ತನ್ನ ತಾಳಕ್ಕೆ ತಕ್ಕಂತೆ ಕುಣಿಯದ ಸಮೂಹ ಮಾಧ್ಯಮಗಳ ದಮನಕ್ಕೆ ಸರ್ಕಾರವು ನಡೆಸಿರುವ ತನಿಖಾ ಏಜೆನ್ಸಿಗಳ ಸ್ವಚ್ಛಂದ ದುರ್ಬಳಕೆಯನ್ನು ಅಂತ್ಯಗೊಳಿಸಲು ಉನ್ನತ ನ್ಯಾಯಾಂಗ ಮಧ್ಯಪ್ರವೇಶ ಮಾಡುವಂತೆ ಹದಿನಾರು ಗಣ್ಯ ಪತ್ರಿಕಾ ಸಂಘ ಸಂಸ್ಥೆಗಳು ಸುಪ್ರೀಮ್ ಕೋರ್ಟಿನ ಮೊರೆ ಹೊಕ್ಕಿವೆ.
ಸುಪ್ರೀಮ್ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಅವರಿಗೆ ಪತ್ರ ಬರೆದಿರುವ ಈ ಸಂಘಟನೆಗಳು, ಪರಿಸ್ಥಿತಿ ಕೈಮೀರಿ ಹೋಗುವ ಮುನ್ನ ಮತ್ತು ಸರ್ವಾಧಿಕಾರಿ ಪೊಲೀಸ್ ಪ್ರಭುತ್ವವು ಸ್ವಾಭಾವಿಕವೆಂಬಂತೆ ಬೇರೂರಿ ನೆಲೆಗೊಳ್ಳುವ ಮುನ್ನ ಮಧ್ಯಪ್ರವೇಶ ಮಾಡಬೇಕು ಎಂದು ವಿನಂತಿ ಮಾಡಿವೆ.
ಪತ್ರಕರ್ತರಾಗಿ ಮತ್ತು ಸುದ್ದಿ ವೃತ್ತಿಪರರಾಗಿ ಸದುದ್ದೇಶದ ಯಾವುದೇ ತನಿಖೆಯೊಂದಿಗೆ ಸಹಕರಿಸಲು ನಾವು ಸದಾ ತಯಾರಿದ್ದೇವೆ. ಆದರೆ ಸಾರಾಸಗಟು ವಶಪಡಿಸಿಕೊಳ್ಳುವಿಕೆ ಮತ್ತು ವಿಚಾರಣೆಗಳು ಯಾವುದೇ ಜನತಾಂತ್ರಿಕ ದೇಶದಲ್ಲಿ ಒಪ್ಪಿತವಲ್ಲ. ಅದರಲ್ಲೂ ವಿಶ್ವ ಜನತಂತ್ರದ ಜನನಿ ಎಂದು ಎದೆತಟ್ಟಿಕೊಳ್ಳುವ ಪ್ರಭುತ್ವದಿಂದ ಇಂತಹ ಅತಿರೇಕಗಳು ಸ್ವೀಕಾರಾರ್ಹ ಅಲ್ಲವೇ ಅಲ್ಲ ಎಂದು ಈ ಸಂಘಟನೆಗಳು ಹೇಳಿವೆ.
ತಮಗೆ ಅನುಕೂಲಕರ ರೀತಿಯಲ್ಲಿ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ವರದಿಗಳು, ವಿಶ್ಲೇಷಣೆಗಳನ್ನು ಮಾಡಿಲ್ಲವೆಂಬ ಕಾರಣಕ್ಕೆ ಮೀಡಿಯಾವನ್ನು ಬೆದರಿಸಿ ಬಗ್ಗು ಬಡಿಯುವುದು ಸಮಾಜದ ಜನತಾಂತ್ರಿಕ ನೇಯ್ಗೆಗೆ ತೀವ್ರ ಹಾನಿ ಉಂಟು ಮಾಡುತ್ತದೆ. ಅಭಿವ್ಯಕ್ತಿ ಸ್ವಾತಂತ್ರ್ಯದ ಸಾಂವಿಧಾನಿಕ ಖಾತರಿಗೆ ಆಳುವವರಿಂದ ತೀವ್ರ ಧಕ್ಕೆಯಾಗತೊಡಗಿದೆ. ಮತ್ತೆ ಮತ್ತೆ ಅಧಿಕಾರ ದುರ್ಬಳಕೆಯ ಘಟನೆಗಳು ಜರುಗುತ್ತಿರುವ ಹಿನ್ನೆಲೆಯಲ್ಲಿ ಪೊಲೀಸರ ಅತಿರೇಕಗಳನ್ನು ತಡೆಯುವ ವಿಧಾನಗಳನ್ನು ರೂಪಿಸಬೇಕಿದೆ.
