ಹಿರಿಯ ಐಎಎಸ್ ಅಧಿಕಾರಿ ಎನ್.ಜಯರಾಮ್ ಅವರನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಆಯುಕ್ತ ಹುದ್ದೆಗೆ ನೇಮಿಸಿ ಸರ್ಕಾರ ಮಂಗಳವಾರ ಆದೇಶ ಹೊರಡಿಸಿದೆ.
ಬೆಂಗಳೂರು ಜಲಮಂಡಳಿ ಅಧ್ಯಕ್ಷರಾಗಿದ್ದ ಜಯರಾಮ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾರ್ಯದರ್ಶಿಯೂ ಆಗಿದ್ದಾರೆ.
ಸೆಪ್ಟೆಂಬರ್ 30ರಂದು ಬಿಡಿಎ ಆಯುಕ್ತರಾಗಿದ್ದ ಕುಮಾರ ನಾಯಕ್ ಅವರು ನಿವೃತ್ತರಾದ ನಂತರ ಆ ಸ್ಥಾನ ಖಾಲಿಯಾಗಿತ್ತು. ಬಳಿಕ ಈ ಹುದ್ದೆಗೆ ಜಯರಾಮ್ ಅವರನ್ನು ನಿಯೋಜಿಸಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಆದೇಶ ಹೊರಡಿಸಿದೆ.
ಜಯರಾಮ್ ಅವರು 2004ರ ಬ್ಯಾಚ್‌ನ ಐಎಎಸ್ ಅಧಿಕಾರಿಯಾಗಿದ್ದಾರೆ. ಪ್ರಸ್ತುತ ಮುಖ್ಯಮಂತ್ರಿಗಳ ಕಾರ್ಯದರ್ಶಿ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬೆಂಗಳೂರು ಜಲಮಂಡಳಿಯ ಅಧ್ಯಕ್ಷ ಸ್ಥಾನದಿಂದ ಬಿಡಿಎ ಆಯುಕ್ತರ ಹುದ್ದೆಗೆ ಸರ್ಕಾರ ಅ.2ರಂದು ವರ್ಗಾವಣೆ ಮಾಡಿ ಆದೇಶ ನೀಡಿದೆ.
ಅಧಿಕಾರ ಸ್ವೀಕರಿಸಿದ ಜಯರಾಮ್ ಅವರು ಪ್ರಾಧಿಕಾರದ ಅಧಿಕಾರಿಗಳೊಡನೆ ಸಭೆ ನಡೆಸಿದರು. ಬಿಡಿಎ ಕಾರ್ಯವೈಖರಿ, ಪ್ರಸ್ತುತ ಯೋಜನೆಗಳು ಹಾಗೂ ಮುಂಬರುವ ಯೋಜನೆಗಳ ಬಗ್ಗೆ ಮಾಹಿತಿ ಪಡೆದರು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಬೆಳ್ಳಂಬೆಳಗ್ಗೆ ಭೀಕರ ಅಪಘಾತ; 2 ವರ್ಷದ ಮಗು ಸೇರಿ ಇಬ್ಬರು ಸಾವು
ಈ ಹಿಂದೆ ಮೈಸೂರಿನಲ್ಲಿ ಆಯುಕ್ತರಾಗಿ, ಬೆಳಗಾವಿ ಜಿಲ್ಲಾಧಿಕಾರಿಯಾಗಿ, ಕಂದಾಯ ಇಲಾಖೆಯ ಕಾರ್ಯದರ್ಶಿಯಾಗಿ ಹಾಗೂ ಇತರ ಪ್ರಮುಖ ಹುದ್ದೆಗಳಲ್ಲಿ ಅವರು ಸೇವೆ ಸಲ್ಲಿಸಿದ್ದಾರೆ.