಷೆ ನಡೆಸಿ 69% ಮೀಸಲಾತಿ ಕೊಡುವ ನಿರ್ಧಾರ ತೆಗೆದುಕೊಳ್ಳುವುದು ಸಾಧ್ಯವಾಗಿತ್ತು. ಜಾತೀವಾರು ಸಮೀಕ್ಷೆಯ ಆಧಾರದಲ್ಲಿ ಶೆಡ್ಯೂಲ್ 9ರ ಅಡಿ ಪರಿಗಣಿಸಲಾಗಿತ್ತು.
ಆ ನಂತರ ಬಹುಶಃ ಇಲ್ಲಿಯವರೆಗೆ ಆ ಪ್ರಯತ್ನ ಯಾರೂ ಮಾಡಿರಲಿಲ್ಲ. ಅದನ್ನು ಮಾಡಿದ್ದು ಕರ್ನಾಟಕ ಮಾತ್ರ. ನಾನು ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷನಾಗಿದ್ದಾಗ ಕೇಂದ್ರ ಸರ್ಕಾರ ಮತ್ತು ಆಗ ಉಪ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯನವರು ಸ್ವಲ್ಪ ಹಣ ಬಿಡುಗಡೆ ಮಾಡಿದ್ದರು. ಅದರಲ್ಲಿ ಜಾತೀವಾರು ಸಮೀಕ್ಷೆ ನಡೆಸಲು ತಯಾರಿ ಮಾಡಿದ್ದೆವು. ಅಷ್ಟರಲ್ಲಿ ನನ್ನ ಅವಧಿ ಮುಗಿದ ಕಾರಣ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಸ್ಥಾನದಿಂದ ತೆರವಾದೆ. ಆನಂತರ ಮತ್ತೆ 2013ರಲ್ಲಿ ಸಿದ್ದರಾಮಯ್ಯನವರು ಅಧಿಕಾರಕ್ಕೆ ಬಂದಾಗ ಎಸ್ ಕಾಂತರಾಜ್ ಆಯೋಗ ಸ್ಥಾಪಿಸಿ ರೂ. 186ಕೋಟಿ ಬಿಡುಗಡೆ ಮಾಡಿದ್ದರು. ನಾನು ಆರಂಭಿಸಿದನ್ನು ಕಾಂತರಾಜ್ ಅವರು ಮುಂದುವರಿಸಿದರು. ಆದರೆ, ಸಮೀಕ್ಷೆ ಮಾಡಿದ ಮೇಲೆ ವರದಿ ಕೊಡುವ ವಿಚಾರದಲ್ಲಿ ಗೊಂದಲವಾಗಿತ್ತು. ಬಹಳ ಜನ “ವರದಿಯನ್ನು ಸಿದ್ದರಾಮಯ್ಯನವರು ಪಡೆಯಬಹುದಿತ್ತು” ಎಂದರು. ಆದರೆ, ಕಾಂತರಾಜ್ ಅವರು “ವರದಿ ರೆಡಿ ಇರಲಿಲ್ಲ” ಎಂದು ಹೇಳಿದ್ದರು. ವರದಿ ಸಂಪೂರ್ಣವಾದ ನಂತರ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರ ಮುಂದೆ ಹೋದಾಗಲೂ ಅವರು ಸ್ವೀಕರಿಸಿರಲಿಲ್ಲ. ಬಿಜೆಪಿ ಸರ್ಕಾರ ಬಂದಾಗಲೂ ವರದಿ ತೆಗೆದುಕೊಳ್ಳಲಿಲ್ಲ ಎಂದೂ ಕಾಂತರಾಜ್ ಹೇಳಿದ್ದರು. ನಂತರ ಗೊತ್ತಾದ ಆಶ್ಚರ್ಯಕರ ವಿಚಾರ ಏನೆಂದರೆ, ಆಯೋಗದ ಇಬ್ಬರು ಸದಸ್ಯರು, ಒಬ್ಬ ಸದಸ್ಯ ಕಾರ್ಯದರ್ಶಿ ವರದಿಗೆ ಸಹಿ ಹಾಕಿರಲಿಲ್ಲ.