ಈ ಸುದ್ದಿ ಓದಿದ್ದೀರಾ? ‘Scanning is the new Spinning’ ಎನ್ನುವ ಅಮೆರಿಕೆಯ ಕಾರ್ಲ್ ಬೆಂಗಳೂರಲ್ಲಿ ಮಾಡುತ್ತಿರುವುದೇನು?
ಯುಎಪಿಎ ಅಡಿಯಲ್ಲಿ ಬಂಧಿಸಲಾಗುವ ಪತ್ರಕರ್ತರು ವರ್ಷಗಟ್ಟಲೆ ಜೈಲುಗಳಲ್ಲಿ ಕೊಳೆಯಬೇಕಿರುವ ಪರಿಸ್ಥಿತಿ ಇದೆ. ವಿಚಾರಣೆಗಳು ಕೂಡ ವರ್ಷಗಟ್ಟಲೆ ಲಂಬಿಸುತ್ತಿವೆ. ಜಾಮೀನು ನೀಡಲು ವರ್ಷಗಳು ಹಿಡಿಯದಿದ್ದರೂ, ತಿಂಗಳುಗಟ್ಟಲೆ ವಿಳಂಬವಾಗುತ್ತಿದೆ. ಈ ಮಾತುಗಳಿಗೆ ಸಿದ್ದಿಕ್ ಕಪ್ಪನ್ ಪ್ರಕರಣವೇ ಜೀವಂತ ನಿದರ್ಶನ.ಈತನಿಗೆ ಜಾಮೀನು ಸಿಗಲು ಎರಡು ವರ್ಷ ನಾಲ್ಕು ತಿಂಗಳುಗಳೇ ಹಿಡಿದವು.
‘ಭಯೋತ್ಪಾದನೆ ನಿಗ್ರಹ’ದ ಹೆಸರಿನಲ್ಲಿ ಮನುಷ್ಯಜೀವಗಳ ಕುರಿತು ಅದೆಷ್ಟು ನಿರ್ಲಕ್ಷ್ಯದಿಂದ ವರ್ತಿಸುತ್ತಿದ್ದಾರೆ ಎಂಬುದಕ್ಕೆ ಪೊಲೀಸ್ ಕಸ್ಟಡಿಯಲ್ಲಿ ಫಾದರ್ ಸ್ಟ್ಯಾನ್ ಸ್ವಾಮಿಯವರ ದುರಂತಮಯ ಸಾವು ನಮ್ಮ ಕಣ್ಣ ಮುಂದೆ ಹಸಿರಾಗಿದೆ. ಮೀಡಿಯಾ ವಿರುದ್ಧ ಪ್ರಭುತ್ವದ ಕ್ರಮಗಳು ಮಿತಿಮೀರಿದ್ದು, ಹೀಗೆಯೇ ಮುಂದುವರೆಯಲು ಬಿಟ್ಟರೆ ಪರಿಹಾರ ಕ್ರಮಗಳನ್ನು ಕೈಗೊಳ್ಳುವ ಹೊತ್ತಿಗೆ ಪರಿಸ್ಥಿತಿ ಕೈ ಮೀರಿ ಹೋದೀತು ಎಂಬುದು ನಮ್ಮ ಆತಂಕ. ಈ ಕಾರಣದಿಂದಾಗಿ ಉನ್ನತ ನ್ಯಾಯಾಂಗವು ತಕ್ಷಣವೇ ಮಧ್ಯಪ್ರವೇಶಿಸಿ ತನಿಖಾ ಏಜೆನ್ಸಿಗಳ ದಮನಕಾರಿ ದುರ್ಬಳಕೆಯನ್ನು ಅಂತ್ಯಗೊಳಿಸಬೇಕು ಎಂದು ಪತ್ರದಲ್ಲಿ ನಿವೇದಿಸಿಕೊಳ್ಳಲಾಗಿದೆ.
