ಶಿಕ್ಷಣ ಇಲಾಖೆ ಹಾಗೂ ಸರ್ವ ಶಿಕ್ಷಣ ಅಭಿಯಾನದ ಮುಖ್ಯ ಗುರಿ ಪ್ರತಿಯೊಂದು ಮಗುವನ್ನು ಪ್ರಾಥಮಿಕ ಶಿಕ್ಷಣದ ಮುಖ್ಯ ವಾಹಿನಿಗೆ ಸೇರಿಸುವುದು, ಅವರಿಗೆ ಉಚಿತ ಮತ್ತು ಕಡ್ಡಾಯದ ಶಿಕ್ಷಣ ದೊರೆಯುವಂತೆ ಮಾಡುವುದಾಗಿದೆ. ಪ್ರತಿಯೊಂದು ಮಗುವೂ ಯಾವುದಾದರೊಂದು ಸರ್ಕಾರಿ ಶಾಲೆಗೆ ಸೇರಲೇಬೇಕು. ಈ ದಿಸೆಯಲ್ಲಿ ಗದಗ ಜಿಲ್ಲೆಯಲ್ಲಿ ಯಾವುದೇ ಮಗು ಶಾಲೆಯಿಂದ ಹೊರಗುಳಿಯಬಾರದೆನ್ನುವ ಕಳಕಳಿಯಿಂದ ಇಲಾಖೆಯ ಅಧಿಕಾರಿಗಳು ಶ್ರಮಿಸುತ್ತಿದ್ದಾರೆ.
ಗದಗ ಜಿಲ್ಲೆಯ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಂ ಎ ರಡ್ಡೇರ ಅವರು ತಾವಿರುವ ಮನೆಯಿಂದ ಹೊರವಲಯದಲ್ಲಿ ವಾಯುವಿಹಾರಕ್ಕೆ ತೆರಳಿದಾಗ ಗುಡಿಸಲೊಂದನ್ನು ಕಂಡರು. ಅಲ್ಲಿರುವ ಕುಟುಂಬವನ್ನು ಮಾತನಾಡಿಸಿದಾಗ ಅವರಿಗೆ ಇಬ್ಬರು ಮಕ್ಕಳಿರುವ ಸಂಗತಿ ತಿಳಿಯಿತು. ಅವರ ಶಿಕ್ಷಣದ ಬಗ್ಗೆ ವಿಚಾರಿಸಿದಾಗ ಶಾಲಾ ವಯಸ್ಸಿನ ಎರಡು ಮಕ್ಕಳು ಶಾಲೆಯ ಮುಖವನ್ನೇ ನೋಡಿರದಿರುವುದು ಅಚ್ಚರಿ ಮೂಡಿಸಿತು.
ಕುಮಾರ, ಸಂತೋಷ, ಶರಣಪ್ಪ, ಬಜಪ್ಪನವರ ಹಾಗೂ ಶ್ರಾವಣಿ ಶರಣಪ್ಪ ಭಜಪ್ಪನವರ ಇಬ್ಬರು ಮಕ್ಕಳು ಶಾಲೆಗೆ ಸೇರದಿರುವ ಕುರಿತು ಪೋಷಕರನ್ನು ವಿಚಾರಿಸಿದಾಗ ಎಲ್ಲಿಯಾದರೂ ಸಮೀಪದ ಶಾಲೆಗಳಲ್ಲಿ ಇವರ ದಾಖಲಾತಿ ಆಗಿದೆಯೇ ಹೇಗೆಂದು ಶಿಕ್ಷಣ ಸಂಯೋಜಕರಿಂದ ಇಲಾಖೆಯ ಅಧಿಕಾರಿಗಳಿಂದ ಪರಿಶೀಲನೆಗೆ ಒಳಪಡಿಸಿದರು. ಯಾವ ಶಾಲೆಯಲ್ಲಿಯೂ ಇವರ ಹೆಸರು ದಾಖಲಾಗದಿರುವುದನ್ನು ಮನವರಿಕೆ ಮಾಡಿಕೊಂಡರು.
ಆಧಾರ್ ಕಾರ್ಡ್ ಇಲ್ಲದಿರುವುದರಿಂದ ಶಾಲೆಗೆ ದಾಖಲು ಮಾಡಲು ಆಗಲಿಲ್ಲವೆಂದು ಪಾಲಕರು ತಿಳಿಸಿದಾಗ ಕೂಡಲೇ ಆಧಾರ್ ಕಾರ್ಡ್ ಮಾಡಿಸಲು ಕ್ರಮ ಕೈಗೊಳ್ಳಲಾಯಿತು. ಅಲ್ಲದೇ, ಅವರ ಗುಡಿಸಲಿನ ಸಮೀಪದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ-9 ಆದರ್ಶ ನಗರ ಗದಗ ಇಲ್ಲಿ ಸೆ.30ರಂದು ಉಪನಿರ್ದೇಶಕರು ಮಕ್ಕಳ ದಾಖಲಾತಿ ಮಾಡಿಸಿ ಅವರಿಗೆ ಸ್ಥಳದಲ್ಲಿಯೇ ಸಮವಸ್ತ್ರ ಮತ್ತು ಪುಸ್ತಕಗಳನ್ನು ವಿತರಣೆ ಮಾಡಿದರು. ಈ ಸಂದರ್ಭದಲ್ಲಿ ಡಯಟ್ ಉಪನ್ಯಾಸಕ ಗೋಪಾಲ ದಾಸರ ಹಾಗೂ ಸಿಆರ್‌ಪಿ ಜೊತೆಗಿದ್ದರು.
ಈ ಸುದ್ದಿ ಓದಿದ್ದೀರಾ? ಬಾಗಲಕೋಟೆ | 6 ವರ್ಷ ಕಳೆದರೂ ವಿದ್ಯುತ್ ಕಾಮಗಾರಿ ಅಪೂರ್ಣ; ರೈತರಿಗೆ ಅನ್ಯಾಯ: ಆರೋಪ
ಗದಗ ಜಿಲ್ಲೆಯಲ್ಲಿ ಸರ್ವ ಶಿಕ್ಷಣ ಅಭಿಯಾನ ಬಂದ ಮೇಲೆ ಶಾಲೆಯಿಂದ ಹೊರಗುಳಿದ ಇಂಥ ಮಕ್ಕಳನ್ನು ಗುಡಿಸಲುಗಳಲ್ಲಿ ಕಣ್ಣಿಗೆ ಕಾಣದೇ ಶಿಕ್ಷಣದಿಂದ ವಂಚಿತರಾಗಿದ್ದ ಮಕ್ಕಳನ್ನು ಒಂದು ತಿಂಗಳಲ್ಲಿ ವಿಶೇಷ ಅಭಿಯಾನ ನಡೆಸಿ ಶಾಲೆಗೆ ದಾಖಲು ಮಾಡಿಕೊಳ್ಳುವಂತೆ ಇಲಾಖೆಯ ಎಲ್ಲ ಅಧಿಕಾರಿಗಳಿಗೆ ಸೂಚಿಸಿದ್ದಾರೆ.