ಆದರೆ, ಈಗ ಮತ್ತೆ ಕಾಂಗ್ರೆಸ್ ಸರ್ಕಾರ ಬಂದ ನಂತರ ಸಿದ್ದರಾಮಯ್ಯನವರು ವರದಿ ಪಡೆಯುವುದಾಗಿ ಎರಡ್ಮೂರು ಬಾರಿ ಹೇಳಿದ್ದಾರೆ. ಬಿಹಾರದಲ್ಲಿ ನಿತೀಶ್ ಕುಮಾರ್ ಇತ್ತೀಚೆಗಷ್ಟೇ ಆಯೋಗ ರಚನೆ ಮಾಡಿದ್ದರು. ಬಹಳ ಬೇಗ ಸಮೀಕ್ಷೆ ನಡೆಯಿತು. ಅಲ್ಲೂ ಬಿಜೆಪಿಯವರು, ಮತ್ತಿತರ ಪಕ್ಷದವರು ಅಡಚಣೆ ಮಾಡಿದ್ರು. ಹೈಕೋರ್ಟ್, ಸುಪ್ರೀಂ ಕೋರ್ಟ್ಗೆ ಹೋಗಿಯೂ ಎಲ್ಲ ತೊಂದರೆಗಳನ್ನು ನಿಭಾಯಿಸಿಕೊಂಡು ನಿತೀಶ್ ಕುಮಾರ್ ಅವರು ವರದಿಯನ್ನು ಪಬ್ಲಿಕ್ ಮಾಡಿದ್ದಾರೆ. ಇದನ್ನು ವಿರೋಧ ಪಕ್ಷಗಳ ಒಕ್ಕೂಟ ʼಇಂಡಿಯಾʼ ಸ್ವಾಗತಿಸಿದೆ. ನಿತೀಶ್ ಸರ್ಕಾರದ 9 ವಿರೋಧ ಪಕ್ಷಗಳೂ ಒಪ್ಪಿಕೊಂಡಿವೆ. ಇದೇ ಸಂದರ್ಭದಲ್ಲಿ ರಾಹುಲ್ ಗಾಂಧಿ ಅವರೂ ಜಾತೀವಾರು ಸಮೀಕ್ಷೆ ಬಗ್ಗೆ ಮಾತನಾಡುತ್ತಿದ್ದಾರೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ದೇಶಾದ್ಯಂತ ಜಾತೀವಾರು ಸಮೀಕ್ಷೆ ನಡೆಸುವುದಾಗಿ ಹೇಳಿದ್ದಾರೆ.
ಈ ಸಂದರ್ಭದಲ್ಲಿ ಸಿದ್ದರಾಮಯ್ಯನವರು ಮನಸ್ಸು ಮಾಡಿ ಜಾತೀವಾರು ಸಮೀಕ್ಷೆಯ ವರದಿಯನ್ನು ಬಿಡುಗಡೆ ಮಾಡಬೇಕು ಎಂದು ಇಲ್ಲಿರುವ ಹಿಂದುಳಿದ ವರ್ಷಗಳು, ಅತಿ ಹಿಂದುಳಿದ ವರ್ಗಗಳು (ಬಿಹಾರದಲ್ಲಿ extrem backword) ಒತ್ತಾಯಿಸಿವೆ. ಯಾಕೆಂದರೆ ಇವರಿಗೆ ಪ್ರಾತಿನಿಧ್ಯ ದೊರಕೇ ಇಲ್ಲ. ಪ್ರಾತಿನಿಧ್ಯ ದೊರಕಬೇಕಿರುವ ಸಮುದಾಯಕ್ಕೆ ಪ್ರಾತಿನಿಧ್ಯ ಕೊಡದೇ ಇರಲು ಅವರ ಬಗ್ಗೆ ಯಾವುದೇ ವಿವರ, ಅಂಕಿಅಂಶ ಇಲ್ಲದಿರುವುದು. ಆ ಕಾರಣ ಅವರನ್ನು ಕತ್ತಲಲ್ಲಿಡಲಾಗಿದೆ. ಈಗ ಈ ಸಮೀಕ್ಷೆಯಿಂದ ಅನೇಕ ಸತ್ಯಗಳು ಗೊತ್ತಾಗಲಿವೆ. ಪ್ರಾತಿನಿಧ್ಯವೇ ಇಲ್ಲದ ಸಮುದಾಯಗಳು ಪ್ರಾತಿನಿಧ್ಯ ಪಡೆಯಲು ಇದು ಸಹಾಯವಾಗಲಿದೆ.
ನಿತೀಶ್ ಕುಮಾರ್ ಮತ್ತು ಸಿದ್ದರಾಮಯ್ಯ ಇಬ್ಬರೂ ಸಮಾಜವಾದಿ ಹಿನ್ನೆಲೆಯಿಂದ ಬಂದವರು. ನಿತೀಶ್ ಕುಮಾರ್ ಕರ್ಪೂರಿ ಠಾಕೂರ್ ರಿಂದ ಪ್ರಭಾವಿತರಾದರೆ, ಸಿದ್ದರಾಮಯ್ಯನವರು ದೇವರಾಜ ಅರಸು ಅವರಿಂದ ಪ್ರಭಾವಿತರಾದವರು. ತಮಿಳುನಾಡನ್ನು ಹೊರತುಪಡಿಸಿದರೆ ಸಾಮಾಜಿಕ ನ್ಯಾಯ ಕೊಡುವುದರಲ್ಲಿ ಎರಡೂ ರಾಜ್ಯಗಳು ಮುಂಚೂಣಿಯಲ್ಲಿವೆ. ಬಿಹಾರದಲ್ಲಿ ನಿತೀಶ್ ಕುಮಾರ್ ಅವರು ಏನೇ ಕಾಂಟ್ರವರ್ಸಿ ಬಂದರೂ ವರದಿ ಬಿಡುಗಡೆ ಮಾಡಿರುವುದರಿಂದ ಕರ್ನಾಟಕದಲ್ಲಿ ವರದಿ ಬಿಡುಗಡೆ ಮಾಡುವ ತುರ್ತು ಬಹಳ ಇದೆ ಎಂದು ನನಗನ್ನಿಸುತ್ತಿದೆ. ಈ ಕೆಲಸವನ್ನು ಸಿದ್ದರಾಮಯ್ಯನವರು ಮಾಡುವ ಭರವಸೆಯೂ ಇದೆ.

ಡಾ ಸಿ ಎಸ್ ದ್ವಾರಕಾನಾಥ್
ಹಿರಿಯ ವಕೀಲರು, ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