ದೇಶದ ಬಹುದೊಡ್ಡ ಸಂಖ್ಯೆಯ ಪತ್ರಕರ್ತರು ಬೆದರಿಕೆ ಮತ್ತು ದಮನಕಾರಿ ಕ್ರಮಗಳ ವಾತಾವರಣದಲ್ಲಿ ಕೆಲಸ ಮಾಡುತ್ತಿರುವುದು ಕಟು ವಾಸ್ತವ. ನಮ್ಮ ದೇಶಕ್ಕೊಂದು ಸಂವಿಧಾನವಿದೆ ಮತ್ತು ಸರ್ವರೂ ಅದಕ್ಕೆ ಉತ್ತರದಾಯಿಗಳು ಎಂಬ ಮೂಲಭೂತ ಸತ್ಯವನ್ನು ನ್ಯಾಯಾಂಗವು ಪ್ರಭುತ್ವದ ಮುಖಕ್ಕೆ ಹಿಡಿದು ಸಾರಬೇಕಿದೆ.
ಸರ್ಕಾರ ಮತ್ತು ನಾಗರಿಕರಿಗೆ ಪುರಾವೆ ಪ್ರಮಾಣಗಳ ಸಹಿತ ಸತ್ಯವನ್ನು ನುಡಿಯಬೇಕಾದದ್ದು ಪತ್ರಿಕಾಕ್ಷೇತ್ರದ ಕರ್ತವ್ಯ. ಹೀಗೆ ಮಾಡುವುದರಿಂದ ನಾಗರಿಕರು ತಮ್ಮ ಆಯ್ಕೆಗಳನ್ನು ಪೂರ್ವಗ್ರಹಗಳಿಲ್ಲದೆ ಮಾಡಲು ಬಂದೀತು ಮತ್ತು ಜನತಂತ್ರವನ್ನು ಸರಿಯಾದ ದಿಕ್ಕಿನಲ್ಲಿ ನಡೆಸಲು ಸಹಕಾರಿಯಾದೀತು ಎಂಬ ಮಾತುಗಳನ್ನು ಮುಖ್ಯ ನ್ಯಾಯಮೂರ್ತಿಗಳೇ ಹೇಳಿದ್ದಾಗಿ ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಕಾಯಿದೆ ಕಾನೂನು ಪ್ರಕಾರ ಸ್ಥಾಪಿತವಾಗಿರುವ ತನಿಖಾ ವಿಧಿವಿಧಾನದಿಂದ ತಪ್ಪಿಸಿಕೊಳ್ಳುವುದು ಈ ವಿನಂತಿಯ ಉದ್ದೇಶ ಅಲ್ಲ. ಆದರೆ ವಿಚಾರಣೆಯ ಹೆಸರಿನಲ್ಲಿ ಪತ್ರಕರ್ತರನ್ನು ಕರೆದೊಯ್ದು ಅವರ ಉಪಕರಣಗಳನ್ನು ವಶಪಡಿಸಿಕೊಳ್ಳುವಲ್ಲಿ ಹಗೆತನ ಮತ್ತು ಕಾಟ ಕೊಡುವ ಮನೋವೃತ್ತಿ ಅಡಗಿದೆ. ಪತ್ರಕರ್ತರು ಕಾಯಿದೆ ಕಾನೂನುಗಳಿಂದ ಮುಕ್ತರು ಅಥವಾ ಅವುಗಳಿಗಿಂತ ಮೇಲಿದ್ದಾರೆಂದು ನಾವು ಹೇಳುತ್ತಿಲ್ಲ. ಅದು ನಮ್ಮ ಬಯಕೆ ಅಥವಾ ಮನೋಭಾವವೂ ಅಲ್ಲ ಎಂದು ಅರಿಕೆ ಮಾಡಿಕೊಳ್ಳಲಾಗಿದೆ.
