ಸಾಲು ಸಾಲು ರಜೆಗಳನ್ನು ಮುಗಿಸಿ ರಾಜಧಾನಿ ಬೆಂಗಳೂರಿಗೆ ವಲಸೆ ಕಾರ್ಮಿಕರು ಮರಳಿ ಬರುತ್ತಿದ್ದು, ಕಳೆದ ಎರಡು ಮೂರು ದಿನಗಳಿಂದ ನಗರದಲ್ಲಿ ಭಾರೀ ವಾಹನ ಸಂಚಾರ ದಟ್ಟಣೆ ಉಂಟಾಗಿದೆ.
ಸಾಲು ಸಾಲು ರಜೆಗಳ ಬಳಿಕ ತಮ್ಮ ಊರುಗಳಿಂದ ಜನರು ವಾಪಸಾಗುತ್ತಿದ್ದಾರೆ. ಹಾಗಾಗಿ, ಬೆಂಗಳೂರಿನಲ್ಲಿ ವಾಹನ ಸಂಚಾರ ದಟ್ಟಣೆ ಹೆಚ್ಚಳವಾಗಿದೆ. ಡಬಲ್ ರೋಡ್, ಕೆ.ಆರ್.ಸರ್ಕಲ್, ಕಬ್ಬನ್ ಪಾರ್ಕ್ ಬಳಿ ಟ್ರಾಫಿಕ್ ಜಾಮ್ ಉಂಟಾಗಿದೆ. ಈ ಮಧ್ಯೆ, ಹಸಿರು ಮಾರ್ಗದ ಮೆಟ್ರೋ ಸಂಚಾರದಲ್ಲಿ ವ್ಯತ್ಯಯವಾದ ಹಿನ್ನೆಲೆ, ಜನರು ಹೈರಾಣಾಗಿದ್ದಾರೆ. ಊರಿಂದ ವಾಪಾಸ್ ಆದ ಜನರು, ನೌಕರರು, ಶಾಲಾ-ಕಾಲೇಜು ವಿದ್ಯಾರ್ಥಿಗಳು ಬಿಎಂಟಿಸಿ ಬಸ್, ಆಟೋ, ಓಲಾ, ಉಬರ್ ಮೊರೆ ಹೋಗಿದ್ದಾರೆ.
ಸದ್ಯ ಬೆಂಗಳೂರಿನ ಟ್ರಾಫಿಕ್ ಸಮಸ್ಯೆಗೆ ವಾಹನ ಸವಾರರು ಬೇಸರ ವ್ಯಕ್ತಪಡಿಸಿದ್ದಾರೆ. ಗಂಟೆಗಟ್ಟಲೇ ಟ್ರಾಫಿಕ್ನಲ್ಲಿ ಸಿಲುಕುವುದರಿಂದ ಶಾಲಾ ಮಕ್ಕಳು ನಿಗದಿತ ಸಮಯಕ್ಕೆ ಶಾಲೆಗೆ ತೆರಳಲು ಸಾಧ್ಯವಾಗುತ್ತಿಲ್ಲ. ಅಲ್ಲದೇ, ಮನೆಗೆ ಸೇರುವುದು ರಾತ್ರಿಯಾಗುತ್ತಿದೆ. ಇನ್ನು ಸುಸ್ತಾಗಿ ಕೆಲಸ ಮುಗಿಸಿ ಮನೆ ಸೇರೋಣ ಎನ್ನುವ ನೌಕರರು ಟ್ರಾಫಿಕ್ನಲ್ಲಿಯೇ ಹೆಚ್ಚು ಸಮಯ ಕಳೆಯುವಂತಹ ಪರಿಸ್ಥಿತಿ ಎದುರಾಗಿದೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಬೆಳ್ಳಂಬೆಳಗ್ಗೆ ಭೀಕರ ಅಪಘಾತ; 2 ವರ್ಷದ ಮಗು ಸೇರಿ ಇಬ್ಬರು ಸಾವು
ಕಳೆದ ನಾಲ್ಕು ದಿನಗಳ ಹಿಂದೆ ರಾಜಧಾನಿ ಬೆಂಗಳೂರಿನ ಹೊರ ವರ್ತುಲ ರಸ್ತೆಯಲ್ಲಿ 3 ಗಂಟೆಗೂ ಹೆಚ್ಚು ಕಾಲ ವಾಹನ ಸವಾರರು ಟ್ರಾಫಿಕ್ನಲ್ಲಿ ಸಿಲುಕಿದ್ದರು. ಇದು ಹಲವರ ಆಕ್ರೋಶಕ್ಕೆ ಕಾರಣವಾಗಿತ್ತು.