ಸಂಬಂಧಿಕರ ಮನೆಯಲ್ಲಿಯೇ ಕೋಟ್ಯಂತರ ರೂಪಾಯಿ ಬೆಲೆಬಾಳುವ ಚಿನ್ನ, ನಗದು ದೋಚಿ ಪರಾರಿಯಾಗಿದ್ದ ಆರೋಪಿಯನ್ನು ತಿಲಕನಗರ ಪೊಲೀಸರು ಬಂಧಿಸಿದ್ದಾರೆ.
ಮೊಹಮ್ಮದ್ ರಫೀಕ್(35) ಬಂಧಿತ ಆರೋಪಿ. ಬಂಧಿತನಿಂದ ₹1.10 ಕೋಟಿ ಮೌಲ್ಯದ 1.8 ಕೆಜಿ ಚಿನ್ನಾಭರಣ ಹಾಗೂ ₹74 ಸಾವಿರ ನಗದು ಹಣವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಏನಿದು ಪ್ರಕರಣ?
ಗುಜರಿ ವ್ಯಾಪಾರಿಯಾಗಿದ್ದ ಷಹನವಾಜ್ ತಿಲಕನಗರದ ಎಸ್.ಆರ್.ಕೆ ಗಾರ್ಡನ್ ಬಳಿ ತನ್ನ ಕುಟುಂಬದೊಂದಿಗೆ ವಾಸವಿದ್ದರು. ಇವರ ಕುಟುಂಬಕ್ಕೆ ಸಂಬಂಧಿಯಾಗಿದ್ದ ಆರೋಪಿ ಮೊಹಮ್ಮದ್ ರಫೀಕ್ ಆಗಾಗ ಇವರ ಮನೆಗೆ ಬಂದು ಹೋಗುತ್ತಿದ್ದನು. ಮೊದಲಿನಿಂದಲೂ ಷಹನವಾಜ್ ಅವರ ಐಷಾರಾಮಿ ಜೀವನದ ಬಗ್ಗೆ ಈತ ಅಸೂಯೆ ಹೊಂದಿದ್ದನು.
ಷಹನವಾಜ್ ಅವರ ಮನೆಯ ಬೀಗದ ಕೀ ಅಚ್ಚು ತೆಗೆದುಕೊಂಡು ತನ್ನ ಬಳಿ ಇಟ್ಟುಕೊಂಡಿದ್ದನು. ರಾಮನಗರದಲ್ಲಿ ಸಂಬಂಧಿಕರೊಬ್ಬರ ಮದುವೆ ಇದ್ದ ಕಾರಣ ಷಹನವಾಜ್ ಕುಟುಂಬ ತೆರಳಿತ್ತು. ಮನೆಯಲ್ಲಿ ಯಾರೂ ಇಲ್ಲದ ಸಂದರ್ಭ ಗಮನಿಸಿ ಆರೋಪಿ ನಕಲಿ ಕೀ ಬಳಸಿ, ಮನೆಗೆ ನುಗ್ಗಿ 2.5 ಕೆಜಿ ತೂಕದ ಚಿನ್ನಾಭರಣ, ₹8 ರಿಂದ ₹10 ಲಕ್ಷ ನಗದು ದೋಚಿ ಪರಾರಿಯಾಗಿದ್ದನು.
ಸೆಪ್ಟೆಂಬರ್ 25ರ ರಾತ್ರಿ ಷಹನವಾಜ್ ಕುಟುಂಬ ಮನೆಗೆ ಹಿಂತಿರುಗಿ ಬಂದಾಗ ಮನೆಯಲ್ಲಿ ಕಳ್ಳತನವಾಗಿರುವುದು ಗೊತ್ತಾಗಿದೆ.
ತಕ್ಷಣ ಷಹನವಾಜ್ ತಿಲಕ್ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ಆರೋಪಿಯನ್ನು ಪತ್ತೆ ಹಚ್ಚಿದ್ದಾರೆ.
ಈ ಸುದ್ದಿ ಓದಿದ್ದೀರಾ? ಸಾಲು ರಜೆಗಳ ಬಳಿಕ ಬೆಂಗಳೂರಿಗೆ ವಾಪಸ್ಸಾಗುತ್ತಿರುವ ಜನ; ವಾಹನ ಸಂಚಾರ ದಟ್ಟಣೆ ಹೆಚ್ಚಳ
ಆರೋಪಿಯಿಂದ ಸದ್ಯ ಪೊಲೀಸರು 1.8 ಕೆ.ಜಿ ಚಿನ್ನಾಭರಣ ಹಾಗೂ ₹74 ಸಾವಿರ ನಗದು ವಶಕ್ಕೆ ಪಡೆದುಕೊಂಡಿದ್ದಾರೆ. ಉಳಿದ ಹಣವನ್ನು ಆರೋಪಿ ತನ್ನ ಸಾಲಗಳನ್ನು ತೀರಿಸಲು ಬಳಸಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.
ಷಹನವಾಜ್ ಅವರ ಮನೆಯಲ್ಲಿ ಮದುವೆ ತಯಾರಿ ನಡೆಯುತ್ತಿದ್ದ ಹಿನ್ನೆಲೆ, ಚಿನ್ನಾಭರಣ ಹಾಗೂ ನಗದು ತಂದಿಡಲಾಗಿತ್ತು ಎನ್ನಲಾಗಿದೆ.