ಹಾಲಿ ನ್ಯೂಸ್ ಕ್ಲಿಕ್ ಪತ್ರಕರ್ತರ ಮೇಲಿನ ಪೊಲೀಸ್ ದಾಳಿಯಲ್ಲಿ ಆಗಿರುವಂತೆ ಪತ್ರಕರ್ತರ ಫೋನುಗಳು ಮತ್ತು ಲ್ಯಾಪ್ಟಾಪ್‌ಗಳನ್ನು ತಮಗೆ ಇಷ್ಟ ಬಂದಂತೆ ವಶಪಡಿಸಿಕೊಳ್ಳುವುದನ್ನು ತಡೆಯಲು ವಿಧಿ ವಿಧಾನಗಳನ್ನು ರೂಪಿಸಬೇಕು. ನ್ಯಾಯನೀಡಿಕೆಯ ರಥಚಕ್ರಗಳು ಚಲಿಸುತ್ತಿದ್ದಂತೆಯೇ ಪ್ರಭುತ್ವವು ಹದ್ದು ಮೀರಿ ಪ್ರವರ್ತಿಸತೊಡಗಿದೆ. ಪತ್ರಿಕಾವೃತ್ತಿಯ ಸಾಧನೋಪಕರಣಗಳ ವಶಪಡಿಸಿಕೊಳ್ಳುವುದರಿಂದ ಪತ್ರಿಕಾ ವೃತ್ತಿಯ ಕೆಲಸ ಕಾರ್ಯಗಳಿಗೆ ತೀವ್ರ ಅಡಚಣೆ ಉಂಟಾಗುತ್ತಿದೆ. ಸುದ್ದಿಮೂಲಗಳನ್ನು ಬಹಿರಂಗಪಡಿಸದೆ ರಕ್ಷಿಸಿಕೊಳ್ಳುವುದು ಪತ್ರಿಕಾಸ್ವಾತಂತ್ರ್ಯದ ಬಹುಮುಖ್ಯ ಮತ್ತು ಅತ್ಯಗತ್ಯವಾದ ಉಪಸಿದ್ಧಾಂತ. ಪೆಗಸಸ್ ಪ್ರಕರಣದಲ್ಲಿ ಖುದ್ದು ಸುಪ್ರೀಮ್ ಕೋರ್ಟ್ ಈ ಮಾತನ್ನು ಹೇಳಿರುವುದು ಗಮನಾರ್ಹ. ವ್ಯಕ್ತಿಗತ ಮಾಹಿತಿಗಳು, ಫೋಟೋಗ್ರ್ಯಾಫ್‌ಗಳು, ಕುಟುಂಬದ ಸದಸ್ಯರು ಮತ್ತು ಮಿತ್ರರೊಂದಿಗಿನ ಸಂಭಾಷಣೆಗಳು ಈ ಸಂಪರ್ಕ ಸಾಧನಗಳಲ್ಲಿರುತ್ತವೆ. ಇಂತಹ ಮಾಹಿತಿಯನ್ನು ವಶಪಡಿಸಿಕೊಳ್ಳುವುದು ಯಾವ ಕಾರಣದಿಂದಲೂ ಸಮರ್ಥನೀಯ ಅಲ್ಲ ಎಂದು ಈ ಸಂಘಟನೆಗಳು ನಿವೇದಿಸಿಕೊಂಡಿವೆ.
ಪತ್ರಕರ್ತರ ವಿಚಾರಣೆಗೆ ಮತ್ತು ಅವರಿಂದ ಸಾಧನ ಸಲಕರಣೆಗಳನ್ನು ವಶಪಡಿಸಿಕೊಳ್ಳುವುದಕ್ಕೆ ಮಾರ್ಗಸೂಚಿಗಳನ್ನು ರೂಪಿಸಬೇಕು. ಈ ಸಾಧನಗಳನ್ನು ವಶಪಡಿಸಿಕೊಂಡು ಅಕ್ರಮವಾಗಿ ಅವುಗಳಿಗೆ ಅನಪೇಕ್ಷಣೀಯ ಮತ್ತು ಅಪಾಯಕರ ಮಾಹಿತಿಗಳನ್ನು ಸೇರಿಸಿ ಅವುಗಳನ್ನು ಪತ್ರಕರ್ತರ ವಿರುದ್ಧವೇ ಬಳಸುವುದನ್ನು ತಡೆಯಬೇಕಿದೆ. ಪೆಗಸಸ್ ಪ್ರಕರಣದ ಉದಾಹರಣೆ ನಮ್ಮ ಮುಂದಿದೆ.
ಪತ್ರಕರ್ತರು ಮತ್ತು ಅವರ ಕೆಲಸ ಕಾರ್ಯಗಳ ವಿರುದ್ಧ ಅಪೂರ್ಣ ಮತ್ತು ಅಕ್ರಮ ವಿಚಾರಣೆಗಳನ್ನು ನಡೆಸಿ ನ್ಯಾಯಾಲಯಗಳನ್ನು ಉದ್ದೇಶಪೂರ್ವಕವಾಗಿ ತಪ್ಪುದಾರಿಗೆಳೆಯುವ ಮತ್ತು ಕಾಯಿದೆ ಕಾನೂನುಗಳ ವ್ಯಾಪ್ತಿಯನ್ನು ಉಲ್ಲಂಘಿಸುವ ಅಧಿಕಾರಿಗಳು ಹಾಗೂ ಸರ್ಕಾರಿ ತನಿಖಾ ಏಜೆನ್ಸಿಗಳಿಗೆ ಉತ್ತರದಾಯಿತ್ವವನ್ನು ನಿಗದಿಪಡಿಸಲು ಮಾರ್ಗೋಪಾಯಗಳನ್ನು ಕಂಡು ಹಿಡಿಯಬೇಕಿದೆ ಎಂದೂ ಪತ್ರಕರ್ತರ ಸಂಘಟನೆಗಳು ಮುಖ್ಯ ನ್ಯಾಯಮೂರ್ತಿಯವರನ್ನು ಕೋರಿವೆ.
ಪತ್ರಕ್ಕೆ ಡಿಜಿಪಬ್ ನ್ಯೂಸ್ ಇಂಡಿಯಾ ಫೌಂಡೇಶನ್, ಇಂಡಿಯನ್ ವುಮೆನ್ಸ್ ಪ್ರೆಸ್ ಕಾರ್ಪ್ಸ್, ಪ್ರೆಸ್ ಕ್ಲಬ್ ಆಫ್ ಇಂಡಿಯಾ, ಫೌಂಡೇಶನ್ ಫಾರ್ ಮೀಡಿಯಾ ಪ್ರೊಫೆಷನಲ್ಸ್, ಚಂಡೀಗಢ ಪ್ರೆಸ್ ಕ್ಲಬ್, ಪತ್ರಕರ್ತರ ರಾಷ್ಟ್ರೀಯ ಒಕ್ಕೂಟ, ದೆಹಲಿ ಪತ್ರಕರ್ತರ ಒಕ್ಕೂಟ, ಕೇರಳದ ಕಾರ್ಯನಿರತ ಪತ್ರಕರ್ತರ ಒಕ್ಕೂಟ, ಬೃಹನ್‌ಮುಂಬೈ ಯೂನಿಯನ್ ಆಫ್ ಜರ್ನಲಿಸ್ಟ್ಸ್, ಫ್ರೀ ಸ್ಪೀಚ್ ಕಲೆಕ್ಟಿವ್, ಮುಂಬೈ ಪ್ರೆಸ್ ಕ್ಲಬ್, ಅರುಣಾಚಲ ಪ್ರದೇಶ ಯೂನಿಯನ್ ಆಫ್ ವರ್ಕಿಂಗ್ ಜರ್ನಲಿಸ್ಟ್ಸ್, ಪ್ರೆಸ್ ಅಸೋಸಿಯೇಷನ್, ಗುವಾಹಟಿ ಪ್ರೆಸ್ ಕ್ಲಬ್, ಇಂಡಿಯನ್ ಜರ್ನಲಿಸ್ಟ್ಸ್ ಯೂನಿಯನ್, ಮತ್ತು ನೆಟ್‌ವರ್ಕ್ ಆಫ್ ವುಮೆನ್ ಇನ್ ಮೀಡಿಯಾ ಇಂಡಿಯಾ ಸಹಿ ಮಾಡಿದೆ.
ಪತ್ರಕರ್ತರ ಮೇಲೆ ನಡೆಯುವ ಇಂತಹ ಕೃತ್ಯಗಳನ್ನು ಪತ್ರಕರ್ತರು ಮಾತ್ರವಲ್ಲ , ಪ್ರತಿಯೊಬ್ಬ ಪ್ರಜೆಯೂ ಪ್ರಶ್ನಿಸಬೇಕು. ಸರ್ಕಾರದ ಧೋರಣೆಯನ್ನು ಖಂಡಿಸಬೇಕು.